ಬೆಂಗಳೂರು: ಒಂದು ವರ್ಷದ ಮಗುವಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಬಳಸಿದ್ದ ಹೀಲಿಯಂ ಬಲೂನ್(ಗ್ಯಾಸ್‌ಗಳಿಂದ ತುಂಬಿದ ಬಲೂನ್)ಗಳು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ ಐವರು ಗಾಯಗೊಂಡಿ ರುವ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯ ಬೆಳತ್ತೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ದುರ್ಘಟನೆಯಲ್ಲಿ ಎಚ್‌ಎಎಲ್ ಸಿಬ್ಬಂದಿ ವಿನಯ್ ಆದಿತ್ಯ ಕುಮಾರ್ (44), ಅವರ ಮಕ್ಕಳಾದ ದಯಾನ್ ಚಾಂದ್(7), ಸೋಯಿಲ್ ಕುಮಾರ್ (3) ಹಾಗೂ ಸ್ಥಳೀಯ ನಿವಾಸಿಗಳಾದ ಇಶಾನ್(2), ಸಂಜಯ್(8) ಗಾಯ ಗೊಂಡಿದ್ದಾರೆ.
ಐವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಶನಿವಾರ ರಾತ್ರಿ ಬೆಳತ್ತೂರಿನಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ವಿನಯ್ ಆದಿತ್ಯ ಕುಮಾರ್, ಅವರ ಮಕ್ಕಳು ಹಾಗೂ ಇತರೆ ಮಕ್ಕಳು ಹೀಲಿಯಂ ಬಲೂನ್ ಬಳಸಿ ಆಟವಾಡುತ್ತಿದ್ದರು. ಬಲೂನ್‌ಗಳನ್ನು ಮನೆಯ ಮೆಟ್ಟಿಲುಗಳ ಮೇಲೆ ಕೊಂಡೊಯ್ಯುವಾಗ ಮನೆ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ಬಲೂನ್‌ಗಳು ಸ್ಫೋಟಗೊಂಡಿವೆ. ಅದರಿಂದ ಐವರಿಗೆ ಸುಟ್ಟಗಾಯಗಳಾಗಿವೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ವೈಟ್ ಫೀಲ್ಡ್ ಡಿಸಿಪಿ ಸಂಜೀವ್ ಎಂ.ಪಾಟೀಲ್, ಶನಿವಾರ ರಾತ್ರಿ ಬೆಳತ್ತೂರಿನಲ್ಲಿ ಬಾಲಕಿಯೊಬ್ಬಳ ಹುಟ್ಟು ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ಗ್ಯಾಸ್‌ನಿಂದ ತುಂಬುವ ಬಲೂನ್ ಗಳನ್ನು ಬಳಸಲಾಗಿದೆ. ಆ ಗ್ಯಾಸ್ ಬಲೂನ್‌ಗಳನ್ನು ಮಕ್ಕಳು ಮೆಟ್ಟಲುಗಳ ಮೇಲೆ ತೆಗೆದುಕೊಂಡು ಹೊಗುತಿದ್ದರು. ಈ ವೇಳೆ ಮನೆ ಮುಂದೆ ಇದ್ದ ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡು ಘಟನೆ ನಡೆದಿದೆ.
ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ ಐವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.