ಸಿದ್ದಾಪುರ:ಕಾರೇಬೈಲು ಬಸ್ ಸ್ಟ್ಯಾಂಡ್ ಸಮೀಪ ಮುರ್ಡಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಆಗಾಗ ಹೆಬ್ಬಾವು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರು ಆತಂಕಗೊಳ್ಳುತ್ತಿದ್ದಾರೆ.
ಮುರ್ಡಿ ಎಂಬಲ್ಲಿ ಸುಂದರ ದೇವಾಡಿಗ ಮತ್ತು ಮನೆಯವರು ರಾತ್ರಿ ವೇಳೇ ಸೋಣಿ ಆರತಿಗೆ ದೇವಸ್ಥಾನಕ್ಕೆ ಹೋಗುವಾಗ ಮನೆಯ ಹಟ್ಟಿ ಹಿಂದೆ ಮೊಬೆ„ಲ್ ಬೆಳಕಲ್ಲಿ ಹೆಬ್ಬಾವು ನೋಡಿದರು. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಕಾರೇಬೈಲು,
ಕಾರೇಬೈಲು ರಿಕ್ಷಾ ಚಾಲಕರಾದ ಕೃಷ್ಣ ಮೂರ್ತಿ, ವಿಜಯ ದೇವಾಡಿಗ, ರವಿ ಶೆಟ್ಟಿ ಅವರು 15 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಚೀಲಕ್ಕೆ ತುಂಬಿ ರಕ್ಷಿತಾರಣ್ಯಕ್ಕೆ ಬಿಟ್ಟು ಬಂದರು. ಅರಣ್ಯ ಇಲಾಖಾ ವನಪಾಲಕ ಹರೀಶ್, ವನರಕ್ಷಕ ಗುರು, ವನ ವೀಕ್ಷಕ ಶಿವಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರೇಬೈಲು ವಠಾರದಲ್ಲಿ
ಹೆಬ್ಬಾವು ಹೆಚ್ಚು
ವಾರಾಹಿ ಬಲದಂಡೆ ಕಾಲುವೆ ಕಾರೇಬೈಲು ಸಮೀಪ ಹಾದು ಹೋಗಿದ್ದು, ಕಾರೇಬೈಲಿನಲ್ಲಿ ಕಾಲುವೆ ಎಸ್ಕೇಪ್ ಗೇಟ್ ನಿಂದ ನೀರು ಹೊರ ಧುಮುಕುತ್ತಿದೆ. ಇದರಿಂದ ಬೇರೆ ಪ್ರದೇಶದ ಕಾಲುವೆಗೆ ಬಿದ್ದ ಹೆಬ್ಬಾವುಗಳು ಇಲ್ಲಿ ಮನೆಗಳಿಗೆ ನುಗ್ಗುತ್ತವೆ ಎಂದು ಸ್ಥಳೀಯರ ಅಭಿಪ್ರಾಯ.
ಸ್ವಲ್ಪ ದಿನಗಳ ಹಿಂದೆ ಚಿಟ್ಟೆ ರಾಜಗೋಪಾಲ್ ಹೆಗ್ಡೆ ಅವರ ಗದ್ದೆಯಲ್ಲಿ ಹೆಬ್ಬಾವು ಜಿಂಕೆಯನ್ನು ಹಿಡಿದುಕೊಂಡಿತ್ತು. ಒಂದು ವಾರದ ಹಿಂದೆ ಕಾರೆಬೈಲು ಅಕ್ಷಯ ಸ್ಟಾರ್ ಮಾಲಕ ಜನಾರ್ದನ ಮಿತ್ಯಂತ ಇವರ ಹಟ್ಟಿಗೆ ರಾತ್ರಿ ಕರುವಿಗೆ ಕುಣಿಕೆ ಹಾಕಲು ಪ್ರಯತ್ನ ಪಟ್ಟಾಗ ದನ ಬೊಬ್ಬೆ ಹೊಡೆದು ಮನೆಯವರು ಹೆಬ್ಬಾವು ಓಡಿಸಿದ್ದರು.
ಹೆಬ್ಬಾವು ಹಾವಳಿಯಿಂದ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದು, ಸೂಕ್ತ ಪರಿಹಾರಕ್ಕೆ ಕಾಯುತ್ತಿದ್ದಾರೆ.