Advertisement

ಕಲ್ಪನೆಯ ಆಕೃತಿಯೊಂದು ಕನಸಲ್ಲೂ ಹೆದರಿಸಿತ್ತು!

03:45 AM Feb 07, 2017 | Team Udayavani |

ನಾನು ಮತ್ತು ನನ್ನ ಸಹಪಾಠಿ ಪೃಥ್ವಿರಾಜ್‌ ಇಬ್ಬರೂ ನಾವು ಓದಿದ ಕಾಲೇಜಿನಲ್ಲೇ ಕಾಕತಾಳೀಯವೋ ಎಂಬಂತೆ ಏಕಕಾಲಕ್ಕೆ ಉಪನ್ಯಾಸಕರಾಗಿ ಸೇರಿಕೊಂಡೆವು. ಇದು ಎರಡು ವರ್ಷಗಳ ಹಿಂದೆ ನಡೆದ ಘಟನೆ. ನಾವು ಅದೇ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ ನಮ್ಮ ಸಹಪಾಠಿಗಳ ಅಬ್ಬರ, ಹುಡುಗಾಟ, ಆರ್ಭಟ, ಚೀರಾಟಗಳೆಲ್ಲವೂ ನೆನಪಿಗೆ ಬಂದು ಒಮ್ಮೆ ನಡುಗಿ ಹೋದೆವು. ಈಗಲೂ ಅಂಥದ್ದೇ ಹುಡುಗರಿದ್ದು ತರಗತಿ ನಡೆಸುವಾಗ ಕೀಟಲೆ ಮಾಡಿದರೆ? ಎಂಬ ಪ್ರಶ್ನೆ ಭೂತಾಕಾರವಾಗಿ ನಮ್ಮನ್ನು ಸುತ್ತಿಬಿಟ್ಟಿತು.

Advertisement

ಸಾಮಾನ್ಯವಾಗಿ ಕ್ಷೇತ್ರ ಯಾವುದೇ ಇರಲಿ ಬಾಹ್ಯ ಪ್ರಪಂಚಕ್ಕದು ಸುಲಭವೆಂದು ಕಾಣಿಸಿದರೂ ಒಳಜಗತ್ತಿಗೆ ಕಾಲಿಟ್ಟಾಗಲೇ ನಿಜವಾದ ಸಂಕಟ ಅರಿವಾಗುತ್ತದೆ. ಪಾಠ ಮಾಡಲಿಕ್ಕೇನಿದೆ? ಪುಸ್ತಕ ತೆಗೆದು ಓದಿ ಹೇಳಿದರಾಯಿತು ಎಂಬ ಉಡಾಫೆ ಮನೋಭಾವ ಕ್ರಮೇಣ ನಮ್ಮಿಂದ ದೂರ ಸರಿದದ್ದು ನಮ್ಮಲ್ಲಾದ ಅಮೂಲಾಗ್ರ ಬದಲಾವಣೆ. ಅಂತೂ ಕಾಲೇಜಿನ ರಜಾದಿನಗಳೆಲ್ಲ ಕಳೆದು ಇನ್ನೇನು ನಾಳೆ ಕಾಲೇಜು ಶುರುವಾಗುತ್ತದೆ ಎಂದಾಗ ವಿದ್ಯಾರ್ಥಿಗಳ ಪಟ್ಟಿ ನಮ್ಮ ಕೈ ಸೇರಿತ್ತು. ಒಂದೊಂದೇ ಹೆಸರುಗಳನ್ನು ನೋಡಿ ಆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಶ್ಲೇಷಣೆಯಲ್ಲಿ ಮುಳುಗಿದೆವು. ಕೊನೆಗೊಂದು ಹೆಸರು ನಮ್ಮಿಬ್ಬರ ತಲೆತಿಂದು ಹಾಕಿತು. “ಫ‌ರ್ನವಾಜ್‌’! ಪ್ರಥ್ವಿರಾಜ್‌ರಂತೂ ಮತ್ತೆ ಮತ್ತೆ ಹೆಸರು ಹೇಳಿ ನನ್ನನ್ನು ಹೆದರಿಸುವುದರಲ್ಲೇ ಮಜಾ ತೆಗೆದುಕೊಂಡರು.

ಆಗಷ್ಟೇ ಪಿಯುಸಿ ಮುಗಿಸಿದ ಕಾಲೇಜು ಹುಡುಗನಂತೆ ಕಾಣುತ್ತಿದ್ದ ನನ್ನನ್ನು ಉಪನ್ಯಾಸಕನೆಂದರೆ ಯಾರೂ ತಕ್ಷಣಕ್ಕೆ
ನಂಬುವುದು ಸಾಧ್ಯವಿರಲಿಲ್ಲ. ಇಲ್ಲಿ ನೋಡಿದರೆ ಪೃಥ್ವಿರಾಜ್‌ “ಫ‌ರ್ನವಾಝ್ ಅನ್ನೋನು ಸ್ಟ್ರೈಟ್‌ ಹೇರ್‌ ಮಾಡ್ಕೊಂಡು, ಜಿಮ್‌ ಬಾಡಿ ಹೊತ್ಕೊಂಡು, ಹಿಂದಿ ವಿಲನ್‌ ಥರಾ ನಡ್ಕೊಂಡ್‌ ಬರ್ತಾನೆ, ಕ್ಲಾಸ್‌ ಮಾಡೋದಕ್ಕೆ ಬಿಡೋದಿಲ್ಲ ಆಗ ನೀನೇನ್‌ ಮಾಡ್ತೀಯಾ?’ ಎಂದು ಕಿಚಾಯಿಸಿದ್ದು ನನ್ನ ಹಣೆಯಲ್ಲಿ ಬೆವರು ಹನಿಗೂಡೋದಕ್ಕೆ ದಾರಿಯಾಯ್ತು. ಆ ರಾತ್ರಿಯೆಲ್ಲಾ ಅದೇ ಕನಸು. ಗಡ್ಡ ಬಿಟ್ಟ, ಜಿಮ್‌ ಬಾಡಿಯ ಫ‌ರ್ನವಾಜ್‌ ಪುಸ್ತಕ ತಿರುಗಿಸುತ್ತ ಕ್ಲಾಸೊಳಕ್ಕೆ ಪರ್ಮಿಶನ್‌ ಕೇಳೆಬರೋದು, ನಾನು ಪಾಠ ಮಾಡ್ತಿರೋವಾಗ ಗಟ್ಟಿಯಾಗಿ ನಗೋದು, ರಾಕೆಟ್‌ ಎಸೆಯೋದು… ಹೀಗೆ ಭೀಕರ ಸ್ವಪ್ನಗಳು ಬೀಳತೊಡಗಿದವು!

ಅಂತೂ ಕಾಲೇಜಿನ ಮೊದಲ ದಿನ ಬಂತು. ಟೈಂ ಟೇಬಲ್‌ ಪ್ರಕಾರ ಮೊದಲು ಪೃಥ್ವಿರಾಜ್‌ರವರ ಕ್ಲಾಸಿತ್ತು. ಅಂತೂ ಒಂದು ಗಂಟೆ ಪಾಠ ಮಾಡಿ ಅವರು ಹೊರಗೆ ಬರಿ¤ದ್ದ ಹಾಗೇ “ಏನಾಯ್ತು? ಏನಾಯ್ತು?’ ಎಂದು ಕಾತುರದಿಂದ ಕೇಳಿದೆ. ಆ ಕಾತುರತೆಯಲ್ಲೊಂದು ಸಂಕಟವೂ ಇತ್ತೆನ್ನಿ! ಕೂಡಲೇ ಆತ ಹೊಟ್ಟೆ ಹಿಡಿದುಕೊಂಡು “ಫ‌ರ್ನವಾಜ್‌ ಹುಡ್ಗ ಅಲ್ಲ, ಹುಡ್ಗಿ ಮಾರಾಯ…’ ಎಂದು ನಗಲು
ಶುರುಮಾಡಿದರು. ನಾನೂ ಸ್ಫೋಟಕ ನಗೆ ನಕ್ಕೆ. ಇಬ್ಬರೂ ಭೇಟಿಯಾದಾಗಲೆಲ್ಲ ಆ ಘಟನೆ ನೆನಪಾಗಿ ನಗುತ್ತಲೇ ಇರುತ್ತೇವೆ.

– ಅರ್ಜುನ್‌ ಶೆಣೈ, ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next