Advertisement
ಪಾಕಿಸ್ಥಾನದ ಲಾಹೋರಿನಲ್ಲಿರುವ ಪ್ರಸಿದ್ಧ ಸ್ಥಳ ಹೀರಾಮಂಡಿ! ಪ್ರಸಕ್ತ ಶಾಪಿಂಗ್ ಹಾಗೂ ಫುಡ್ ಸ್ಟ್ರೀಟ್ ಆಗಿರುವ ಈ ಸ್ಥಳವು ರಾತ್ರಿ ವೇಳೆ ವೇಶ್ಯಾವಾಟಿಕೆ ದಂಧೆ ನಡೆಯುವ “ರೆಡ್‌ಲೈಟ್’ ಏರಿಯಾ ಎಂದೇ ಗುರುತಿಸಿ ಕೊಂಡಿದೆ. ಆದರೆ ಇಲ್ಲಿ ವಿಶಾಲವಾಗಿ ಚಾಚಿಕೊಂಡ ರಸ್ತೆಗಳು, ಬಣ್ಣ ಕಳೆದುಕೊಂಡ ನಿಂತ ಬಾನೆತ್ತರದ ಕಟ್ಟಡಗಳು ಕಳೆದುಹೋದ ಈ ನಗರಿಯ ಬೇರೆಯದ್ದೇ ಇತಿಹಾಸವನ್ನು ಸಾರುತ್ತಿವೆ. ಈ ಹೀರಾಮಂಡಿ ಒಂದಾನೊಂದು ಕಾಲದಲ್ಲಿ ಕಲಾವೈವಿಧ್ಯತೆಯನ್ನು ಪೋಷಿಸಿದ ಸಾಂಸ್ಕೃತಿಕ ಭೂಮಿ, ಸ್ವಾತಂತ್ರ್ಯದ ಕಿಚ್ಚಿಗೆ ಒತ್ತಾಸೆಯಾದ ವೀರ ಭೂಮಿಯಾಗಿತ್ತು.
ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ತನ್ನ ಮುಸ್ಲಿಂ ಪ್ರೇಯಸಿ, ರಾಜ ನರ್ತಕಿಯರು (ತವಾಯಿಫ್) ಹಾಗೂ ಖಾಸಗಿ ಸಖೀಯರಿಗಾಗಿ ರೂಪಿಸಿಕೊಟ್ಟಿದ್ದ ನಗರ “ಶಾಹಿ ಮೊಹಲ್ಲಾ’. ರಾಜರು, ನವಾಬರು ವಾಸವಿದ್ದ ಪಾಕಿಸ್ಥಾನದ ಹೃದಯಭಾಗವಾದ ಲಾಹೋರಿನಲ್ಲೇ ಈ ಶಾಹಿ ಮೊಹಲ್ಲಾ ಕೂಡ ಇತ್ತು. 1839ರಲ್ಲಿ ರಂಜಿತ್ ಸಿಂಗ್ ಮೃತಪಟ್ಟ ಬಳಿಕ ಆತನ ನಂಬಿಕಸ್ಥ ಪ್ರಧಾನಮಂತ್ರಿಯಾಗಿದ್ದ ಹೀರಾಸಿಂಗ್ ಡೋಗ್ರಾ 1843ರಲ್ಲಿ ಶಾಹಿ ಮೊಹಲ್ಲಾದಲ್ಲಿ ಧಾನ್ಯ ಮಾರುಕಟ್ಟೆಯೊಂದನ್ನು ಆರಂಭಿಸಿದ್ದರು. ಸ್ಥಳೀಯ ಆರ್ಥಿಕತೆಗೆ ಒತ್ತು ನೀಡುವುದಕ್ಕಾಗಿ ಸ್ಥಾಪಿಸುವ ಈ ಮಾರುಕಟ್ಟೆಯನ್ನು “ಹೀರಾ ಸಿಂಗ್ ಮಂಡಿ’ ಎಂಬ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ವಜ್ರ ವ್ಯಾಪಾರಕ್ಕೂ ಪ್ರಸಿದ್ಧವಾಗಿದ್ದ ಈ ನಗರಿ ಬಳಿಕ “ಹೀರಾಮಂಡಿ’ ಎಂದು ಜನಪ್ರಿಯವಾಯಿತು. ಇದರೊಂದಿಗೆ ಇಲ್ಲಿದ್ದ ತವಾಯಿಫ್ಗಳು (ರಾಜ ನರ್ತಕಿಯರು)ಕೂಡ ಮುನ್ನಲೆಗೆ ಬಂದರು.
Related Articles
ನವಾಬರ ಆಡಳಿತದ ಅವಧಿಯಲ್ಲಿ ಹೀರಾಮಂಡಿಯಲ್ಲಿ ರಾಜಮನೆತನದಷ್ಟೇ ಪ್ರಭಾವಶಾಲಿಯಾಗಿದ್ದವರು ತವಾಯಿಫ್ ಗಳು. ರಾಜಮನೆತನಗಳೊಂದಿಗೆ ಆಪ್ತರಾಗಿದ್ದ ಈ ರಾಜನರ್ತಕಿಯರು ವಿವಿಧ ನೃತ್ಯ ಪ್ರಕಾರ, ಸಂಗೀತ, ಕಾವ್ಯ, ಕವನ, ಸಾಹಿತ್ಯ, ಗಾಯನ, ಭಾಷಾ ವಿದ್ವತ್ ಹೊಂದಿದ್ದ ವರಾಗಿದ್ದರು. ನವಾಬರೊಂದಿಗೆ ನೇರ ಸಂಪರ್ಕದಲ್ಲಿದ್ದ ಇವರು ತಮ್ಮ ಕಲಾ ಪ್ರಕಾರಗಳ ಪ್ರದರ್ಶನದಿಂದಲೇ ಜೀವನ ನಡೆಸುತ್ತಿದ್ದರು. ನವಾಬರ ಖಾಸಗಿ ನರ್ತಕಿಯರಾಗಿ, ಸಾಮ್ರಾಜ್ಯದ ರಾಜಕಾರಣದಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಿದ್ದರು. ಹೀರಾಮಂಡಿ ವ್ಯಾಪಾರಿ ತಾಣವಾಗಿ ಬದಲಾದ ಬಳಿಕ ನಗರಕ್ಕೆ ಬರುವ ಅತ್ಯಂತ ಶ್ರೀಮಂತರೂ ತವಾಯಿಫ್ ಗಳ ನೃತ್ಯವನ್ನು ನೋಡಲು ದೇಶ- ವಿದೇಶ ಗಳಿಂದಲೂ ಹೀರಾಮಂಡಿಗೆ ಆಗಮಿಸುತ್ತಿದ್ದರು. ಕಲಾಪೋಷಕರಾಗಿದ್ದ ನವಾಬರು ತವಾಯಿಫ್ಗಳಿಗೆ ಸಮಾಜದಲ್ಲಿಯೂ ಅತ್ಯುನ್ನತ ಸ್ಥಾನ ಕಲ್ಪಿಸಿದ್ದರು. ನವಾಬರ ಆಶ್ರಯದಲ್ಲಿದ್ದೂ ತವಾಯಿಫ್ ಗಳು ಹೀರಾಮಂಡಿಯನ್ನು ಸಾಂಸ್ಕೃತಿಕವಾಗಿ ಶ್ರೀಮಂತ ನಗರವನ್ನಾಗಿಸಿದ್ದರು. ಆದರೆ ಬ್ರಿಟಿಷ್ ಆಡಳಿತಾವಧಿಯಲ್ಲಿ ತವಾಯಿಫ್ ಗಳು ವೇಶ್ಯೆಯ ರಾಗಿ ಬದಲಾಗುವಂಥ ಪರಿಸ್ಥಿತಿ ಎದುರಾಯಿತು.
Advertisement
ಬ್ರಿಟಿಷರ ಆಡಳಿತಕ್ಕೆ ಬಲಿಯಾದ ನಗರ ಲಾಹೋರ್ ಬ್ರಿಟಿಷರ ಕೈವಶವಾಗುತ್ತಿದ್ದಂತೆ ನವಾಬರ ಕೈಗಳು ಖಾಲಿಯಾಗ ತೊಡಗಿದವು. ನವಾಬರು ರಾಜಾಶ್ರಯವಾಗಿ ನೀಡಿದ್ದ ಭೂಮಿ, ಬಿರುದುಗಳನ್ನು ಬ್ರಿಟಿಷರು ಹಿಂಪಡೆಯಲು ಆರಂಭಿಸಿದರು. ಬ್ರಿಟಿಷರ ಈ ದಾಷ್ಟ ಹೀರಾಮಂಡಿಯನ್ನು ತಲುಪಲೂ ಹೆಚ್ಚು ಸಮಯ ಬೇಕಿರಲಿಲ್ಲ. ತವಾಯಿಫ್ ಗಳಿಗೆ ರಾಜಾಶ್ರಯ ನೀಡಿದ್ದ ನವಾಬರು ಅವರಿಗೆ ರಕ್ಷಣೆ ಒದಗಿಸದೇ ಕೈ ಚೆಲ್ಲಿದರು. ಬ್ರಿಟಿಷ್ ಅಧಿಕಾರಿಗಳು ಹೀರಾಮಂಡಿಯಲ್ಲಿ ಮೊಕ್ಕಾಂ ಹೂಡಿ ಆ ನಗರವನ್ನು “ಬಜಾರ್-ಹಿ-ಹುಸ್ (ಸೌಂದರ್ಯವತಿಯರ ಮಾರುಕಟ್ಟೆ) ಎಂದು ಬದಲಿಸಿದರು. ತವಾಯಿಫ್ ಗಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲು ಆರಂಭಿಸಿದರು. ರಾಜಮನೆತನದ ಪೋಷಕರ ಜಾಗಕ್ಕೆ ನಗರದ ಶ್ರೀಮಂತ ವ್ಯಕ್ತಿಗಳನ್ನು ತಂದು ಕೂರಿಸಿ, ತವಾಯಿಫ್ ಗಳನ್ನು ಸಾಮಾನ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಾನಮಾನಕ್ಕೆ ಇಳಿಸಿದರು. ಈ ಮೂಲಕ ಕಲಾ ಪರಂಪರೆಗೆ ಹೆಸರುವಾಸಿಯಾಗಿದ್ದ ನಗರವೊಂದು ವೇಶ್ಯಾವಾಟಿಕೆಯ ತಾಣವಾಗಿ ತನ್ನ ಚಹರೆ ಬದಲಿಸಿಕೊಂಡಿತು. ಪ್ರಮುಖ ತವಾಯಿಫ್ ಗಳು
ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಮಹತ್ತರ ಕೊಡುಗೆಯಿಂದಾಗಿ ಹಲವಾರು ತವಾಯಿಫ್ಗಳು ಇತಿಹಾಸದ ಪುಟಗಳಲ್ಲಿ ತಮ್ಮ ಛಾಪನ್ನು ಉಳಿಸಿದ್ದಾರೆ. ಅಂಥವರ ಪೈಕಿ ಬೇಗಂ ಸಮ್ರು ಕೂಡ ಓರ್ವರು. ಅದ್ಭುತ ಗಾಯನ ಮತ್ತು ನೃತ್ಯ ಕಲೆಯಿಂದ ಮಹಾರಾಜ ರಂಜಿತ್‌ಸಿಂಗ್‌ನ ಮನಗೆದ್ದ ಸಮ್ರು ತವಾಯಿಫ್ ಸ್ಥಾನದಿಂದ ರಾಣಿ ಸ್ಥಾನವನ್ನು ಮುಡಿಗೇರಿಸಿಕೊಂಡರು. ವಜಿರಾನ್ ಎಂಬ ತವಾಯಿಫ್ ಲಕ್ನೋದ ಕೊನೆಯ ನವಾಬ ವಜೀದ್ ಅಲಿ ಶಾ ನಿಂದಲೇ ಬಹುಗೌರವಕ್ಕೆ ಪಾತ್ರರಾಗಿದ್ದರಲ್ಲದೇ, 1857ದಂಗೆಯಲ್ಲೂ ಮಹತ್ತರ ಪಾತ್ರ ವಹಿಸಿದ್ದರು. ಗೌಹಾರ್ ಜಾನ್ ಎಂಬ ತವಾಯಿಫ್ ಅದ್ಭುತ ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದು, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಡಿನ ರೆಕಾರ್ಡಿಂಗ್ ಮಾಡಿದವರೆಂಬ ಖ್ಯಾತಿಗೂ ಪಾತ್ರರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ
ತವಾಯಿಫ್ ಗಳ ಪಾತ್ರ
ಬ್ರಿಟಿಷರ ದೌರ್ಜನ್ಯ ಹೆಚ್ಚಾದಂತೆಲ್ಲ ಅಖಂಡ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವೂ ಹೆಚ್ಚಿತು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಖುದ್ದು ತವಾಯಿಫ್ ಗಳೇ ಹೋರಾಟಕ್ಕೆ ಧುಮುಕಿದರು. ಕ್ರಾಂತಿಕಾರಿಗಳಿಗೆ ತಮ್ಮ ಮನೆಗಳಲ್ಲಿ ಆಶ್ರಯ ನೀಡಿದ್ದಲ್ಲದೇ ತಮ್ಮ ವೃತ್ತಿಯಿಂದ ಸಂಪಾದಿಸಿದ ಹಣ, ಒಡವೆಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲೆಂದು ಕ್ರಾಂತಿಕಾರಿಗಳಿಗೆ ಒಪ್ಪಿಸಿದರು. ತಮ್ಮ ಒಡನಾಟದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳೊಂದಿಗೆ ಆಪ್ತರಾಗಿರುವಂತೆ ನಟಿಸಿ ಗೂಢಚರ್ಯೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗತ್ಯವಾದ ಮಾಹಿತಿಗಳನ್ನು ಕಲೆಹಾಕಿದರು. ಎಷ್ಟೋ ಮಂದಿ ತವಾಯಿಫ್ಗಳು ಇಂಥ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಗಲ್ಲು ಶಿಕ್ಷೆಗೂ ಗುರಿಯಾದರು. ಹೀಗೆ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕಿದ ತವಾಯಿಫ್ಗಳು ಮತ್ತವರ ಪರಂಪರೆ ಇಂದು ವೇಶ್ಯೆಯರಾಗಿ ಮಾತ್ರವೇ ಗುರುತಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕಳಚಿದ ತವಾಯಿಫ್
ಪರಂಪರೆಯ ಕೊಂಡಿಗಳು
ಬ್ರಿಟಿಷರ ಆಡಳಿತ, ಸ್ವಾತಂತ್ರ್ಯ ಹೋರಾಟದ ಬಳಿಕ ಹಲವಾರು ತವಾಯಿಫ್ ಗಳು ಹೀರಾಮಂಡಿಯನ್ನು ತೊರೆದು ರಂಗಭೂಮಿ, ಸಿನೆಮಾಗಳತ್ತ ಹೆಜ್ಜೆಹಾಕಿದರು. ಹೀರಾಮಂಡಿಯಲ್ಲಿ ಹುಟ್ಟಿಕೊಂಡ ಹಲವು ನೃತ್ಯ, ಸಂಗೀತ ಪ್ರಕಾರಗಳನ್ನು ಕಾಪಾಡುವುದಕ್ಕಾಗಿ ಬೆರಳೆಣಿಕೆಯ ತವಾಯಿಫ್ ಗಳು ನಿರಂತರವಾಗಿ ಶ್ರಮಿಸಿದರು. ತವಾಯಿಫ್ ಪರಂಪರೆಯ ಕೊನೆಯ ಮಹಿಳೆಯರಾಗಿದ್ದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದಲ್ಲಿ ಹೆಸರುವಾಸಿಯಾಗಿದ್ದ ಮುಲ್ಕಾ ಫುಖರಾಜ್ 2004ರಲ್ಲಿ ಹಾಗೂ ಪ್ರಸಿದ್ಧ ಗಾಯಕಿ ಬೇಗಂ ಅಖ್ತರ್ ಅವರ ಶಿಷ್ಯೆ ಜರೀನಾ ಬೇಗಂ 2018ರಲ್ಲಿ ನಿಧನ ಹೊಂದುವ ಮೂಲಕ ಈ ಪರಂಪರೆಯ ಕೊನೆಯ ಕೊಂಡಿಯೂ ಕಳಚಿ ಬಿದ್ದಂತಾಗಿದೆ. -ಅಶ್ವಿನಿ ಸಿ. ಆರಾಧ್ಯ