Advertisement

ಹದಗೆಟ್ಟ ದಾಂಪತ್ಯ ಜೀವನ ಎಲ್ಲರಿಗೂ ನರಕವೇ…

11:10 AM Oct 07, 2019 | sudhir |

ನಿಮ್ಮ ಆಯ್ಕೆಗಳಿಂದಾಗಿ ಇತರರು, ಅದರಲ್ಲೂ ಮುಖ್ಯವಾಗಿ ನಿಮ್ಮ ಪ್ರೀತಿಪಾತ್ರರು ನರಳುವಂತಾಗಬಾರದು.

Advertisement

ಬದಲಾವಣೆಯೆನ್ನುವುದು ಅಷ್ಟು ಸುಲಭದ ಕ್ರಿಯೆಯಲ್ಲ. ವರ್ಷಗಳವರೆಗೆ ಒಬ್ಬರ ಮೇಲೆ ಒಬ್ಬರು ದ್ವೇಷಕಾರುತ್ತಾ ಬದುಕಿ ಅಭ್ಯಾಸ ಬೆಳೆಸಿಕೊಂಡವರು ರಾತ್ರೋರಾತ್ರಿ ಆದರ್ಶ ದಂಪತಿಗಳಾಗುವುದಕ್ಕೂ ಸಾಧ್ಯವಿಲ್ಲ. ಇದಕ್ಕೆಲ್ಲ ಸಮಯ ಹಿಡಿಯುತ್ತದೆ. ಆದರೆ ದೊಡ್ಡ ಖಾಯಿಲೆಗೆ ದೀರ್ಘ‌ಕಾಲದ ಚಿಕಿತ್ಸೆ ಅತ್ಯವಶ್ಯಕ.

ನಾವೆಲ್ಲ ದಾಂಪತ್ಯ ಜೀವನಕ್ಕೆ ಕಾಲಿಡಲು ಹಲವು ಕಾರಣಗಳು ಇರುತ್ತವೆ. ಬಹುತೇಕರು ಮದುವೆಯಾಗಲೇಬೇಕೆಂಬ ಅನಿವಾರ್ಯತೆಯಿಂದ ಮದುವೆಯಾಗುತ್ತಾರೆ, ಕೆಲವರು ಪ್ರೀತಿಗಾಗಿ ಮದುವೆಯಾಗುತ್ತಾರೆ, ಕೆಲವರು ಆರ್ಥಿಕ, ಮಾನಸಿಕ ಭದ್ರತೆಗಾಗಿ ಮದುವೆ ಆಗುತ್ತಾರೆ, ಕೆಲವರು ಏಕಾಂಗಿತನದಿಂದ ತಪ್ಪಿಸಿಕೊಳ್ಳಲು ಮದುವೆಯಾಗುತ್ತಾರೆ, ಮತ್ತೂ ಕೆಲವರು ಬರೀ ಸೆಕ್ಸ್‌ಗಾಗಿ ಮದುವೆಯಾಗುವುದೂ ಉಂಟು.

ಆದರೆ ಮದುವೆಯಾದ ಕೆಲ ಸಮಯದ ನಂತರ ಅನೇಕರಿಗೆ ತಮ್ಮ ಆಯ್ಕೆ ತಪ್ಪಾಗಿದೆ ಎಂದು ಭಾಸವಾಗತೊಡಗುತ್ತದೆ, ಸಂಸಾರದಲ್ಲಿ ಪ್ರೀತಿ ಮಾಸುತ್ತಿದೆ ಎನ್ನುವುದು ಗೋಚರಿಸಲಾರಂಭಿಸುತ್ತದೆ. ಮದುವೆಯಾಗಿಯೂ ಒಂಟಿ ಭಾವ ಅನುಭವಿಸುವುದಕ್ಕಿಂತ ಏಕಾಂಗಿಯಾಗಿ ಉಳಿದುಬಿಟ್ಟರೆ ಚೆನ್ನಾಗಿತ್ತು ಅನಿಸತೊಡಗುತ್ತದೆ. ಸೆಕ್ಸ್‌ ಕೂಡ ಅಂದುಕೊಂಡಷ್ಟು ಯಾವಾಗಲೂ ಚೆನ್ನಾಗಿ ಇರುವುದೂ ಇಲ್ಲ.

“Happily ever after” ಎಂಬ ಕನಸು ಮುರಿದು ಬೀಳಲಾರಂಭಿಸುತ್ತದೆ. ನಿರಂತರ ಅಸಹನೆ-ಅತೃಪ್ತಿಯ ಭಾವನೆಯಲ್ಲಿ ನಿಮ್ಮ ಮನಸ್ಸು ಒದ್ದಾಡುತ್ತಿರುತ್ತದೆ. ಸರಿಯಾದ ವ್ಯಕ್ತಿಯೊಂದಿಗೆ ಮದುವೆಯಾಗಲಿಲ್ಲ ಎಂಬ ನಿಮ್ಮಲ್ಲಿನ ಕುದಿವ ಅಸಮಾಧಾನದಿಂದ ಕೇವಲ ನಿಮಗಷ್ಟೇ ಅಲ್ಲ, ನಿಮ್ಮ ಸುತ್ತಮುತ್ತಲಿರುವವರಿಗೂ ಅದರ ಬಿಸಿ ತಟ್ಟಲಾರಂಭಿಸುತ್ತದೆ.

Advertisement

ನಮ್ಮಲ್ಲಿ ಅನೇಕರು ಈ ರೀತಿ ದುಃಖ ತುಂಬಿದ ದಾಂಪತ್ಯದಲ್ಲಿ,
ಬಿಡಿಸಲಾಗದ ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿ ಒದ್ದಾಡುತ್ತಿರಬಹುದು. ಅಥವಾ ಆ ರೀತಿ ಒದ್ದಾಡುತ್ತಿರುವ ಅನೇಕರು ನಮ್ಮ ಸುತ್ತಲೂ
ಇರಬಹುದು. ಈ ರೀತಿ ತಮ್ಮ ಜೀವನದೊಂದಿಗೆ ಕಾಂಪ್ರಮೈಸ್‌ ಮಾಡಿಕೊಂಡವರು ಮೇಲ್ನೋಟಕ್ಕೆ ಎಷ್ಟೇ ನಗುನಗುತ್ತಾ ಕಾಣಿಸಿಕೊಳ್ಳುತ್ತಿರಬಹುದು. ಆದರೆ ಹದಗೆಟ್ಟ ದಾಂಪತ್ಯ ಜೀವನವು ಅವರನ್ನು
ಒಳಗಿನಿಂದ ಸುಡುತ್ತಾ ಹೋಗುತ್ತಿರುತ್ತದೆ.

“ನಾವು ಮಕ್ಕಳ ಮುಖ ನೋಡಿಕೊಂಡು ಜತೆಯಲ್ಲಿ ಇದ್ದೇವಷ್ಟೇ. ಇಲ್ಲದಿದ್ದರೆ ಎಂದೋ ಪ್ರತ್ಯೇಕವಾಗಿ ಇರುತ್ತಿದ್ದೆವು’ ಎಂದು ಕೆಲವರು ಹೇಳುತ್ತಾರೆ. ಆದರೆ ಮಕ್ಕಳಿಗೆ ಅಸಹನೆ, ಅಸಮಾಧಾನ, ವೈಮನಸ್ಸು, ಜಗಳ, ಅಳು, ಗೋಳಾಟ ತುಂಬಿದ ವಾತಾವರಣಕ್ಕಿಂತ ಮತ್ತೂಂದು ವಿಷಮಯ ವಾತಾವರಣ ಇಲ್ಲ. ಇಂಥ ವಾತಾವರಣದಲ್ಲಿ ಬೆಳೆಯುವ ಮಕ್ಕಳು ತಮ್ಮ ಪೋಷಕರನ್ನು ದ್ವೇಷಿಸುವುದಷ್ಟೇ ಅಲ್ಲದೆ, ಪೋಷಕರ ತೊಂದರೆಗಳಿಗೆ ತಾವೇ ಕಾರಣ, ತಮ್ಮಿಂದಲೇ ಮನೆಯಲ್ಲಿ ಇಷ್ಟೊಂದು ಕಲಹವಿದೆ ಎಂಬ ಪಾಪ ಪ್ರಜ್ಞೆ ಬೆಳೆಸಿಕೊಳ್ಳುವ ಸಾಧ್ಯತೆ ಅಧಿಕ.

ಇದಕ್ಕಿಂತಲೂ ಭಯಾನಕವೆಂದರೆ, ಈ ಮಕ್ಕಳಿಗೆ “ಮದುವೆ’ “ದಾಂಪತ್ಯ’ ಎನ್ನುವ ಪದ್ಧತಿಯ ಮೇಲೆಯೇ ಕೆಟ್ಟ ಭಾವನೆ ಬೆಳೆದು ಬಿಡುತ್ತದೆ. ಅವರು ಮದುವೆಯೆಂಬ ಹೆಸರು ಕೇಳಿದರೇ ಹೆದರುವಂತಾಗುತ್ತದೆ.
ನೀವು ಯಾವ ಕಾರಣಕ್ಕಾಗಿ ಮದುವೆಯಾದಿರಿ ಎನ್ನುವುದು ಮುಖ್ಯ ಅಲ್ಲ. ಕೆಟ್ಟ ದಾಂಪತ್ಯವಿದ್ದರೂ ಏಕೆ ಇಷ್ಟು ವರ್ಷ ಒಬ್ಬರನ್ನೊಬ್ಬರು ಸಹಿಸಿಕೊಂಡಿದ್ದೀರಿ ಎನ್ನುವುದೂ ಈಗ ಮುಖ್ಯವಲ್ಲ. ದಾಂಪತ್ಯ ಜೀವನದಲ್ಲಿ ಜಗಳ-ವೈಮನಸ್ಯವೆಲ್ಲ ಮುಗಿಯಬೇಕು ಎನ್ನುವುದು ನಿಮಗೆ ಮುಖ್ಯವಾಗಿದ್ದರೆ, ಜೊತೆಯಲ್ಲಿ ಕುಳಿತು ಸಮಸ್ಯೆಗಳನ್ನೆಲ್ಲ ಬಗೆಹರಿಸಿಕೊಳ್ಳಿ. ಪ್ರಾಮಾಣಿಕವಾಗಿ ನಿಮ್ಮ ಮನಸ್ಸನ್ನು ಪರಸ್ಪರ ತೆರೆದಿಡಿ.

ಬದಲಾವಣೆಯೆನ್ನುವುದು ಅಷ್ಟು ಸುಲಭದ ಕ್ರಿಯೆಯಲ್ಲ. ವರ್ಷಗಳವರೆಗೆ ಒಬ್ಬರ ಮೇಲೆ ಒಬ್ಬರು ದ್ವೇಷಕಾರುತ್ತಾ ಬದುಕಿ ಅಭ್ಯಾಸ ಬೆಳೆಸಿಕೊಂಡವರು ರಾತ್ರೋರಾತ್ರಿ ಆದರ್ಶ ದಂಪತಿಗಳಾಗುವುದಕ್ಕೂ ಸಾಧ್ಯವಿಲ್ಲ. ಇದಕ್ಕೆಲ್ಲ ಸಮಯ ಹಿಡಿಯುತ್ತದೆ. ಆದರೆ ದೊಡ್ಡ ಖಾಯಿಲೆಗೆ ದೀರ್ಘ‌ಕಾಲದ ಚಿಕಿತ್ಸೆ ಅತವಶ್ಯಕ.

“ಮನುಷ್ಯ ಬದಲಾಗಲು ಧೈರ್ಯಬೇಕು. ಬದಲಾಯಿಸಲು ಸಾಧ್ಯವಿಲ್ಲದಂಥ ಸಂಗತಿಗಳನ್ನು ಒಪ್ಪಿಕೊಳ್ಳಲು ಪ್ರಶಾಂತ ಮನಸ್ಥಿತಿ ಬೇಕು. ಇವೆರಡರ ನಡುವಿನ ಅಂತರವನ್ನು ತಿಳಿದುಕೊಳ್ಳಲು ಪ್ರಜ್ಞೆಬೇಕು.’
ನೆನಪಿರಲಿ, ನಿಮ್ಮ ಆಯ್ಕೆಗಳಿಂದಾಗಿ ಇತರರು, ಅದರಲ್ಲೂ ಮುಖ್ಯವಾಗಿ ನಿಮ್ಮ ಪ್ರೀತಿ ಪಾತ್ರರು ನರಕ ಅನುಭವಿಸಬಾರದು.

ನೋ ಎಂದರೆ ನರಕವಲ್ಲ!
ಕೆಲವರಿಗೆ ಇನ್ನೊಬ್ಬರನ್ನು ಮೆಚ್ಚಿಸುವ, ಅವರಿಂದ ಮೆಚ್ಚುಗೆ ಗಳಿಸುವ ಹಪಾಹಪಿ ಎಷ್ಟಿರುತ್ತದೆ ಎಂದರೆ, ಎಲ್ಲದಕ್ಕೂ “ಯಸ್‌’ ಎನ್ನುತ್ತಿರುತ್ತಾರೆ. “ನೋ’ ಎನ್ನಲಾಗದೇ ಅನವಶ್ಯಕ ಕೆಲಸಗಳನ್ನು ಹೊತ್ತು ಒದ್ದಾಡುತ್ತಲೇ ಬದುಕು ಮುಗಿಸಿಬಿಡುತ್ತಾರೆ.

“ನೋ’ ಎಂದು ಹೇಳುವುದು ಒಂದು ಕಲೆ. ಅದು ಕಲೆಯಷ್ಟೇ ಅಲ್ಲ, ಅದೊಂದು ಕೌಶಲ. ಕೌಶಲ್ಯ ಸಾಧಿಸಬೇಕೆಂದರೆ ನಿರಂತರ ಅಭ್ಯಾಸ ಮುಖ್ಯ.
ಸಹಾಯ ಮಾಡುವುದರಿಂದ, ಸೇವೆ ಮಾಡುವುದರಿಂದ ಎದುರಿನವರಿಗೂ ಖುಷಿಯಾಗುತ್ತದೆ, ನಮಗೂ ಹಿತವೆನಿಸುತ್ತದೆ ಎನ್ನುವುದೇನೋ ಸರಿ. ಆದರೆ, ಬಹುತೇಕ ಬಾರಿ ಈ ರೀತಿಯ “ಯಸ್‌’
ಮನಸ್ಥಿತಿಯು ನಮ್ಮನ್ನು ಹೈರಾಣಾಗಿಸುತ್ತದೆ. ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಅಮೂಲ್ಯ ಸಮಯವನ್ನೂ,
ಸಂಪನ್ಮೂಲವನ್ನೂ ಅದು ಹಿಂಡಿಹಿಪ್ಪೆ ಮಾಡುತ್ತದೆ.

ನಮಗೆ ಇಷ್ಟವಿಲ್ಲದ ಯಾವುದೇ ಒಂದು ಕೆಲಸ ಎದುರಾಯಿತು ಎಂದು ಕೊಳ್ಳಿ, ನಮ್ಮ ಮನಸ್ಸು “ನೋ’ ಎನ್ನಲು ಬಯಸುತ್ತಿರುತ್ತದೆ. ಆದರೆ, ಎದುರಿನವರಿಗೆ ನಮ್ಮಲ್ಲಿನ ಯಾವ ಬಟನ್‌ ಒತ್ತಿದರೆ ನಾವು ಯಸ್‌ ಎನ್ನುತ್ತೇವೆ ಎನ್ನುವುದು ಕರಗತವಾಗಿರುತ್ತದೆ! ಅದ್ಹೇಗೋ ನಮ್ಮಿಂದ ಎಸ್‌ ಎನಿಸಿಬಿಡುತ್ತಾರೆ.

ಎಲ್ಲದಕ್ಕೂ “ಎಸ್‌’ ಎನ್ನುವ ಜನರ ಸಮಸ್ಯೆಯೇನೆಂದರೆ, ಅವರು ಒಮ್ಮೆ “ನೋ’ ಎಂದರೆ ಸಾಕು, ಜನರು ಅವರ ಮೇಲೆ ಮುನಿಸಿಕೊಳ್ಳುತ್ತಾರೆ. ತಮಾಷೆಯೆಂದರೆ, ಹಿಂದೆ ಈ ವ್ಯಕ್ತಿ ಎಷ್ಟೋ ಬಾರಿ ಎಸ್‌ ಎಂದಿರುತ್ತಾನೆ, ಆದರೆ ಈತ ನೋ ಅಂತ ಹೇಳಿದ್ದು ಮಾತ್ರ ಎದುರಿನವರಿಗೆ ನೆನಪಿನಲ್ಲಿ ಉಳಿದುಬಿಡುತ್ತದೆ!

ಬಹುತೇಕರು ಮತ್ತೂಬ್ಬರಿಗೆ ಸಹಾಯ ಮಾಡುವುದು, ಅವರು ತಮ್ಮನ್ನು ಮೆಚ್ಚಲಿ ಎನ್ನುವ ಕಾರಣಕ್ಕಾಗಿ. ಮೆಚ್ಚುಗೆ ಪಡೆಯಲು ತುದಿಗಾಲಲ್ಲಿ ನಿಂತವರನ್ನು ಜನರು ದುರ್ಬಳಕೆ ಮಾಡಿಕೊಳ್ಳುವುದೇ ಹೆಚ್ಚು. ನಾವೆಲ್ಲ ಬೆಳೆದು ಬಂದ ಸಂಸ್ಕೃತಿ ಹೇಗಿದೆ ಎಂದರೆ, ಇತರರ ಸೇವೆಯೇ ಜೀವನದ ಮಹೋನ್ನತ ಗುರಿ ಎಂದು ನಮಗೆ ಕಲಿಸಲಾಗಿದೆ. ಹಾಗೆ ಮಾಡದೇ ಇದ್ದರೆ ಅದನ್ನು “ಸ್ವಾರ್ಥ’ ಎಂದೇ ಸಮಾಜ ನೋಡುತ್ತದೆ. ಆದರೆ, ನಮಗೆ ಹಾನಿಯಾದರೂ ಲೆಕ್ಕಿಸದೇ, ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ನಮ್ಮ ಸಂಸ್ಕೃತಿ ಎಂದಿಗೂ ಹೇಳಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ. ನೋ ಎಂದು ಹೇಳುವುದು ಸ್ವಾರ್ಥವಲ್ಲ. ಅದು ಸ್ವ-ಕಾಳಜಿ. ಎಲ್ಲರಿಗೂ, ಎಲ್ಲದಕ್ಕೂ “ಎಸ್‌’ ಅಥವಾ “ಹೂಂ’ ಎಂದು ಹೇಳುವುದು ಆ ಕ್ಷಣಕ್ಕೆ ನಿಮಗೆ ಮತ್ತು ಎದುರಿನವರಿಗೆ ಖುಷಿ ಹುಟ್ಟಿಸಬಹುದು. ಆದರೆ, ಇದು ಆಂತರಿಕವಾಗಿ ನಿಮ್ಮನ್ನು ತಿನ್ನುತ್ತಾ ಹೋಗುತ್ತದೆ, ಒಂದಲ್ಲ ಒಂದು ದಿನ ಅದು ನಿಮ್ಮನ್ನು ಬಲವಾಗಿ ಘಾಸಿಗೊಳಿಸುತ್ತದೆ.

ಯಾರು ತಮಗೆ ತಾವು ಸಹಾಯ ಮಾಡಿಕೊಳ್ಳುತ್ತಾರೋ, ಅವರ ಸಹಾಯಕ್ಕೆ ದೇವರೂ ಮುಂದಾಗುತ್ತಾನೆ ಎನ್ನುವ ಮಾತಿದೆ. “ನೋ’,
“ಇಲ್ಲ’ ಎಂದು ಹೇಳುವುದು ಅತಿ ದೊಡ್ಡ ಕಲೆ. ಹೀಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳುವುದು ನಿಮಗೆ ನೀವು ಕೊಟ್ಟುಕೊಳ್ಳುವ ಅತಿ ದೊಡ್ಡ ಗಿಫ್ಟ್.
ಈ ಕೌಶಲ ಅಥವಾ ಕಲೆ ನಿಮಗೆ ಸಿದ್ಧಿಸದೇ ಹೋದರೆ, ನೀವು
ಮನಸ್ಸಿಲ್ಲದ ಕೆಲಸಗಳಿಗೆ, ಅನಗತ್ಯ ಜವಾಬ್ದಾರಿಗಳಿಗೆ ಒಪ್ಪಿಕೊಂಡು ಒದ್ದಾಡಬೇಕಾಗುತ್ತದೆ. ಕೆವರಿಗೆ “ನೋ’ ಎಂದು ಹೇಳುವುದಕ್ಕೆ ಭಯವಾಗುತ್ತದೆ. ಇದರಿಂದ ಎದುರಿನವರ ಮನಸ್ಸಿಗೆ ಎಷ್ಟು ಬೇಜಾರಾಗುತ್ತದೇನೋ ಎನ್ನುವ ಭಯ ಅವರಿಗೆ ಇರುತ್ತದೆ. ಅಂಥವರಿಗೆ ನನ್ನ ಸಲಹೆ- “ನೋ’ ಎಂದು ನೀವು ನಿಷ್ಠುರವಾಗಿ ಹೇಳಬೇಕಾಗಿಲ್ಲ. ತುಸು ಮಂದಹಾಸದೊಂದಿಗೆ, ಸೌಮ್ಯವಾಗಿಯೇ ಹೇಳಬಹುದು. ನೀವೇಕೆ “ನೋ’ ಎನ್ನುತ್ತಿದ್ದೀರಿ ಎಂದು ಪುಟಗಟ್ಟಲೇ ವಿವರಣೆ ಕೊಡಬೇಡಿ. ನಿಮ್ಮ ವಿವರಣೆ ಚಿಕ್ಕಚೊಕ್ಕವಾಗಿರಲಿ.
ಆ ಕ್ಷಣಕ್ಕೆ ನಿಮಗೆ ಏನು ನಿರ್ಧಾರ ತೆಗೆದುಕೊಳ್ಳಲು ತೋಚದೇ ಹೋದರೆ, ಸ್ವಲ್ಪ ಕಾಲಾವಕಾಶ ಕೇಳಿ. ನಂತರ ಒಂದು ನಿರ್ಧಾರಕ್ಕೆ ಬನ್ನಿ. ನಿಮಗೆ ಆ ಕೆಲಸ ಮಾಡಲು ಏಕೆ ಸಾಧ್ಯವಿಲ್ಲ ಎನ್ನುವುದನ್ನು ಚಿಕ್ಕದಾಗಿ ವಿವರಿಸಿ. ಅನವಶ್ಯಕ ವಿವರಣೆ ಬೇಡವೇ ಬೇಡ. ಏಕೆಂದರೆ, ನೀವು ಉದ್ದುದ್ದಕ್ಕೆ ವಿವರಣೆ ಕೊಡುತ್ತಾ ಹೋದಂತೆಲ್ಲ, ಜನರು ನಿಮ್ಮಿಂದ ತಮ್ಮ ಕೆಲಸ ಮಾಡಿಸಿಕೊಳ್ಳುವ ದಾರಿಯನ್ನು ಆ ವಿವರಣೆಯಲ್ಲೇ ಹುಡುಕಿಬಿಡುತ್ತಾರೆ. ನೆನಪಿರಲಿ, ಇದು ನಿಮ್ಮ ಸಮಯ. ನಿಮ್ಮ ಸಮಯಕ್ಕೆ, ನಿಮ್ಮ ಶ್ರಮಕ್ಕೆ, ನಿಮ್ಮ ಆದ್ಯತೆಗಳಿಗೆ ಬೆಲೆ ಇದೆ. ಅದಕ್ಕೆ ನೀವೇ ಗೌರವ ಕೊಡದಿದ್ದರೆ, ಬೇರೆ ಯಾರೂ ಕೊಡುವುದಿಲ್ಲ!

– ಪೂಜಾ ಬೇಡಿ

Advertisement

Udayavani is now on Telegram. Click here to join our channel and stay updated with the latest news.

Next