Advertisement

ಹೆಜ್ಜೆ-ಗೆಜ್ಜೆಯ ರಜತ ನೂಪುರ ಭರತನಾಟ್ಯ

06:37 PM Jan 10, 2020 | mahesh |

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ-ಗೆಜ್ಜೆ ನೃತ್ಯ ಸಂಸ್ಥೆ ಉಡುಪಿ ಮಣಿಪಾಲ ಇದರ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಭಾಗ-3 ನೃತ್ಯಾಂಜಲಿ-35 ರಲ್ಲಿ ರಜತ ನೂಪುರ ಭರತನಾಟ್ಯ ಕಾರ್ಯಕ್ರಮ ರಾಜಾಂಗಣದಲ್ಲಿ ಉನ್ನತ ಹಿಮ್ಮೇಳದೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಆದಿಯಲ್ಲಿ ಅಮೃತ ವರ್ಷಿಣಿ ರಾಗದಲ್ಲಿ ಪುಷ್ಪಾಂಜಲೀ ಗಣೇಶ ಶಿವ ಹಾಗೂ ಪಾರ್ವತಿಯನ್ನು ಕುರಿತಾದ ಶ್ಲೋಕಗಳು ಹಾಗೂ ಆನಂದಾಮೃತ ವರ್ಷಿಣಿ ಎಂಬ ಕೃತಿಯನ್ನು ಪ್ರದರ್ಶಿಸಲಾಯಿತು.

Advertisement

ಚುರುಕಾದ ನಡೆಗಳನ್ನು ಹೊಂದಿದ ಪುಷ್ಪಾಂಜಲಿಯ ಅನಂತರ ಪ್ರದರ್ಶಿಸಿದ ಕೃತಿಯಲ್ಲಿ ಶಿವನಿಗೆ ಓಂಕಾರವನ್ನು ಸುಬ್ರಹ್ಮಣ್ಯನು ಉಪದೇಶಿಸಿದ ಸನ್ನಿವೇಶವು ಚಿಕ್ಕದಾದ ಕಥಾ ಸಂಚಾರಿಯ ಮೂಲಕ ಹೊರಹೊಮ್ಮಿತು. ಸುಬ್ರಹ್ಮಣ್ಯ ಕೌತ್ವಂವನ್ನು ಗೌಳರಾಗದಲ್ಲಿ ಆದಿತಾಳದಲ್ಲಿ ಪ್ರದರ್ಶಿಸಿದರು. ಹೆಜ್ಜೆಗೆಜ್ಜೆಯ ಕಿರಿಯ ಕಲಾವಿದರಿಂದ ಶ್ಲೋಕಗಳನ್ನು ರಾಗಮಾಲಿಕೆಯಲ್ಲಿ ಮೋಹನರಾಗ ರೂಪಕ ತಾಳದ ವರವೀಣಾ ಎಂಬ ಲಕ್ಷ್ಮೀ ಗೀತೆ ಹಾಗೂ ಸಿಂಧೂ ಭçರವಿ ರಾಗದಲ್ಲಿ ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ ನರ್ತನಗಳು, ವಯೋಮಿತಿಗನುಸಾರವಾಗಿ ಸಂಯೋಜಿಸಿದುದರಿಂದ ಉತ್ತಮವಾಗಿ ಪ್ರದರ್ಶನಗೊಂಡವು. ಸಂಸ್ಥೆಯ ವಸಂತ ತಂಡದ ವಿದ್ಯಾರ್ಥಿನಿಯರು ಆನಂದ ಭೈರವಿಯ ಬೇಗ ಬಾರೋ ದೇವರ ನಾಮ ಸ್ಮತಿ ರಾಗದ ರೂಪಕ ತಾಳದ ಸರಸ್ವತಿ ನಮೋಸ್ತುತೇ ಕೃತಿ ಮತ್ತು ಪೂರ್ವಕಲ್ಯಾಣ ರಾಗದ ಹನುಮಂತ ದೇವ ನಮೋ ದೇವರ ನಾಮದಲ್ಲಿ ಹನುಮಂತನು ಸೀತೆಯನ್ನು ಕಂಡಿದ್ದು ಲಂಕಾದಹನ ಕಥಾ ಸನ್ನಿವೇಶಗಳನ್ನು ವಿದ್ಯಾರ್ಥಿನಿಯರು ಮನೋಜ್ಞವಾಗಿ ಅಭಿನಯಿಸಿದರು. ಸಂಸ್ಥೆಯ “ಸುಬ್ರಹ್ಮಣ್ಯ’ ತಂಡದವರಿಂದ ಕೇದಾರಗಾಳದ ನಟರಾಜ ನಾ ನಾಟ್ಯದ ಎಂಬ ಪದಜತಿಯನ್ನು ಪ್ರಸ್ತುತ ಪಡಿಸಿದರು. ಇದರಲ್ಲಿ “ಶಿವನ ನವರಸ’ವನ್ನು ಕಥಾ ಸನ್ನಿವೇಶಗಳ ಮೂಲಕ ಅಭಿನಯಿಸಿದರು. ಅಲ್ಲದೇ, ಇದರಲ್ಲಿ ಕ್ಲಿಷ್ಟಕರವಾದ ಜತಿಗಳು ಹಾಗೂ ನಾಟ್ಯ ಶಾಸ್ತ್ರದ ಚಾರಿಗಳಾದ ಡೋಲಪಾದ, ಭುಜಂಗ ತ್ರಾಸಿತ ಕರಣ, ಊರುಧೃತ, ಜನಿತ, ಮುಂತಾದವು ಇದ್ದವು. ಜನರಂಜಿನಿ ರಾಗದ ಪಾಹಿಮಾಂ ಶ್ರೀ ರಾಜರಾಜೇಶ್ವರಿ ಎಂಬ ಕೃತಿಯನ್ನೂ ಇದೇ ತಂಡದ ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

ಹಿರಿಯ ವಿದ್ಯಾರ್ಥಿನಿಯರು ಅಯ್ಯಪ್ಪ ಸ್ವಾಮಿ ಮೇಲೆ ರಚಿತವಾದ ವರ್ಣವನ್ನು ಪ್ರಸ್ತುತ ಪಡಿಸಿದರು. ವಿ| ದೀಕ್ಷಾ ರಾಮಕೃಷ್ಣರಿಂದ ಸಂಯೋಜಿತವಾದ ಈ ವರ್ಣಕ್ಕೆ, ಅವರೇ ನಟುವಾಂಗವನ್ನು ನಿರ್ವಹಿಸಿ, ಮೆಚ್ಚುಗೆಯನ್ನು ಪಡೆದುಕೊಂಡರು. ಇದರಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆಯನ್ನು ಧರಿಸುವುದು, ಅಯ್ಯಪ್ಪಸ್ವಾಮಿಯ ಜನನ, ಹರಿಹರ ಪುತ್ರನಾದ ಕಥಾ ಸನ್ನಿವೇಶ , ಮಲತಾಯಿಯು ತನ್ನ ಸ್ವಂತ ಮಗನಿಗೆ ರಾಜ್ಯವು ಸಿಗಬೇಕೆಂಬ ದುರುದ್ದೇಶದಿಂದ ತಮ್ಮ ನಾಟಕದ ಹೊಟ್ಟೆ ನೋವಿಗೆ ಹುಲಿ ಹಾಲು ಬೇಕೆಂದು ಅಯ್ಯಪ್ಪನನ್ನು ಕಾಡಿಗೆ ಕಳುಹಿಸಿದಾಗ, ಇಂದ್ರನು ಹೆಣ್ಣು ಹುಲಿಯಾಗಿ ಅಯ್ಯಪ್ಪನನ್ನು ಅನುಗ್ರಹಿಸುವುದು, ಹೀಗೆ ಅಯ್ಯಪ್ಪನ ಮಹಿಮೆಗಳನ್ನು ತಿಳಿಸುವ ಈ ವರ್ಣ ಸುಂದರವಾಗಿ ಪ್ರದರ್ಶಿಸಲ್ಪಟ್ಟಿತು. ವಿ|ದೀಕ್ಷಾ ರಾಮಕೃಷ್ಣರು ಸಂಯೋಜಿಸಿದ ರೂಪಕ ತಾಳ ಹಾಗೂ ಹಮೀರ್‌ ಕಲ್ಯಾಣಿ ರಾಗದ ತಿಲ್ಲಾನದಿಂದ ಮಂಗಳಂದಿಂದ ಕಾರ್ಯಕ್ರಮ ಕೊನೆಗೊಂಡಿತು.

ನಟುವಾಂಗಂನಲ್ಲಿ ವಿ| ಯಶಾ ರಾಮಕೃಷ್ಣ , ವಿ| ದೀಕ್ಷಾ ರಾಮಕೃಷ್ಣ , ಹಾಡುಗಾರಿಕೆಯಲ್ಲಿ ಸಹಕರಿಸಿದವರು ವಿ| ರಘುರಾಂ ಬೆಂಗಳೂರು, ವಿ| ವಿನೋದ್‌ ಶ್ಯಾಂ, ಬೆಂಗಳೂರು ಮೃದಂಗದಲ್ಲಿ, ಕೊಳಲಿನಲ್ಲಿ ನಿತೀಶ್‌ ಅಮ್ಮಣ್ಣಾಯ ಹಾಗೂ ಪಿಟೀಲಿನಲ್ಲಿ ಶರ್ಮಿಳಾ ಕೆ. ರಾವ್‌ ಸಹಕರಿಸಿದರು. 56 ಹೆಜ್ಜೆ ಗೆಜ್ಜೆ ನೃತ್ಯಾಂಗನೆಯರ “ರಜತ ನೂಪುರ’ವು ಒಂದು ಉತ್ತಮ ಮಟ್ಟದ ನೃತ್ಯ ಕಾರ್ಯಕ್ರಮವಾಗಿತ್ತು.

ವಾಣಿ ವೆಂಕಟೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next