ಹೆಬ್ರಿ: ಹೆಬ್ರಿ ಸುತ್ತಮುತ್ತ ಜು.9ರಂದು ಬೆಳಗ್ಗೆಯಿಂದಲೇ ಗಾಳಿ ಸಹಿತಿ ಉತ್ತಮವಾಗಿ ಮಳೆಯಾಗಿದ್ದು ಕೆಲವೆಡೆ ಹಾನಿ ಸಂಭವಿಸಿದ್ದು ಸುಮಾರು 15ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರೆಗುರುಳಿವೆ
ಕುಚ್ಚಾರು ಗ್ರಾ.ಪಂ. ವ್ಯಾಪ್ತಿಯ ಬೇಳಂಜೆ ಸುತ್ತಮುತ್ತ ಪರಿಸರದಲ್ಲಿ ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿ ಬೀಸಿದ್ದು ಅಡಿಕೆ ಮರಗಳು ಧರೆಗುರುಳಿವೆ. ಕೆಲವು ಕಡೆ ಗಾಳಿ ರಭಸಕ್ಕೆ ಅಡಿಕೆಮರಗಳು ತುಂಡಾಗಿ ನೇತಾಡುತ್ತಿದ್ದು ಬಾಳಿ ಗಿಡಗಳೂ ಧರೆಗುರುಳಿ ಅಪಾರ ಹಾನಿಯಾಗಿದೆ.
ಕೆಲವು ಕಡೆ ಗಾಳಿಯಿಂದ ಮರಗಳು ಬಿದ್ದವೆ. ಕುಚ್ಚಾರು ನಾಗೇಶ್ ನಾಯ್ಕ ಹಾಗೂ ಶ್ರಿಕಾಂತ ಅವರ ಮನೆಯ ಅಡಿಕೆ ತೋಟಗಳಲ್ಲಿ ಗಾಳಿಗೆ ಮರಗಳು ಬಿದ್ದಿದ್ದು ಹಾನಿಯಾಗಿದೆ. ಕುಚ್ಚಾರು ಗ್ರಾಮದ ಕಮಲ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ವಿದ್ಯುತ್ ಕಂಬಗಳಿಗೆ ಹಾನಿ
ಬೆಳಗ್ಗೆ ಯಿಂದ ಬೀಸಿದ ಗಾಳಿ ಮಳೆಗೆ ಹೆಬ್ರಿ ಮೆಸ್ಕಾಂ ವ್ಯಾಪ್ತಿಯ ನಾಡ್ಪಾಲು ಗ್ರಾಮದಲ್ಲಿ 9 ವಿದ್ಯುತ್ ಕಂಬಗಳು, ಮುದ್ರಾಡಿ ಕಬ್ಬಿನಾಲೆ ವ್ಯಾಪ್ತಿಯಲ್ಲಿ 6 ಕಂಬಗಳು ಸೇರಿದಂತೆ 15ಕಂಬಗಳು ಧರೆಗುರುಳಿದ್ದು ಲಕ್ಷಾಂತ ರೂ.ನಷ್ಟವಾಗಿದೆ. ಬೇಳಂಜೆ ಸುತ್ತಮುತ್ತ ಮರಗಳು ಕಂಬ ಹಾಗೂ ತಂತಿಗಳ ಮೇಲೆ ಬಿದ್ದು ಹಾನಿಯಾಗಿದ್ದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕಾಸನಮಕ್ಕಿ ಹತ್ರಬೈಲು ಬಳಿ ವಿದ್ಯುತ್ ಕಂಬದ ಮೇಲೆ ಮರಬಿದ್ದು ತಂತಿಗಳು ತುಂಡಾಗಿದ್ದು ಹೆಬ್ರಿ ಮೆಸ್ಕಾಂ ಶಾಖಾಧಿಕಾರಿ ಲಕ್ಷ್ಮೀಶ ನಾಯ್ಕ ಅವರ ನೇತೃತ್ವದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಹೆಬ್ರಿ ಸುತ್ತಮುತ್ತಲಿನ ಪ್ರದೇಶಗಳಾದ ಸಂತಕಟ್ಟೆ,ಪಾಡಿಗಾರ, ಪೆರ್ಡೂರು, ಹಿರಿಯಡಕ ಮೊದಲಾದ ಪ್ರದೇಶಗಳಲ್ಲೂ ವಿದ್ಯುತ್ ಕಂಬಗಳು ಹಾನಿಗೀಡಾಗಿವೆ.