Advertisement

ಜೀವಕ್ಕೆ ಮುಳುವಾಯ್ತು ಮುಳ್ಳುಹಂದಿ ಬೇಟೆ

10:57 AM Dec 01, 2018 | Harsha Rao |

ಕುಂಬಳೆ: ಧರ್ಮತ್ತಡ್ಕ ಬಳಿಯ ಬಾಳಿಕೆಯಲ್ಲಿ ಗುರುವಾರ ಸಂಜೆ ಮುಳ್ಳು ಹಂದಿ ಬೇಟೆಗಾಗಿ ಸುರಂಗದೊಳಗೆ ನುಗ್ಗಿ ನಾಪತ್ತೆಯಾಗಿದ್ದ ಗುಂಪೆಯ ನಾರಾಯಣ ನಾಯ್ಕ ಯಾನೆ ರಮೇಶ್‌ (42) ಅವರ ಮೃತದೇಹವನ್ನು ಶುಕ್ರವಾರ ಸಂಜೆ  ಹೊರತರಲಾಯಿತು.

Advertisement

ಘಟನೆ  ವಿವರ
ಪೊಸಡಿಗುಂಪೆಯ ದಿ| ಸುಬ್ಬ ನಾಯ್ಕ – ಲಲಿತಾ ದಂಪತಿ ಪುತ್ರ, ಕೂಲಿ ಕಾರ್ಮಿಕ ನಾರಾಯಣ ನಾಯ್ಕ ಅವರು ಗುರುವಾರ ಸಂಜೆ ಕೆಲಸಬಿಟ್ಟು ಮಿತ್ರರೊಂದಿಗೆ ಮುಳ್ಳು ಹಂದಿ ಬೇಟೆಗಾಗಿ ಸುರಂಗಕ್ಕೆ ನುಗ್ಗಿದ್ದರು. ಸೊಂಟಕ್ಕೆ ನೈಲಾನ್‌ ಹಗ್ಗ ಬಿಗಿದು ಸುರಂಗದೊಳಗೆ ನುಗ್ಗಿದ್ದ ಅವರು, “ಹಂದಿ ಸಿಕ್ಕಿದ ಕೂಡಲೇ ಕೂಗುತ್ತೇನೆ. ಆ ಬಳಿಕ  ಎಳೆಯಿರಿ’ ಎಂದು ಮಿತ್ರರಲ್ಲಿ ತಿಳಿಸಿದ್ದರು. ಗಂಟೆಗಟ್ಟಲೆ ಕಾದರೂ ಇವರ ಶಬ್ದ ಕೇಳದಾಗ ಮಿತ್ರರು ಕಂಗಾಲಾಗಿ ಇತರರಿಗೆ ತಿಳಿಸಿದರು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಉಪ್ಪಳ ಮತ್ತು ಕಾಸರಗೋಡಿನಿಂದ ರಾತ್ರಿ 15 ಸಿಬಂದಿಯ ಅಗ್ನಿಶಾಮಕ ದಳತಂಡ ಆಗಮಿಸಿ ಮಧ್ಯರಾತ್ರಿ ತನಕ ಸ್ಥಳೀಯ ಯುವಕರ ನೆರವಿನೊಂದಿಗೆ ಇವರನ್ನು ಹೊರತೆಗೆಯಲು ಯತ್ನಿಸಿದರೂ  ಸಾಧ್ಯವಾಗಿರಲಿಲ್ಲ.

ಶುಕ್ರವಾರ ಬೆಳಗ್ಗೆ ಮತ್ತೆ ಅಗ್ನಿಶಾಮಕ ದಳತಂಡ ಆಗಮಿಸಿ ಸ್ಥಳೀಯ ಯುವಕರ ಸಹಾಯದಿಂದ ಸುರಂಗವನ್ನು ಅಗೆದು ಅಗಲಗೊಳಿಸಿ ಸಂಜೆ 5 ಗಂಟೆಯ ಹೊತ್ತಿಗೆ ಮೃತದೇಹವನ್ನು ಹೊರತೆಗೆಯಲಾಯಿತು. ಬದಿಯಡ್ಕ ಎಸ್‌.ಐ.ಮೆಲ್ವಿನ್‌ ಜೋಸ್‌ ನೇತೃತ್ವದಲ್ಲಿ ತನಿಖೆ ನಡೆಸಿ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತರು ಪತ್ನಿ ಗಾಯತ್ರಿ, ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳಾದ ಚೈತ್ರಾ, ಚೇತನ್‌ ಮತ್ತು ಮೂರು ವರ್ಷದ  ಪುತ್ರ ಪವನ್‌ ಅವರನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಕಾಸರಗೋಡು ಸಹಾಯಕ ಜಿಲ್ಲಾಧಿಕಾರಿ ಜಯಲಕ್ಷಿ$¾à, ಬಾಡೂರು ಗ್ರಾಮಾಧಿಕಾರಿ ಸುಜಾತಾ, ಪುತ್ತಿಗೆ ಗ್ರಾಮ ಅಧ್ಯಕ್ಷೆ ಅರುಣಾ ಜೆ. ಸಹಿತ ಹಲವಾರು ಗಣ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳೂ ಆಗಮಿಸಿದ್ದಾರೆ. 

Advertisement

ದೇಹದ ಮೇಲೆ ಮಣ್ಣು ಬಿದ್ದಿತ್ತು
ಕಡಿದಾದ ಸುಮಾರು 40 ಮೀ. ನಷ್ಟು ಉದ್ದದ ಸುರಂಗದಲ್ಲಿ  ಸಾಗಿದ್ದ ನಾರಾಯಣ ನಾಯ್ಕ ಅವರು ಒಳಗಿದ್ದ ಹೊಂಡಕ್ಕೆ ತಲೆಕೆಳಗಾಗಿ ಬಿದ್ದಿದ್ದರು. ಇವರ ಮೇಲೆ ಮಣ್ಣು ಬಿದ್ದಿದ್ದು, ಕಾಲು ಮಾತ್ರ ಕಾಣುತ್ತಿತ್ತು. ಇವರಿಗೆ ಬಿಗಿದಿದ್ದ ಹಗ್ಗವನ್ನು ಎಳೆದಾಗಲೂ ಮೃತದೇಹ ಹೊರಬರಲಿಲ್ಲ. ಬಳಿಕ ಸುರಂಗದುದ್ದಕ್ಕೂ ನೆಲವನ್ನು  ಅಗೆದು  ಹೂತು ಹೋಗಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಒಳಗೆ ಗಾಳಿಯ ಕೊರತೆಯೂ  ಇತ್ತು. 

ಹಿಂದೆಯೂ ನಡೆದಿತ್ತು ದುರಂತ 
ಈ ಸ್ಥಳದಿಂದ ಸುಮಾರು 3 ಕಿ. ಮೀ. ದೂರದ ಕಟ್ಟತ್ತಡ್ಕದ ನಾಯಿಕಟ್ಟೆಯಲ್ಲಿ 2002ರಲ್ಲಿ  ಇದೇ ರೀತಿ ಪ್ರಾಣಿ ಬೇಟೆಗಾಗಿ ಸುರಂಗಕ್ಕೆ  ನುಗ್ಗಿದ್ದ ಇಬ್ಬರು ಸಹೋದರರು ಮತ್ತು ಇನ್ನೋರ್ವರು  ಉಸಿರುಗಟ್ಟಿ ಸಾವಿಗೀಡಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next