Advertisement
ಪೊಲೀಸ್ ಬಂದೋಬಸ್ತ್ನಲ್ಲಿ ಟೋಲ್ ಆರಂಭಗೊಂಡಿದ್ದು, ಇದರ ವಿರುದ್ಧ ರವಿವಾರ ಬೆಳಗ್ಗೆ ಪ್ರತಿಭಟನೆ ನಡೆಸುವುದಾಗಿ ರಾ.ಹೆ. ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಂ ಮೊಹಮ್ಮದ್ ತಿಳಿಸಿದ್ದಾರೆ. ನವಯುಗ್ ಕಂಪೆನಿಯ ಟೋಲ್ ತಪ್ಪಿಸಿ ಹಳೇ ಎಂಬಿಸಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಪಡೆಯಲು ಈ ಟೋಲ್‌ಗೇಟ್ ಆರಂಭಿಸಲಾಗಿದೆ. ಒಳ ರಸ್ತೆಯಲ್ಲಿ ವಾಹನಗಳು ಸಂಚರಿಸುವುದರಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಕಂಪೆನಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಟೋಲ್ ನಿರ್ಮಿಸುವಂತೆ ನವಯುಗ್ ಕಂಪೆನಿಗೆ ಅನುಮತಿ ನೀಡಲಾಗಿತ್ತು. ಟೋಲ್ ಆರಂಭಿಸಿದ ಹಿನ್ನೆಲೆಯಲ್ಲಿ ಅವಿಭಜಿತ ದ. ಕ. ಜಿಲ್ಲಾ ರಾ. ಹೆ. ಹೋರಾಟ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ ಟೋಲ್ ಆಗಮಿಸಿ ಸಾರ್ವಜನಿಕರ ಬೇಡಿಕೆ ಈಡೇರಿಸುವ ತನಕ ಟೋಲ್ ಸಂಗ್ರಹ ಮಾಡಕೂಡದು. ತಕ್ಷಣ ಒಳ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಈ ವೇಳೆ ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಜಿಲ್ಲಾಡಳಿತದ ಆದೇಶದಂತೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮಾತು ಕತೆಗೆ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಎಂಬಿಸಿ ಒಳರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸುತ್ತವೆ. ಶನಿವಾರ ಇಲ್ಲಿ ಏಕಾಏಕಿ ಟೋಲ್ ಸಂಗ್ರಹ ಶುರುವಾದ್ದರಿಂದ ಅವರು ಟೋಲ್ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಕಂಪೆನಿ ಮ್ಯಾನೇಜರ್ ಸಂಪರ್ಕಿಸಿದಾಗ ರಿಯಾಯಿತಿಗೆ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಬಸ್‌ಗಳಿಗೆ ಕಡಿಮೆ ದರದ ಪಾಸ್ ನೀಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಉಡುಪಿ ಜಿಲ್ಲಾ ನೋಂದಣಿಯ ವಾಹನಗಳಿಗೆ ಟೋಲ್ ಫ್ರೀ ಅಬಾಧಿತವಾಗಿದೆ. ಹೆಜಮಾಡಿ ಜನತೆಗೆ ಬೇರೆ ನೋಂದಣಿ ವಾಹನಗಳಲ್ಲಿ ಸಂಚರಿಸಿದರೂ ಸ್ಥಳೀಯ ದಾಖಲೆ ಪ್ರದರ್ಶಿಸಿ ಸಂಚರಿಸಬಹುದಾಗಿದೆ.