ಕೃಷಿ ಪ್ರಧಾನ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವೆ ಇರುವ ವಿಶೇಷ
ಬಾಂಧವ್ಯದ ಆಯಾಮಗಳನ್ನು ನಾಟಕ ಅತ್ಯಂತ ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿತು.
ನಾಲ್ಕೂವರೆ ದಶಕಗಳಿಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಲಾವಣ್ಯ ಬೈಂದೂರು ಹಾಗೂ ರೋಟರಿ ಬೈಂದೂರು ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಿನ್ನರ ಮೇಳ, ತುಮರಿ ಇವರು ನಡೆಸಿಕೊಟ್ಟ ಹೀರಾ ಮೋತಿ ನಾಟಕ ಮೂಕ ಪ್ರಾಣಿಗಳ ಕುರಿತು ಅಂತಃಕರಣ ಜಾಗೃತವಾಗುವಂತೆ ಮಾಡಿತು. ಹಿಂದಿಯ ಸಾಹಿತಿ ಪ್ರೇಮಚಂದ್ ರಚಿಸಿದ ಹಾಗೂ ಶಾ ಬಾಲೂ ರಾವ್ ಕನ್ನಡಕ್ಕೆ ಅನುವಾದಿಸಿದ ನಾಟಕದಲ್ಲಿ ಹೀರಾ ಮೋತಿ ಎನ್ನುವ ಜೋಡೆತ್ತುಗಳು ತಮ್ಮ ದುಃಖಭರಿತ ಬದುಕಿನ ವೃತ್ತಾಂತವನ್ನು ಎಳೆ ಎಳೆಯಾಗಿ ತೆರೆದಿಡುತ್ತವೆ. ನಿರ್ದೇಶಿಸಿದವರು ಕೆ. ಜಿ. ಕೃಷ್ಣಮೂರ್ತಿ.
ಕೃಷಿ ಪ್ರಧಾನ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಮತ್ತು ಸಾಕುಪ್ರಾಣಿಗಳ ನಡುವೆ ಇರುವ ವಿಶೇಷ ಬಾಂಧವ್ಯದ ಆಯಾಮಗಳನ್ನು ನಾಟಕ ಅತ್ಯಂತ ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸಿತು. ಯಜಮಾನನ ಪ್ರೀತಿಪಾತ್ರರಾಗಿ ಉತ್ತಮ ಆರೈಕೆಯೊಂದಿಗೆ ಸಂತೋಷದಿಂದಿದ್ದ ಕಟ್ಟುಮಸ್ತಾದ ಎತ್ತುಗಳು ಮನೆಯೊಡತಿಯ ತವರಿನವರ ಜತೆ ಒಲ್ಲದ ಮನಸ್ಸಿನಿಂದ ತೆರಳಬೇಕಾಗುತ್ತದೆ. ಅಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯಿಂದ ಬೇಸತ್ತು ಮತ್ತೆ ಯಜಮಾನನಲ್ಲಿಗೆ ಮರಳುತ್ತವೆ. ದುರುಳರ ಸ್ವಾಮಿತ್ವದಿಂದ ತಪ್ಪಿಸಿಕೊಂಡು ಬಂದ ಎತ್ತುಗಳು ಹಟ್ಟಿಯನ್ನು ಕಂಡು ಸಂಭ್ರಮಿಸುವ, ಯಜಮಾನನ ಸ್ಪರ್ಶದಿಂದ ಆನಂದ ತುಂದಿಲರಾಗುವ ಅಭಿನಯ ಮನಕಲಕುತ್ತದೆ.
ಕೃಷಿ ಕಾರ್ಯಕ್ಕೆ ಹೀರಾ ಮೋತಿಯ ಅಗತ್ಯವಿದೆ ಎಂದು ಪೀಡಿಸುವ ತವರಿನವರ ಒತ್ತಾಯಕ್ಕೆ ಮಣಿದ ಮನೆಯೊಡೆಯ ಪುನಃ ಅವರೊಂದಿಗೆ ತೆರಳುವಂತೆ ಜೋಡೆತ್ತಿನ ಮನವೊಲಿಸುತ್ತಾನೆ. ಮತ್ತೂಮ್ಮೆ ದುಷ್ಟರ ಕೈಯ್ಯಲ್ಲಿ ಸಿಲುಕಿದ ಹೀರಾ ಮೋತಿ ತವರಿನಲ್ಲಿನ ರಾಕ್ಷಸಿ ದೌರ್ಜನ್ಯಕ್ಕೆ ಹೈರಾಣಾಗುತ್ತವೆ. ಅನ್ಯಾಯದ ವಿರುದ್ಧ ಬಂಡಾಯವೇಳುವ ಕೆಚ್ಚು ಅವುಗಳಲ್ಲಿ ಪುಟಿದೇಳುತ್ತದೆ. ವೇದನೆ,ದುಗುಡ-ದುಮ್ಮಾನ,ಉಚಿತ-ಅನುಚಿತ,ನ್ಯಾಯ-ಅನ್ಯಾಯದ ಕುರಿತಾದ ಅವುಗಳ ಸಂಭಾಷಣೆ ಪ್ರಭಾವಶಾಲಿಯಾಗಿತ್ತು. ಆಕ್ರಮಣಕಾರಿ ಕಾಡು ಪ್ರಾಣಿಯೊಂದಿಗೆ ಕೆಚ್ಚಿನಿಂದ ಸೆಣಸುವ, ಜತೆಗಾರರಿಗಾಗಿ ತ್ಯಾಗ ಪ್ರದರ್ಶಿಸುವ, ಮಿತ್ರತ್ವದ ಮಹತ್ವ ಸಾರುವ ಮಹಾನ್ ಉದಾಹರಣೆ ಪ್ರಸ್ತುತ ಪಡಿಸುವ ಹೀರಾ ಮೋತಿಯ ಬತ್ತದ ಜೀವನ ಪ್ರೀತಿ ಅನುಕರಣೀಯ. ಬದುಕಿನ ಕಷ್ಟಕಾರ್ಪಣ್ಯಗಳನ್ನು ದಿಟ್ಟವಾಗಿ ಎದುರಿಸಿ ಮತ್ತೂಮ್ಮೆ ಮನೆಯೊಡೆಯನನ್ನು ಸೇರುವ ಹೀರಾ ಮೋತಿ ವಿಶೇಷ ಸಂದೇಶ ನೀಡುತ್ತದೆ.
ಪ್ರಾಣಿಗಳಿಗೂ ಮನು ಷ್ಯರಂತೆ ಭಾವನೆಗಳಿವೆ ಎನ್ನುವ ನಾಟಕ ಕರ್ತರ ಸಂದೇಶವನ್ನು ಹೀರಾ ಮೋತಿ ಜೋಡಿ ಎತ್ತುಗಳಾಗಿ ಅಭಿನಯಿಸಿದ ಕಲಾವಿದರು ಮನೋಜ್ಞವಾಗಿ ನೀಡುತ್ತಾರೆ. ಪ್ರಾಣಿಗಳ ಹಾವಭಾವಗಳನ್ನು, ಜತೆ ಎತ್ತನ್ನು ನಾಲಿಗೆ ಹೊರಚಾಚಿ ನೆಕ್ಕುವ ಮೂಲಕ ವ್ಯಕ್ತಪಡಿಸುವ ಪ್ರೀತಿಯನ್ನು, ಯಜಮಾನನ್ನು ಕಂಡಾಗ ತೋರ್ಪಡಿಸುವ ಆನಂದಾತಿರೇಕವನ್ನು, ಹುಟ್ಟೂರಿನ ಸೆಳೆತ, ಹಸಿವು, ನೀರಡಿಕೆ, ಆಯಾಸದ ಹತಾಶೆ, ಕರುಣೆ ತೋರಿದವರ ಕುರಿತು ಕಾಳಜಿ, ಅನ್ಯಾಯ ಎಸಗಿದವರ ಕುರಿತು ತೋರಿಸುವ ಅಪಾರ ರೋಶವೇ ಮೊದಲಾದವುಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಶ್ರಮಿಸಿದ ಕಲಾವಿದರ ಅಭಿನಯ ಕೌಶಲಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಪ್ರಾಣಿಗಳ ಮಾನಸಿಕ ತುಮುಲ-ತುಡಿತಗಳ ಅಮೂರ್ತತೆಯನ್ನು ಸತ್ವಯುತ ಸಂಭಾಷಣೆಯ ಮೂಲಕ ಮೂರ್ತರೂಪ ಕೊಟ್ಟ ನಾಟಕ ಕದಲದಂತೆ ಕಟ್ಟಿ ಹಾಕಿತು.ಸ್ವಾತಂತ್ರ್ಯಪೂರ್ವ ಕಾಲದ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ್ದ ಪ್ರೇಮಚಂದರ ರಚನೆ ಇಂದಿಗೂ ಪ್ರಾಸಂಗಿಕವೆನಿಸುವ ಮೌಲ್ಯಗಳನ್ನೊಳಗೊಂಡಿದೆ.
ಬೈಂದೂರು ಚಂದ್ರಶೇಖರ ನಾವಡ