ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮೇ 27ರಂದು ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಲಿರುವ ಪ್ರೊ| ಎಂ.ಎ. ಹೆಗಡೆ ಮತ್ತು ಮಟ್ಟಿ ಮುರಳೀಧರ ರಾವ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ಸ್ವೀಕರಿಸಲಿರುವ ಚಂದ್ರಶೇಖರ ರಾವ್ ಬಿ. ಅವರ ಕಿರು ಪರಿಚಯ.
ಪ್ರೊ| ಎಂ.ಎ. ಹೆಗಡೆ
ಎಪ್ಪತ್ತರ ಹರೆಯದ ಪ್ರೊ| ಎಂ.ಎ. ಹೆಗಡೆ ಪ್ರಸಂಗಕರ್ತ, ಹವ್ಯಾಸಿ ಯಕ್ಷಗಾನ ಕಲಾವಿದ, ಸಂಸ್ಕೃತ-ಕನ್ನಡ ವಿದ್ವಾಂಸರಾಗಿ ಅನೇಕ ಹೊತ್ತಗೆಗಳನ್ನು ಪ್ರಕಟಿಸಿದವರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಟಕಲ್ ಇವರ ಹುಟ್ಟೂರು. ಅಣ್ಣಪ್ಪ ಹೆಗಡೆ- ಕಾಮಾಕ್ಷಿ ತಂದೆ ತಾಯಂದಿರು. ಸಂಸ್ಕೃತದಲ್ಲಿ ಸ್ನಾತಕೊತ್ತರ ಪದವಿ ಪಡೆದು ಹುಬ್ಬಳ್ಳಿಯಲ್ಲಿ ಎರಡು ವರ್ಷ ಉಪನ್ಯಾಸಕರಾಗಿ ಮುಂದೆ ಸಿದ್ದಾಪುರದ ಮಹಾತ್ಮಾಗಾಂಧಿ ಶತಾಬ್ದಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತರು.
ಕಾನ್ಸೂರು, ಗಡಿಮನೆ ಮುಂತಾದ ಬಯಲಾಟ ಮೇಳಗಳಲ್ಲಿ; ಮುಖ್ಯವಾಗಿ ಇಡಗುಂಜಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ವೇಷ ಮಾಡಿದವರು. ಸೀತಾವಿಯೋಗ, ತ್ರಿಶಂಕು ಚರಿತೆ, ರಾಜಾಕರಂದಮ, ವಿಜಯೀವಿಶ್ರುತ, ಧರ್ಮದುರಂತ, ವಜ್ರ ಕೀರೀಟ, ಆದಿಚುಂಚನ ಗಿರಿ ಕ್ಷೇತ್ರ ಮಹಾತ್ಮೆ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಯಕ್ಷಗಾನ ಕೃತಿಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ ಸಾಹಿತ್ಯದಲ್ಲಿಯೇ ಅತ್ಯಂತ ಹಳೆಯ ಆದಿಪರ್ವ ಪ್ರಸಂಗವೂ ಸೇರಿದಂತೆ ಹಸ್ತಪ್ರತಿಗಳ ಸಂಗ್ರಹ ಸಂಶೋಧನೆಯಲ್ಲಿ ತೊಡಗಿ ಹಲವು ಅಮೂಲ್ಯ ಹಳೆಯ ಪ್ರಸಂಗಗಳನ್ನು ಸಂಪಾದಿಸಿದ್ದಾರೆ. ಪ್ರಸಕ್ತ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಇವರನ್ನು ಅರಸಿ ಬಂದಿದೆ.
ಚಂದ್ರಶೇಖರ ರಾವ್
ಎಂಬತ್ನಾಲ್ಕರ ಹರೆಯದ ಚಂದ್ರಶೇಖರ ರಾವ್ ಬಿ. ಅರ್ಥದಾರಿಯಾಗಿ, ಸಂಘಟಕರಾಗಿ ಪ್ರಸಿದ್ಧರು. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಯವರು. ಬಿ.ವೆಂಕಟರಾವ್-ಲಕ್ಷ್ಮೀ ದಂಪತಿಯ ಪುತ್ರರಾದ ಇವರು ಸಿದ್ಧಕಟ್ಟೆ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರು.
ಯಕ್ಷಗಾನ ಆಸಕ್ತಿ ಬೆಳಸಿಕೊಂಡು ಪುಚ್ಚಕೆರೆ ರಾಮಕೃಷ್ಣ ಮಯ್ಯರ ಶಿಷ್ಯರಾಗಿ ಹಲವು ಹಿರಿ-ಕಿರಿಯ ಒಡನಾಡಿ ಕಲಾವಿದರೊಂದಿಗೆ ತಾವು ಬೆಳೆದು ಉಳಿದವರನ್ನೂ ಬೆಳೆಸಿದವರು. ಭಾಗವತ ಸುಳ್ಯ ಸುಬ್ರಾಯ ಭಟ್, ದಿವಾಣ ಭೀಮ ಭಟ್, ಸುಳ್ಯ ಮಹಾಬಲ ಭಟ್, ಸಿದ್ಧಕಟ್ಟೆ ವಾಸು ಶೆಟ್ಟಿ ಮೊದಲಾದ ಕಲಾವಿದರೊಂದಿಗೆ ಆ ಭಾಗದಲ್ಲಿ ತಾಳಮದ್ದಳೆ ಕೂಟ ಸಂಘಟಿಸಿದವರು.ಶೇಣಿ, ಸಾಮಗ, ಪೆರ್ಲ, ದೇರಾಜೆ, ಜೋಷಿ ಮೊದಲಾದ ಹಿರಿಯ ಕಲಾವಿದರ ಕೂಟಗಳಲ್ಲೂ ತಮ್ಮ ಅರ್ಥಧಾರಿಕೆಯಿಂದ ಶ್ರೋತೃಗಳ ಮನಗೆದ್ದವರು. ಕೃಷ್ಣ, ಮಾಗಧ, ಉತ್ತರ, ಸುಧನ್ವ, ಭೀಷ್ಮ, ದಶರಥ, ಸುಗ್ರೀವ ಮೊದಲಾದ ಪ್ರಧಾನ ಪಾತ್ರಗಳನ್ನು ಸಾಮಾನ್ಯ ಕೂಟಗಳಲ್ಲಿ ನಿರ್ವಹಿಸಿದರೆ ಹಿರಿಯರ ಕೂಟಗಳಲ್ಲಿ ಮಂಡೋದರಿ, ಸೀತೆ, ತಾರೆ ಮೊದಲಾದ ಸ್ತ್ರೀ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರು. ಚೊಕ್ಕ ಭಾಷೆ, ಪ್ರಸಂಗದ ಮೇಲಿನ ಹಿಡಿತ, ಸಂಭಾಷಣಾ ವಿಧಾನ, ಹೊಂದಾಣಿಕೆ ಮನೋಭಾವದ ಇವರು ಗುಣಮಟ್ಟದ ಅರ್ಥಧಾರಿ ಎಂದು ಗುರುತಿಸಲ್ಪಟ್ಟವರು.
ಯಕ್ಷಗಾನ ಕಲಾವಿಕಾಸ ಸಂಘ ಮಂಚಿ ಇದರ ಸ್ಥಾಪಕರಾಗಿ ಮೂವತ್ತು ವರ್ಷ ತಾಳಮದ್ದಳೆಗಳನ್ನು ನಡೆಸಿಕೊಟ್ಟವರು. ತಾಳಮದ್ದಳೆಗಳ ಸಂಘಟನೆ ಮತ್ತು ಸಂಯೋಜನೆಯ ಮೂಲಕ ತಾಳಮದ್ದಳೆ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದವರು.
ಪ್ರೊ| ನಾರಾಯಣ ಎಂ. ಹೆಗಡೆ