ಪಡುಬಿದ್ರಿ: ಹೆಜಮಾಡಿಯ ಸರಕಾರಿ ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಯೊಂದರ ಬಾಗಿಲುಗಳ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು ನಿನ್ನೆ ರಾತ್ರಿಯ ವೇಳೆ ಅಲ್ಲಿದ್ದ ಸ್ಟೀಲ್ ಅಲ್ಮೇರಾಗಳನ್ನೂ ಒಡೆದು, ಡ್ರಾವರ್‌ಗಳನ್ನು ತೆರೆದು ಒಟ್ಟು ಸುಮಾರು 91020 ರೂ. ನಗದು ಕಳ್ಳತನಗೈದಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಹೆಜಮಾಡಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಕೊಠಡಿಯ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನೂ ಒಡೆದು ಅದರೊಳಗೆ ಅಕ್ಷರ ದಾಸೋಹ ಆಹಾರ ವಸ್ತು ಸಾಮಾಗ್ರಿ ಖರೀದಿಗೆಂದು ಇರಿಸಿದ್ದ 15,000 ರೂ. ನಗದನ್ನು ಕಳವುಗೈದಿದ್ದಾರೆ. ಸರಕಾರಿ ಪ. ಪೂ. ಕಾಲೇಜು ಕೊಠಡಿಯ ಬಾಗಿಲನ್ನೂ ಒಡೆದು ಕಳ್ಳತನಕ್ಕೆ ಯತ್ನ ನಡೆಸಿದ್ದಾಗಿಯೂ ಪಡುಬಿದ್ರಿ ಪೊಲೀಸರಿಗೆ ನೀರುವ ದೂರಲ್ಲಿ ತಿಳಿಸಲಾಗಿದೆ.
ಹೆಜಮಾಡಿ ಪೇಟೆ ಬದಿಯಲ್ಲೇ ಇರುವ ಖಾಸಗಿ ಅಲ್ ಅಝ್ಹರ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಕಚೇರಿಯ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು ಕಚೇರಿಯಲ್ಲಿದ್ದ ದಾಖಲೆಗಳನ್ನೆಲ್ಲಾ ಚಲ್ಲಾಪಿಲ್ಲಿಗೊಳಿಸಿದ್ದಾರೆ. ಅಲ್ಲೇ ಡ್ರಾವರಿನಲ್ಲಿ ಕುರ್ಚಿ ಖರೀದಿಗೆಂದು ಇರಿಸಿದ್ದ 45,000 ರೂ., ಶೈಕ್ಷಣಿಕ ಪ್ರವಾಸಕ್ಕೆಂದು ಸಂಗ್ರಹಿಸಿಟ್ಟಿದ್ದ 11,000 ರೂ. ಮತ್ತು ಶಾಲಾ ಶುಲ್ಕವಾಗಿ ಸಂಗ್ರಹಿಸಿದ್ದ 20,020 ರೂ. ನಗದು ಸೇರಿದಂತೆ ಒಟ್ಟು 76,020 ರೂ. ಕಳವುಗೈದಿದ್ದಾರೆ.
ಕಿನ್ನಿಗೋಳಿ: ಸೈಂಟ್‌ಮೇರಿಸ್ ಶಾಲೆಯಲ್ಲಿ
ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆಯ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್‌ನ ಹೊರಗಿನ ಕಬ್ಬಿಣದ ಬಾಗಿಲು ಹಾಗೂ ಪ್ರಾಂಶುಪಾಲರ ಕಚೇರಿಯ ಬೀಗವನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಜಾಲಾಡಿದ್ದಾರೆ.
ಬಳಿಕ ಒಳಭಾಗದಿಂದ ಕಾಲೇಜಿನ ಆಫೀಸ್ ರೂಮ್‌ಗೆ ನುಗ್ಗಿ ಏಳು ಕಪಾಟುಗಳನ್ನು ಹಾಗೂ ಕಂಪ್ಯೂಟರ್ ಡ್ರಾವರ್‌ಗಳನ್ನು ಜಾಲಾಡಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಿಗಾ ವಹಿಸಬೇಕಿದೆ
ಕಳೆದ ಕೆಲವು ದಿನಗಳಿಂದ ಕಳ್ಳರು ಶಾಲೆ – ಕಾಲೇಜುಗಳಿಗೆ ನುಸುಳಿ ಕಳವು ಗೈಯುತ್ತಿದ್ದಾರೆ. ಈ ಬಗ್ಗೆ ಪೊಲೀಸರು, ಶಾಲಾಡಳಿತ ಮಂಡಳಿ ಸೂಕ್ತ ನಿಗಾ ವಹಿಸಬೇಕಿದೆ.