Advertisement

ಹೆಬ್ರಿ ಪೊಲೀಸ್‌ ಠಾಣೆ: ಮೂಲಸೌಕರ್ಯ ಕೊರತೆ

09:43 PM Feb 07, 2020 | mahesh |

ಹೆಬ್ರಿ: ಸುಮಾರು 12 ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡು 35 ಬೀಟ್‌ ಪ್ರದೇಶಗಳ ವ್ಯಾಪ್ತಿಗೆ ಬರುವ ತಾಲೂಕು ಕೇಂದ್ರದಲ್ಲಿರುವ ಬ್ರಿಟಿಷರ ಕಾಲದ ಪೊಲೀಸ್‌ ಠಾಣೆ ಸಮಸ್ಯೆಗಳ ಆಗರವಾಗಿದೆ. ಹೆಬ್ರಿ ತಾಲೂಕಾಗಿ ಮೇಲ್ದರ್ಜೆಗೇರಿದರೂ, ಠಾಣೆ ಮಾತ್ರ ಸಿಬಂದಿ ಕೊರತೆಯೊಂದಿಗೆ ಮೂಲಸೌಕರ್ಯದಿಂದ ವಂಚಿತವಾಗಿದೆ. ಹಳೆಯ ಕಟ್ಟಡದಲ್ಲಿ ಸುಮಾರು 30 ಜನ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ದಾಖಲೆಗಳಿಗೆ ಭದ್ರತೆಯಿಲ್ಲ
ಠಾಣೆಯ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿಡಲು ಸಮರ್ಪಕವಾದ ಕೋಣೆಯಿಲ್ಲ. ಚಿಕ್ಕದಾದ ಕೊಠಡಿಯ ನಡುವೆ ದಾಖಲೆಗಳನ್ನು ಇಡಲಾಗುತ್ತಿದೆ. ಹಳೆಯ ಕಟ್ಟಡವಾದ್ದ ರಿಂದ ಮಳೆಗಾಲದಲ್ಲಿ ನೀರು ಒಳಗೆ ಬಂದು ಹಲವಾರು ದಾಖಲೆಗಳು ನೀರಿನಲ್ಲಿ ಒದ್ದೆಯಾಗಿ ಹಾನಿಯಾದದ್ದೂ ಇದೆ.

ಮಹಿಳಾ ಸಿಬಂದಿಗೆ ಸಮಸ್ಯೆ
ಸಣ್ಣದಾದ ಠಾಣೆಯಲ್ಲಿ ಸರಿಯಾಗಿ ಕುಳಿತು ಕರ್ತವ್ಯ ನಿರ್ವಹಿಸಲೂ ಇಲ್ಲಿ ಸ್ಥಳಾವಕಾಶವಿಲ್ಲ. ಮಹಿಳಾ ಸಿಬಂದಿ ಬಟ್ಟೆ ಬದಲಾಯಿಸಲೂ ಕೊಠಡಿಯಿಲ್ಲದೆ ಸಮಸ್ಯೆ ಎದುರಿಸುತ್ತಾರೆ. ಠಾಣೆಯ ಒಳಗೆ ಮಹಿಳಾ ಸಿಬಂದಿಗೆ ಪ್ರತ್ಯೇಕ ಶೌಚಾಲಯವ ವ್ಯವಸ್ಥೆಯೂ ಇಲ್ಲ.

ಕೈದಿ ಕೊಠಡಿಯಿಲ್ಲ
ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆಗೆ ಸರಿಯಾದ ಕೊಠಡಿಯಿಲ್ಲ. ಆರೋಪಿಗಳನ್ನು ಕೂಡಿಡಲು ಕೊಠಡಿಯೂ ಇಲ್ಲ. ಇದು ಸಿಬಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಸಿಸಿ ಕೆಮರಾ ಬೇಕು
ಠಾಣೆಯ ಎದುರೇ ಹೆದ್ದಾರಿ ಹಾದುಹೋಗಿದ್ದು, ಇಲ್ಲಿ ವಾಹನಗಳ ಪತ್ತೆಗೆ ಹಾಕಿದ ಸಿಸಿ ಕೆಮರಾ ಕೆಟ್ಟು ವರ್ಷಗಳೇ ಕಳೆದಿವೆ. ಇದಿನ್ನೂ ದುರಸ್ತಿ ಕಂಡಿಲ್ಲ. ಇದರಿಂದ ಅಪರಾಧ ಪತ್ತೆಗೆ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಹೆಬ್ರಿ ಸುತ್ತಮುತ್ತ ಕಳವು ಪ್ರಕರಣಗಳೂ ಹೆಚ್ಚುತ್ತಿದ್ದು ಆಯಕಟ್ಟಿನ ಸ್ಥಳಗಳಲ್ಲೂ ಸಿಸಿ ಕೆಮರಾ ಇಲ್ಲದಿರುವುದರಿಂದ ಆರೋಪಿಗಳ ಪತ್ತೆ ಕಷ್ಟವಾಗುತ್ತಿದೆ.

Advertisement

ಸಿಬಂದಿ ಕೊರತೆ
35 ಬೀಟ್‌ಗಳಲ್ಲಿ ಪ್ರತಿ ಬೀಟ್‌ಗೆ ಇಬ್ಬರು ಸಿಬಂದಿಯಂತೆ 70 ಸಿಬಂದಿ ಅಗತ್ಯವಿದೆ. ತಿಂಗಳಿಗೆ ಎರಡು ಬಾರಿಯಂತೆ ಭೇಟಿ ನೀಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಠಾಣೆಗೆ 44 ಸಿಬಂದಿ ಕರ್ತವ್ಯ ನಿರ್ವಹಿಸಬೇಕಾಗಿದ್ದು, 30 ಮಂದಿ ಮಾತ್ರ ಇದ್ದಾರೆ. ನಕ್ಸಲ್‌ ಬಾಧಿತ ಪ್ರದೇಶವಾದ್ದರಿಂದ ಇನ್ನೂ ಹೆಚ್ಚಿನ ಸಿಬಂದಿ ಅಗತ್ಯ ಇಲ್ಲಿದೆ.

ಸೂಚನೆ ನೀಡಿದ್ದರೂ ತೆರವಿಲ್ಲ
ತೀರಾ ಹಳೆಯದಾದ ಕಟ್ಟಡವಾದ್ದರಿಂದ ಮಳೆಗಾಲದಲ್ಲಿ ಸೋರುತ್ತದೆ. ಕಟ್ಟಡವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿದರೂ ಇನ್ನೂ ಅದರಲ್ಲೇ ಠಾಣೆ ಮುಂದುವರಿಯುತ್ತಿದ್ದು ಅಪಾಯ ತಪ್ಪಿದ್ದಲ್ಲ ಎನ್ನಲಾಗಿದೆ.

ಪರಿಶೀಲಿಸುವೆ
ನಾನು ಬಂದು 1ತಿಂಗಳು ಮಾತ್ರವಾದ್ದರಿಂದ ಅಲ್ಲಿಯ ಸಮಸ್ಯೆ ಬಗ್ಗೆ ಇನ್ನು ತಿಳಿಯಬೇಕಾಗಿದೆ. ಶೀಘ್ರವಾಗಿ ಠಾಣೆಯ ಬಗ್ಗೆ ವರದಿ ಪಡೆದು ಪರಿಶೀಲನೆ ನಡೆಸಲಾಗುವುದು.
-ವಿಷ್ಣುವರ್ಧನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ

ಗಮನಕ್ಕೆ ತರಲಾಗಿದೆ
ಹಳೆಯ ಠಾಣೆ ಹಾಗೂ ಅತೀ ಚಿಕ್ಕ ಕೊಠಡಿ ಹೊಂದಿರವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ. ಪೂರ್ಣ ಪ್ರಮಾಣದ ಸುಸಜ್ಜಿತ ಠಾಣೆಯ ನಿರ್ಮಾಣ ತೀರ ಅಗತ್ಯವಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ.
-ಮಹಾಬಲ ಶೆಟ್ಟಿ , ಠಾಣಾಧಿಕಾರಿ, ಹೆಬ್ರಿ ಪೊಲೀಸ್‌ ಠಾಣೆ

ಹೆಬ್ರಿ ಉದಯಕುಮಾರ್ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next