ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಚ್‌ಎಎಲ್ ನಡುವೆ ಸೋಮವಾರದಿಂದ ಚಾಪರ್ ಸೇವೆ ಪ್ರಾರಂಭವಾಗಲಿದೆ.
ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಇಲ್ಲದೇ ಕೇವಲ 12 ನಿಮಿಷಗಳ ಪ್ರಯಾಣ ಅಷ್ಟೇ. ಕ್ಯಾಬ್‌ನಲ್ಲಿ ಎಚ್‌ಎಎಲ್‌ನಿಂದ ಕೆಐಎಎಲ್ ತಲುಪಲು 1300 ರೂ. ದರ ಇದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯೊಂದಿಗೆ ಎರಡು ಗಂಟೆಗಳ ಪ್ರಯಾಣ ಮಾಡಬೇಕು. ಆದರೆ, ಹೆಲಿಕಾಪ್ಟರ್ 12 ನಿಮಿಷಗಳ ಪ್ರಯಾಣ ಅಷ್ಟೇ, ವಿಮಾನಗಳ ಟಿಕೆಟ್ ಬುಕ್ ಮಾಡುವಂತೆ ಹೆಲಿಕ್ಯಾಪ್ಟರ್ ಪ್ರಯಾಣಕ್ಕೆ ಟಿಕೆ ಟ್ ಬುಕ್ ಮಾಡಬಹುದು. ಒಂದು ಬದಿಯ ಹೆಲಿಕ್ಯಾಪ್ಟರ್ ಪ್ರಯಾಣಕ್ಕೆ ತೆರಿಗೆ ಹೊರತುಪಡಿಸಿ 3,250 ರೂ.ದರ ಇದೆ. ಪ್ರಾಯೋಗಿಕವಾಗಿ ಎಚ್‌ಎಎಲ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೆಲಿಕಾಪ್ಟರ್ ಸೇವೆ ಪ್ರಾರಂಭವಾಗಲಿದೆ.
ಇದರಿಂದ ಬೆಂಗಳೂರಿನ ಬ್ಯುಸಿನೆಸ್ ಕೇಂದ್ರಗಳಾದ ಕೊರಮಂಗಲ, ಇಂದಿರಾನಗರ ಮತ್ತು ಐಟಿ ಪಾರ್ಕ್ ಬ್ಯೂಸಿನೆಸ್ ಮ್ಯಾನ್‌ಗಳಿಗೆ ವರವಾಗಲಿದೆ. ಈ ಬಗ್ಗೆ ಬ್ಲೇಡ್ ಇಂಡಿಯಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ಲೇಡ್ ಇಂಡಿಯಾ ಕಂಪನಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಚ್‌ಎಎಲ್ ಏರ್‌ಪೋರ್ಟ್ ನಡುವೆ ಹೆಲಿಕಾಪ್ಟರ್ ಸೇವೆ ಅ.10 ರಿಂದ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೂ ದಿನಕ್ಕೆ ಎರಡು ಹೆಲಿಕಾಪ್ಟರ್ ಸೇವೆ ಲಭ್ಯವಿದ್ದು, ಮೊದಲ ಹೆಲಿಕಾಪ್ಟರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:30ಕ್ಕೆ ಹೊರಟು ಬೆಳಗ್ಗೆ 9ಕ್ಕೆ ಎಚ್‌ಎಎಲ್ ತಲುಪಲಿದೆ.
ಎರಡನೇ ಹೆಲಿಕ್ಯಾಪ್ಟರ್ ಮಧ್ಯಾಹ್ನ 4:15ಕ್ಕೆ ಹೊರಟು ಮಧ್ಯಾಹ್ನ 4:45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.