Advertisement

ಹೆಲಿಪ್ಯಾಡ್‌ ನಿರ್ಮಾಣಕ್ಕೆ ಪಾಲಿಕೆಯಲ್ಲೇ ಅಪಸ್ವರ

12:13 PM Jan 30, 2018 | |

ಬೆಂಗಳೂರು: ಬಿಬಿಎಂಪಿಯ ಎಂಟು ವಲಯಗಳಲ್ಲಿ ಏರ್‌ ಆ್ಯಂಬುಲೆನ್ಸ್‌ ಹಾಗೂ ಗಣ್ಯರಿಗೆ ಅನುಕೂಲವಾಗಲು ಹೆಲಿಪ್ಯಾಡ್‌ ನಿರ್ಮಿಸುವ ಯೋಜನೆಗೆ ಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ನಗರದಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ರೋಗಿಗಳು ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜತೆಗೆ ನಗರಕ್ಕೆ ಗಣ್ಯರು ಆಗಮಿಸಿದಾಗ ಸಂಚಾರ ದಟ್ಟಣೆಯಾಗಿ ಜನರು ತೊಂದರೆ ಅನುಭವಿಸುತ್ತಿದ್ದು, ಅದನ್ನು ತಪ್ಪಿಸಲು ಎಂಟು ವಲಯಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸಲು ಪಾಲಿಕೆ ಮುಂದಾಗಿದೆ.

ಆದರೆ, ನಗರದಲ್ಲಿನ 20ಕ್ಕಿಂತ ಹೆಚ್ಚು ಮಹಡಿಗಳ ಎಲ್ಲ ಕಟ್ಟಡಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸುವುದು ಕಡ್ಡಾಯವಾಗಿದ್ದು, ಅದರಂತೆ ನಗರದಲ್ಲಿರುವ ನೂರಾರು ಕಟ್ಟಡಗಳಲ್ಲಿ ಹೆಲಿಪ್ಯಾಡ್‌ಗಳಿವೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಅನಗತ್ಯವಾಗಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. 

ಪಾಲಿಕೆಯಲ್ಲಿ ಲಭ್ಯವಿರುವ ಹೆಲಿಪ್ಯಾಡ್‌ಗಳನ್ನು ಬಳಸಲು ಆದ್ಯತೆ ನೀಡದ, ಮೇಯರ್‌ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅನಗತ್ಯವಾಗಿ ಎಂಟು ವಲಯಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸಲು ಕೌನ್ಸಿಲ್‌ ಅನುಮೋದನೆ ಪಡೆಯಲು ಮುಂದಾಗಿದ್ದಾರೆ. ನಿಯಮದಂತೆ ವಿಷಯ ಸೂಚಿಯಲ್ಲಿ ಎಷ್ಟು ವಿಸ್ತೀರ್ಣ ಹಾಗೂ ಎಷ್ಟು ವೆಚ್ಚದಲ್ಲಿ ಹೆಲಿಪ್ಯಾಡ್‌ ನಿರ್ಮಿಸಲಾಗುತ್ತದೆ.

ಈವರೆಗೆ ನಗರದಲ್ಲಿ ಎಷ್ಟು ಮಂದಿ ಏರ್‌ ಆ್ಯಂಬುಲೆನ್ಸ್‌ ಬಳಸಿದ್ದಾರೆ, ಸಾಧಕ-ಬಾಧಕಗಳ ಕುರಿತು ವಿಷಯ ಸೂಚಿಯಲ್ಲಿ ಮಾಹಿತಿ ನೀಡಬೇಕು. ಆದರೆ, ತೆರಿಗೆ ಮತ್ತು ಸ್ಥಾಯಿ ಸಮಿತಿ ಯಾವುದೇ ಮಾಹಿತಿ ನೀಡಿದೆ ವಿಷಯವನ್ನು ಕೌನ್ಸಿಲ್‌ ಮುಂದಿಟ್ಟಿದೆ. 

Advertisement

ಇದರೊಂದಿಗೆ ಹೆಲಿಪ್ಯಾಡ್‌ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಅನುಮೋದನೆಗೆ ಮುಂದಾಗಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪಾಲಿಕೆಗೆ ಯಾವುದೇ ಅನುಮತಿ ಪಡೆಯದೆ ನೇರವಾಗಿ ಕೌನ್ಸಿಲ್‌ಗೆ ಕಳುಹಿಸಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ಅಧಿಕಾರಿಗಳು ಹಾಗೂ ಸ್ಥಾಯಿ ಸಮಿತಿಗಳ ನಡುವಿನ ತಿಕ್ಕಾಟಕ್ಕೆ ಅನುವು ಮಾಡಿಕೊಟ್ಟಿದೆ.

ಆಯುಕ್ತರ ಗಮನಕ್ಕೆ ತರದೆ ನೇರವಾಗಿ ವಿಷಯಗಳನ್ನು ಕೌನ್ಸಿಲ್‌ ಮುಂದಿಟ್ಟು ಅನುಮೋದನೆ ಪಡೆಯಲು ಮುಂದಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತದ ಕ್ರಮಕ್ಕೆ ಸೋಮವಾರ ನಡೆಯಲಿರುವ ಕೌನ್ಸಿಲ್‌ ಸಭೆಯಲ್ಲಿ ವಿರೋಧ ಪಕ್ಷ ಬಿಜೆಪಿ ಹೇಗೆ ಪ್ರತಿಕ್ರಿಯಿಸಲಿದೆ ಎಂಬ ಕುತೂಹಲ ಮೂಡಿಸಿದೆ. 

ಹೆಲಿಪ್ಯಾಡ್‌ ಅನವಶ್ಯಕ: ನಗರದ ಹಲವಾರು ಕಟ್ಟಡಗಳಲ್ಲಿ ಹೆಲಿಪ್ಯಾಡ್‌ಗಳು ಲಭ್ಯವಿದೆ. ಹೀಗಾಗಿ ಪತ್ಯೇಕ ಹೆಲಿಪ್ಯಾಡ್‌ಗಳಿಗೆ ಸಾರ್ವಜನಿಕ ಹಣ ಪೋಲು ಮಾಡುವುದು ಬೇಡ ಎಂದು ಹಿಂದೆ ಪಾಲಿಕೆಯಲ್ಲಿ  ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದರು.

ನೇರವಾಗಿ ಮಂಡಿಸುತ್ತಿರುವ ವಿಷಯಗಳು 
-ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯದ ಎಲ್ಲ ಆಸ್ತಿಗಳು, ಕಟ್ಟಡಗಳ ತಪಾಸಣೆ 
-ಏರ್‌ ಆ್ಯಂಬುಲೆನ್ಸ್‌ಗಳಿಗಾಗಿ 8 ವಲಯದಲ್ಲಿ ತಲಾ ಹೆಲಿಪ್ಯಾಡ್‌ ನಿರ್ಮಾಣ
-ಸ್ವಾತಂತ್ರ್ಯ ಉದ್ಯಾನ ಪ್ರವಾಸೋದ್ಯಮ ಇಲಾಖೆಗೆ ವಹಿಸುವುದು 
-ಗಾಂಧಿನಗರ, ಎಂ.ಜಿ.ರಸ್ತೆ, ಡಿಸ್ಪೆನ್ಸರಿ ರಸ್ತೆ, ಶಿವಾಜಿನಗರಗಳಲ್ಲಿ ಸ್ವಯಂಚಾಲಿತ ಪೇ ಅಂಡ್‌ ಪಾರ್ಕ್‌ 
-ರಾಜಕಾಲುವೆ ಹಾಗೂ ಕೆರೆಗಳಿಗೆ ತ್ಯಾಜ್ಯ ಸುರಿವ ಟ್ರ್ಯಾಕ್ಟರ್‌ಗಳಿಗೆ 1 ಲಕ್ಷ ರೂ. ಹಾಗೂ ದೊಡ್ಡ ಲಾರಿಗಳಿಗೆ 5 ಲಕ್ಷ ರೂ. ದಂಡ
-34 ಸೆಲ್ಫ್ ಪ್ರೋಫೈಲ್ಡ್‌ ಮೆಕಾನಿಕಲ್‌ ಸ್ವೀಪಿಂಗ್‌ ಯಂತ್ರಗಳ ಖರೀದಿ
-ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ 800 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಮನವಿ 
-ಬೈಕ್‌ ವೀಲಿಂಗ್‌ಗಾಗಿ ಬೆಳ್ಳಹಳ್ಳಿ ಕ್ವಾರಿಯಲ್ಲಿ ರೇಸ್‌ ಟ್ರ್ಯಾಕ್‌ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next