Advertisement

ಹೆಲಿ ಟೂರಿಸಂ, ಸೀ ಪ್ಲೇನ್‌; ತಜ್ಞರಿಂದ ಸರ್ವೇ : ಬಹುವರ್ಷದ ಕನಸು ಸಾಕಾರ ಹಂತಕ್ಕೆ

10:37 PM Mar 17, 2021 | Team Udayavani |

ಮಹಾನಗರ: ಕೇರಳ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಿಸಿ ಕೊಟ್ಟ “ಸೀ ಪ್ಲೇನ್‌’ ಹಾಗೂ “ಹೆಲಿಟೂರಿಸಂ’ ಮಂಗಳೂರಿಗೂ ಬರುವ ಬಹುವರ್ಷದ ಕನಸು ಸಾಕಾರ ಹಂತಕ್ಕೆ ಬಂದಿದ್ದು, ಬೆಂಗಳೂರಿನ ಖಾಸಗಿ ವಿಮಾನಯಾನ ಸಂಸ್ಥೆಯ ತಜ್ಞರ ತಂಡ ಈಗಾಗಲೇ ಮಂಗಳೂರಿನಲ್ಲಿ ಸರ್ವೇ ಆರಂಭಿಸಿದೆ.

Advertisement

ಕರಾವಳಿಯ 320 ಕಿ.ಮೀ. ವ್ಯಾಪ್ತಿಯ ಅಲ್ಲಲ್ಲಿ ಸೀ ಪ್ಲೇನ್‌ಗಳು ತಂಗಲು ಸೌಕರ್ಯ ಒದಗಿಸಿದರೆ ದೇಶದ ಕರಾವಳಿಯೊಂದಿಗೆ ಸಂಪರ್ಕ ಸಾಧಿಸುವ ಹಬ್‌ ಆಗಿ ಮಂಗಳೂರು ಬೆಳೆಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸೀ ಪ್ಲೇನ್‌ ಹಾಗೂ ಹೆಲಿಟೂರಿಸಂ ಯೋಜನೆಯನ್ನು ಮಂಗಳೂರು ಮುಖೇನ ಜಾರಿಗೆ ಕ್ರಮಕೈಗೊಳ್ಳುವ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಸಂದರ್ಭ ತಿಳಿಸಿದ್ದರು. ಇದರಂತೆ ವಿಸ್ತೃತ ವರದಿಯನ್ನು ಜಿಲ್ಲಾಡಳಿತವು ಸಚಿವರಿಗೆ ನೀಡಿದ್ದು, ಇದರ ಮುಂದುವರಿದ ಭಾಗವಾಗಿ ತಾಂತ್ರಿಕ ಪರಿಣತರ ತಂಡ ಮಂಗಳೂರಿನಲ್ಲಿ ಸರ್ವೇ ಆರಂಭಿಸಿದೆ.

ಮಂಗಳೂರಿನಿಂದ ಕೇರಳದ ಕೆಲವು ಭಾಗ ಸಹಿತ ಕೊಲ್ಲೂರು, ಮಡಿಕೇರಿ, ಚಿಕ್ಕಮಗಳೂರು, ಧರ್ಮಸ್ಥಳ ಹಾಗೂ ಇತರ ಭಾಗಗಳಿಗೆ ಪ್ರವಾಸಿಗರಿಗೆ ತೆರಳಲು ಅನುಕೂಲವಾಗುವ ನೆಲೆಯಲ್ಲಿ ಹೆಲಿಟೂರಿಸಂ ಜಾರಿಯಾಗಲಿದೆ. ಈ ಸಂಬಂಧ ಮಂಗಳೂರಿನಲ್ಲಿ ಹೆಲಿಕಾಪ್ಟರ್‌ ನಿಲುಗಡೆಗೆ ಹೆಲಿಪ್ಯಾಡ್‌ ಮಾಡಲು ಸೂಕ್ತ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಲು ತಜ್ಞರ ತಂಡ ಮಂಗಳೂರಿಗೆ ಆಗಮಿಸಿದೆ. ಮೇರಿಹಿಲ್‌ನ ಹೆಲಿಪ್ಯಾಡ್‌, ಕದ್ರಿ ಪಾರ್ಕ್‌ ಸಮೀಪ ಸಹಿತ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಗರಕ್ಕೆ ಹತ್ತಿರ, ಹೆದ್ದಾರಿಯ ಸನಿಹದಲ್ಲಿಯೇ ಸ್ಥಳಾವಕಾಶವಿದ್ದರೆ ಉತ್ತಮ ಎಂದು ತಂಡ ಅಭಿಪ್ರಾಯಪಟ್ಟಿದೆ. ಕೆಲವೇ ದಿನದಲ್ಲಿ ಮತ್ತೂಂದು ತಂಡ ಆಗಮಿಸಿ ವಿಸ್ತೃತ ಸರ್ವೇ ನಡೆಸಿ ಯೋಜನೆ ಅಂತಿಮಗೊಳಿಸಲಿದೆ.

ನವಮಂಗಳೂರು ಬಂದರುವಿಗೆ (ಎನ್‌ಎಂಪಿಟಿ)ವಿದೇಶಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಇಲ್ಲಿಂದ ಹೆಲಿಟೂರಿಸಂ ಆರಂಭವಾದರೆ ಕೇರಳ, ಧರ್ಮಸ್ಥಳ, ಕುಕ್ಕೆ, ಬೇಲೂರು, ಹಳೆಬೀಡು, ಚಿಕ್ಕಮಗಳೂರು ಸಹಿತ ಹಲವು ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆ ವಿದೇಶಿ ಪ್ರಯಾಣಿಕರಿಗೂ ಅವಕಾಶ ದೊರೆಯಲಿದೆ.

Advertisement

ಗುರುಪುರ ನದಿಯಲ್ಲಿ “ಸೀ ಪ್ಲೇನ್‌’
ಸುದೀರ್ಘ‌ ವರ್ಷದ ಕನಸಾಗಿರುವ ಗುರುಪುರ ನದಿಯಲ್ಲಿ “ಸೀ ಪ್ಲೇನ್‌’ ಯೋಜನೆಗೂ ಆರಂಭಿಕ ಸರ್ವೇ ನಡೆಸ ಲಾಗಿದೆ. ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲಿರುವ ಗುರುಪುರ ನದಿಯಲ್ಲಿ “ಸೀ ಪ್ಲೇನ್‌’ ಆರಂಭಿಸುವ ಕುರಿತು ಯೋಚನೆ ಇದಾ ಗಿದೆ. ಅದಕ್ಕಾಗಿ ನದಿ ದಂಡೆಯಲ್ಲಿ ಸ್ಥಳದ ಅವಶ್ಯವಿದೆ. ಈ ಸಂಬಂಧ ಸ್ಥಳದ ಹುಡು ಕಾಟ ಕೂಡ ಈ ವ್ಯಾಪ್ತಿಯಲ್ಲಿ ನಡೆದಿದೆ.

“ಸೀ ಪ್ಲೇನ್‌-ಹೆಲಿಟೂರಿಸಂ ಆರಂಭ ವಾದರೆ ಕೇರಳ ಸಹಿತ ಕರ್ನಾಟಕದ ಹಲವು ನದಿಪಾತ್ರದ ವಿವಿಧ ಭಾಗಗಳಿಗೆ ಮಂಗಳೂರು ಮುಖೇನ ಪ್ರವಾಸಿಗರು ಸುಲಭವಾಗಿ ತೆರಳಲು ಸಾಧ್ಯ. ಈ ಮೂಲಕ ಕರಾವಳಿಯ ಪ್ರವಾಸೋದ್ಯಮ ಹೊಸ ಅವಕಾಶಕ್ಕೆ ತೆರೆದುಕೊಳ್ಳಲಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಕ್ಷೇತ್ರದ ಮಾರ್ಗದರ್ಶಕ ಯತೀಶ್‌ ಬೈಕಂಪಾಡಿ.

ಏನಿದು “ಸೀ ಪ್ಲೇನ್‌’?
6 ಆಸನಗಳುಳ್ಳ ವಿಶೇಷ ವಿಮಾನವಿದು. ನೀರಿನ ಮೇಲೆ ನಿಲ್ಲಲು ಎರಡು ಆಧಾರಗಳು ಇದಕ್ಕಿದೆ. ಸಮುದ್ರದಲ್ಲಿ ಅಲೆಗಳಿರುವುದರಿಂದ ಅಲ್ಲಿ ನಿಲುಗಡೆ ಇದಕ್ಕೆ ಸಾಧ್ಯವಿಲ್ಲ. ಹೀಗಾಗಿ ನದಿ ಇದಕ್ಕೆ ಪೂರಕ ಪ್ರದೇಶ. ನೀರಿನಲ್ಲೇ ಇದು ನಿಲ್ಲುತ್ತದೆ. ಬೋಟ್‌ ಮೂಲಕ ಪ್ರವಾಸಿಗರನ್ನು ತಲುಪಿಸುವ ಕಾರ್ಯ ಸಂಸ್ಥೆಯ ಮೂಲಕ ನಡೆಯುತ್ತದೆ. ನದಿ ಪಾತ್ರದ ಜಾಗದಲ್ಲಿ ಪ್ರಯಾಣಿಕರಿಗೆ ಬೇಕಾಗುವ ಪ್ರಶಾಂತ ವಾತಾವರಣ, ಅಗತ್ಯ ಸೌಲಭ್ಯಗಳು.. ಹೀಗೆ ಪ್ರವಾಸಿಗರ ಅನುಕೂಲದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಪ್ಯಾಕೇಜ್‌ ರೀತಿಯಲ್ಲಿ ಸೀ ಪ್ಲೇನ್‌ನ ಪ್ರವಾಸವನ್ನು ಅನಂತರ ಕೈಗೊಳ್ಳುವ ಬಗ್ಗೆ ಯೋಚನೆ ಇದೆ.

ಸರ್ವೇ ಆರಂಭ
ಮಂಗಳೂರಿನಲ್ಲಿ ಹೆಲಿಟೂರಿಸಂ ಹಾಗೂ ಸೀ ಪ್ಲೇನ್‌ ಆರಂಭದ ಬಗ್ಗೆ ಜಿಲ್ಲಾಡಳಿತವು ಈಗಾಗಲೇ ಸಚಿವ ಸಿ.ಪಿ. ಯೋಗೇಶ್ವರ್‌ ಅವರನ್ನು ಕೋರಿದ್ದು, ಪೂರಕವಾಗಿ ಸ್ಪಂದಿಸಿದ್ದಾರೆ. ಇದರ ಮೊದಲ ಹಂತವಾಗಿ ಬೆಂಗಳೂರಿನಿಂದ ತಜ್ಞರ ತಾಂತ್ರಿಕ ತಂಡ ಮಂಗಳೂರಿಗೆ ಆಗಮಿಸಿ ಸರ್ವೇ ಆರಂಭಿಸಿದೆ. ಶೀಘ್ರದಲ್ಲಿ ಈ ಯೋಜನೆ ಆರಂಭವಾಗುವ ಮುಖೇನ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ರೂಪ ದೊರೆಯುವ ನಿರೀಕ್ಷೆಯಿದೆ.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next