ಮಹಾನಗರ: ನಗರದಲ್ಲಿ ವಾಕಿಂಗ್- ಜಾಗಿಂಗ್ ಮಾಡುವವರಿಗೆ, ಹೊಸದಾಗಿ ವಾಹನ ಚಾಲನೆ ಕಲಿಯುವವರಿಗೆ, ಕ್ರಿಕೆಟ್- ವಾಲಿಬಾಲ್ ಆಡುವ ಜತೆಗೆ, ಹರಟೆ ಹೊಡೆಯುವುದಕ್ಕೆ ಮೀಸಲಾಗಿದ್ದ ಮಂಗಳೂರಿನ ಮೇರಿಹಿಲ್ ನಲ್ಲಿರುವ ಹೆಲಿಪ್ಯಾಡ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಖದರು ಪಡೆದುಕೊಂಡು ಎಲ್ಲರ ಗಮನಸೆಳೆಯುವ ತಾಣವಾಗಲಿದೆ. ಹೌದು, ಕರಾವಳಿ ಭಾಗದಲ್ಲಿ ಚುನಾವಣ ಪ್ರಚಾರಕ್ಕಾಗಿ ಘಟಾನುಘಟಿ ನಾಯಕರು, ಸ್ಟಾರ್ ಪ್ರಚಾರಕರು ಇನ್ನು ಮುಂದೆ ಈ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಅದಕ್ಕಾಗಿ ಈ ಹೆಲಿಪ್ಯಾಡ್ ಸಜ್ಜಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಒದಗಿಸಲಾಗುತ್ತಿದೆ. ವಿಶೇಷವೆಂದರೆ, ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಮಾಡುವುದಕ್ಕಾಗಿ ರಾಷ್ಟ್ರ- ರಾಜ್ಯ ಮಟ್ಟದ ಪ್ರಮುಖ ನಾಯಕರು, ಹೆಲಿಕಾಪ್ಟರ್‌ನಲ್ಲಿ ಬಂದು ಇಲ್ಲಿ ಇಳಿಯಲಿದ್ದಾರೆ. ಹೀಗಾಗಿ ಮುಂದಿನ ಕೆಲವು ದಿನಗಳವರೆಗೆ ಮಂಗಳೂರಿನ ಏಕೈಕ ಹೆಲಿಪ್ಯಾಡ್ ನಿತ್ಯ ಬ್ಯುಸಿಯಾಗುವ ಸಾಧ್ಯತೆ ಇದೆ.
Advertisement
ಇಂದು ಹೆಲಿಪ್ಯಾಡ್‌ಗೆ ರಾಹುಲ್ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎ. 27ರಂದು ಬೆಳಗ್ಗೆ ಮುರ್ಡೇಶ್ವರದಿಂದ ಹೆಲಿಕಾಪ್ಟರ್ ಮೂಲಕ ಮೇರಿಹಿಲ್‌ನ ಹೆಲಿಪ್ಯಾಡ್‌ಗೆ ಆಗಮಿಸಿ, ಬಳಿಕ ನಗರದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಹುಲ್ ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್‌ಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಪ್ರಸ್ತುತ ಮೇರಿಹಿಲ್ ಹೆಲಿಪ್ಯಾಡ್ ಅನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಮಂಗಳೂರಿನ ಬಜಪೆ ಸಮೀಪದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ ಅಲ್ಲಿಂದ ಮಂಗಳೂರಿಗೆ ಸುಮಾರು 10 ಕಿಲೋ ಮೀಟರ್ ಅಂತರವಿರುವ ಕಾರಣದಿಂದ ಅಷ್ಟು ಸಂಚಾರ ನಡೆಸುವುದನ್ನು ತಪ್ಪಿಸುವ ಕಾರಣಕ್ಕಾಗಿ ಹಾಗೂ ಗಣ್ಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೇರಿಹಿಲ್ ಹೆಲಿಪ್ಯಾಡ್ ನಿರ್ಮಾಣವಾಗಿದೆ. 1988ರಿಂದಲೂ ಈ ಹೆಲಿಪ್ಯಾಡ್ ಕಾರ್ಯಾಚರಣೆ ನಡೆಸುತ್ತಿತ್ತು. ರಾಜೀವ್‌ಗಾಂಧಿ ಬಂದಿದ್ದರು!
ಮೇರಿಹಿಲ್‌ನ ಹೆಲಿಪ್ಯಾಡ್ ಮೂಲಕ ಈಗಾಗಲೇ ದೇಶದ ಗಣ್ಯಾತಿಗಣ್ಯರು ಮಂಗಳೂರಿಗೆ ಆಗಮಿಸಿದ ಬಗ್ಗೆ ಉಲ್ಲೇಖಗಳಿವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಹಿತ ದೇಶದ ಎಲ್ಲ ರಾಷ್ಟ್ರೀಯ, ರಾಜ್ಯದ ನಾಯಕರು, ಗಣ್ಯರು ಹೆಲಿಕಾಪ್ಟರ್ ನಲ್ಲಿ ಬಂದು ಇಲ್ಲಿ ಇಳಿದಿದ್ದರು.
Related Articles
ಮೇರಿಹಿಲ್ ಹೆಲಿಪ್ಯಾಡ್‌ಗೆ ಗಣ್ಯರು ಆಗಮಿಸುವುದಾದರೆ, ಮೊದಲು ಹೆಲಿಪ್ಯಾಡ್ ಅನ್ನು ಸಿದ್ಧಗೊಳಿಸಲಾಗುತ್ತದೆ. ಪೂರ್ವಭಾವಿಯಾಗಿ ಹೆಲಿಪ್ಯಾಡ್‌ನ ಸುತ್ತಲಿನಲ್ಲಿ ಕಸ, ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಗುತ್ತದೆ. ಹೆಲಿಕಾಪ್ಟರ್ ಇಳಿಯುವಾಗ ಧೂಳು ಎದ್ದೇಳದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಗಾಳಿಯು ಯಾವ ದಿಕ್ಕಿನಲ್ಲಿ ಬೀಸುತ್ತಿದ್ದೆಯೋ ಅದರ ವಿರುದ್ಧ ದಿಕ್ಕಿನಲ್ಲಿ ಹೆಲಿಕಾಪ್ಟರ್ ಇಳಿಯುತ್ತದೆ. ಇದನ್ನು ಪರಿಶೀಲಿಸುವ ಮುನ್ನ ದಿನ ಹೆಲಿಪ್ಯಾಡ್‌ನ ಒಂದು ಬದಿಯಲ್ಲಿ ಸ್ವಲ್ಪ ಬೆಂಕಿ ಹಾಕಿ ಅದರ ಹೊಗೆಯು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಆ ಮೂಲಕ ಹೆಲಿಕಾಪ್ಟರ್ ಇಳಿಯುವ ದಿಕ್ಕನ್ನು ಕಂಡುಹಿಡಿಯಲಾಗುತ್ತದೆ.
Advertisement
ಮುಡಿಪಿನಲ್ಲಿ ಇನ್ನೊಂದು ಹೆಲಿಪ್ಯಾಡ್!ಆಧುನಿಕ ಹಾಗೂ ಸಮಗ್ರ ಸೌಲಭ್ಯಗಳುಳ್ಳ ಸುಸಜ್ಜಿತ ಜೈಲು ಮಂಗಳೂರು ಹೊರವಲಯದ ಮುಡಿಪು ಸಮೀಪದ 67.87 ಎಕ್ರೆ ಜಮೀನಿನಲ್ಲಿ ನಡೆಯಲಿರುವ ಸಂದರ್ಭದ ಅಲ್ಲಿಯೂ ಸುಸಜ್ಜಿತ ಹೆಲಿಪ್ಯಾಡ್ ನಿರ್ಮಾಣಗೊಳಿಸಲು ಉದ್ದೇಶಿಸಲಾಗಿದೆ. ಬಂದಿಖಾನೆ ಇಲಾಖೆಯ ಪ್ರಮುಖರು ಸಹಿತ ಅಧಿಕಾರಿ ವರ್ಗ ಈ ಹೆಲಿಪ್ಯಾಡ್ ಬಳಸಲಿದ್ದಾರೆ. ಇದು ಪೂರ್ಣಗೊಂಡರೆ ರಾಜ್ಯದ ಯಾವ ಜೈಲಿನಲ್ಲಿಯೂ ಇಲ್ಲದ ಹೆಲಿಪ್ಯಾಡ್ ಸೌಲಭ್ಯ ಈ ಜೈಲಿನಲ್ಲಿ ದೊರೆಯಲಿದೆ. ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಣೆ
ಸಣ್ಣ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣ ಇಲ್ಲದೆಡೆ, ಲೋಕೋಪಯೋಗಿ ಇಲಾಖೆ ಮುಖೇನವಾಗಿ ವಿಸ್ತಾರ ಜಾಗವನ್ನು ಪರಿಶೀಲಿಸಿ ಹೆಲಿಪ್ಯಾಡ್ ನಿರ್ಮಿಸಲಾಗುತ್ತದೆ. ಮೇರಿಹಿಲ್ ಹೆಲಿಪ್ಯಾಡ್‌ಗೆ 30 ವರ್ಷಗಳ ಇತಿಹಾಸವಿದೆ. ರಾಜೀವ್ ಗಾಂಧಿ, ಜಯಲಲಿತಾ ಸಹಿತ ಹಲವಾರು ರಾಷ್ಟ್ರೀಯ-ರಾಜ್ಯ ನಾಯಕರು ಈ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು.
– ಎಂ.ಆರ್.ವಾಸುದೇವ್, ಮಾಜಿ ನಿರ್ದೇಶಕರು, ಮಂಗಳೂರು ಅಂ.ವಿಮಾನ ನಿಲ್ದಾಣ – ಮಂಗಳೂರಿನ ಏಕೈಕ ಹೆಲಿಪ್ಯಾಡ್
– ಪೊಲೀಸ್ ಬಿಗಿ ಬಂದೋಬಸ್ತ್
– ಗಣ್ಯರ ಅನುಕೂಲಕ್ಕೆ ವ್ಯವಸ್ಥೆ