ಕಾರ್ಕಳ: 2017-18ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ ಹೊಸ 49 ತಾಲೂಕುಗಳ ಪಟ್ಟಿಯಲ್ಲಿ ಹೆಬ್ರಿಯನ್ನು ಕೈಬಿಟ್ಟಿರುವುದು ಖಂಡನೀಯ ಎಂದು ಕಾರ್ಕಳ ಶಾಸಕ ವಿರೋಧ ಪಕ್ಷದ ಮುಖ್ಯ ಸಚೇತಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಹೆಬ್ರಿಯನ್ನು ತಾಲೂಕನ್ನಾಗಿ ಘೋಷಣೆ ಮಾಡದೆ ಕೈಬಿಡುವುದರ ಮೂಲಕ ಸರಕಾರ ಈ ಭಾಗದ ಜನರಿಗೆ ನಿರಾಸೆಯನ್ನುಂಟುಮಾಡಿದೆ. ತಜ್ಞರ ವರದಿಗಳು ಹಾಗೂ ಇತರ ಎಲ್ಲ ಸಮಿತಿಗಳು ಹೆಬ್ರಿಯನ್ನು ತಾಲೂಕು ಮಾಡಬೇಕೆಂದು ಶಿಫಾರಸು ಮಾಡಿದ್ದರೂ ಯಾವುದೇ ಸಲಹೆಯನ್ನು ಮಾನ್ಯ ಮಾಡದೆ ಅವೈಜ್ಞಾನಿಕವಾಗಿ ಹೊಸ ತಾಲೂಕು ಘೋಷಣೆ ಮಾಡಲಾಗಿದೆ.
ಪಶ್ಚಿಮಘಟ್ಟ ಪ್ರದೇಶದಿಂದ ಅರಣ್ಯದ ಅಂಚಿನಲ್ಲಿರುವ ಈ ಭಾಗದ ಜನತೆ ತಾಲೂಕು ಕೇಂದ್ರಕ್ಕೆ 30ರಿಂದ 40 ಕಿ.ಮೀ. ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿಯಿದೆ. ಈ ನಿಟ್ಟಿನಲ್ಲಿ ತಜ್ಞರ ವರದಿಗಳು ಹೆಬ್ರಿಯನ್ನು ತಾಲೂಕು ರಚಿಸುವ ಬಗ್ಗೆ ಶಿಫಾರಸು ಮಾಡಿರು ತ್ತಾರೆ. ಆದ್ದರಿಂದ ಜನರ ಸಂಕಷ್ಟವನ್ನು ಪರಿಗಣನೆಗೆ ತೆಗೆದುಕೊಂಡು ತತ್‌ಕ್ಷಣ ಹೆಬ್ರಿಯನ್ನು ತಾಲೂಕನ್ನಾಗಿ ಘೋಷಣೆ ಮಾಡಬೇಕು ಎಂದವರು ತಿಳಿಸಿದ್ದಾರೆ.
ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾ ಗಿರುವುದು ಸ್ವಾಗತಾರ್ಹ. ಆದರೆ ಅದಕ್ಕಾಗಿ ಮೀಸಲಿಟ್ಟಿರುವ ರೂ. 100 ಕೋಟಿ ಯಾವುದಕ್ಕೂ ಸಾಲದು. ಕನಿಷ್ಠ ರೂ. 500 ಕೋಟಿಯನ್ನು ಮೊದಲ ಹಂತದಲ್ಲಿ ನೀಡಿದಲ್ಲಿ ಎಲ್ಲಾ ಭಾಗಗಳಿಗೂ ನ್ಯಾಯ ಒದಗಿಸಲು ಸಾಧ್ಯವಾಗಬಹುದು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕಾಯಕಲ್ಪ ನೀಡಿಲ್ಲ, ಹೊಸ ಪಂಚಾಯತ್‌ಗಳಿಗೆ ಅನುದಾನದ ಕೊರತೆ ಇದ್ದಾಗಲೂ ಈ ಕುರಿತು ಪ್ರಸ್ತಾಪಿಸಿಲ್ಲ ಎಂದವರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.