Advertisement

ಹೆಬ್ರಿ ಮೆಸ್ಕಾಂ ಜನಸಂಪರ್ಕ ಸಭೆ: ಸಮಸ್ಯೆಗಳಿಗೆ ಆಕ್ರೋಶ

07:55 AM Sep 02, 2017 | Team Udayavani |

ಹೆಬ್ರಿ: ಹೆಬ್ರಿಯಲ್ಲಿ ಮೆಸ್ಕಾಂ ವ್ಯಾಪ್ತಿಯ ಜನಸಂಪರ್ಕ ಸಭೆ ಆ. 30ರಂದು ಪಂಚಾಯತ್‌ ಸಭಾಂಗಣದಲ್ಲಿ ನಡೆಯಿತು. ಮಾಹಿತಿ ಇಲ್ಲದೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಿರುವುದು, ಲೈನ್‌ಮ್ಯಾನ್‌ಗಳ ಸಮಸ್ಯೆ, ಅಧಿಕಾರಿಗಳ ಉಡಾಫೆ, ಗ್ರಾಮಸಭೆಗೆ ಮೆಸ್ಕಾಂ ಅಧಿಕಾರಿಗಳ ಗೈರು ಮೊದಲಾದ ಸಮಸ್ಯೆಗಳ ಬಗ್ಗೆ  ಸೇರಿದ ಕೆಲವೇ ಗ್ರಾಮಸ್ಥರು ಸೇರಿದಂತೆ ಪಂಚಾಯತ್‌ ಅಧ್ಯಕ್ಷರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮುನಿಯಾಲಿಗೆ ಎಕ್ಸ್‌ಪ್ರೆಸ್‌ ಲೈನ್‌, ಅಜೆಕಾರಿಗೆ ಸಬ್‌ ಸ್ಟೇಷನ್‌, ಕಾಸನಮಕ್ಕಿಯಲ್ಲಿರುವ ಲೈನ್‌ಮ್ಯಾನ್‌ಗಳ ಸಮಸ್ಯೆ. ಲೋ ಓಲ್ಟೆàಜ್‌ ಸಮಸ್ಯೆ, ಅಜೆಕಾರಿನಲ್ಲಿ ಜನಸಂಪರ್ಕ ಸಭೆ ನಡೆಸುವ ಬಗ್ಗೆ  ಅಧಿಕಾರಿಗಳ ಗಮನಕ್ಕೆ ತಂದು ಚರ್ಚೆನಡೆಸಲಾಯಿತು. ಶಿವಪುರ ಗ್ರಾ.ಪಂ. ವ್ಯಾಪ್ತಿಯ ದೊರಿಯಾಲು ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಸರಿಪಡಿಸಲು ಟಿ.ಸಿ.ಯನ್ನು ಅಳವಡಿಸುವಂತೆ ಗ್ರಾಮಸ್ಥರಾದ ಪ್ರಸನ್ನ ಶೆಟ್ಟಿ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಜೆಕಾರು ಕಡ್ತಲ ಸುತ್ತಮುತ್ತಲ ಪ್ರದೇಶದಲ್ಲಿ  ಕರೆಂಟ್‌ ಇಲ್ಲದಿರುವ ಬಗ್ಗೆ ಸುಕೇಶ್‌ ಹೆಗ್ಡೆ ಅಧಿಕಾರಿಗಳ ಗಮನಕ್ಕೆ ತಂದರು. ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬಗಳಿಗೆ ತಾಗಿ ಇರುವ ಮರಗಳನ್ನು ಕಡಿಯಬೇಕು. ಅಪಾಯ ನಡೆದ ಅನಂತರ ಪರಿಹಾರ ನೀಡುವುದಕ್ಕಿಂತ ದುರಂತ ಸಂಭವಿಸುವ ಮೊದಲೇ ಇಲಾಖೆ ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳನ್ನು ಕಡಿಯಬೇಕು ಎಂದು ಬಚ್ಚಪ್ಪು ನಾರಾಯಣ ಪೂಜಾರಿ ಹೇಳಿದರು.

ಜನರಿಲ್ಲದ ಜನಸಂಪರ್ಕ ಸಭೆ: ಮೆಸ್ಕಾಂ ಜನಸಂಪರ್ಕ ಸಭೆ ನಡೆಸುವುದಾದರೆ ಅದು ಜನಸಾಮಾನ್ಯರಿಗೆ ತಲುಪುವಷ್ಟು ಪ್ರಚಾರ ಮಾಡಬೇಕು, ಫ್ಲೆಕ್ಸ್‌ ಹಾಕಬೇಕು. ಆದರೆ ಹೆಬ್ರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ಯಾರಿಗೂ ಗೊತ್ತಿಲ್ಲದೆ ಸುಮ್ಮನೆ ಕಾಟಾಚಾರಕ್ಕೆ ನಡೆದಂತಿದೆ ಎಂದು ಗ್ರಾಮಸ್ಥರಾದ ಪಾಂಡುರಂಗ ಪೂಜಾರಿ ಆಕ್ರೋಷ ವ್ಯಕ್ತಪಡಿಸಿದರು.

ಅಧಿಕಾರಿಯ ಉಡಾಫೆ ಉತ್ತರ: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್‌ ಸಮಸ್ಯೆ ಇದ್ದು ಈ ಬಗ್ಗೆ ಗ್ರಾಮಸ್ಥರು ಅಜೆಕಾರು ವಿಭಾಗದ ಮೆಸ್ಕಾಂ ಅಧಿಕಾರಿ ನಟರಾಜ್‌ ಅವರಿಗೆ ದೂರವಾಣಿ ಕರೆ ಮಾಡಿದಾಗಿ ಉಡಾಫೆ ಉತ್ತರ ನೀಡುತ್ತಾರೆ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕಡ್ತಲ ಗ್ರಾ.ಪಂ. ಅಧ್ಯಕ್ಷ ಅರುಣ್‌ಕುಮಾರ್‌ ಹೆಗ್ಡೆ ಅಧಿಕಾರಿಗಳಿಗೆ ತಿಳಿಸಿದರು.

ಶೀಘ್ರ ಸಮಸ್ಯೆ ಬಗೆಹರಿಸುವೆ: ಜನರ ಸಮಸ್ಯೆಗಳನ್ನು ಆಲಿಸಿದ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಶರತ್‌ ಚಂದ್ರಪಾಲ್‌ ಹಂತ ಹಂತವಾಗಿ ಸಮಸ್ಯೆಗಳಗನ್ನು ಬಗೆಹರಿಸುವ ಭರವಸೆ ನೀಡಿದರು.

Advertisement

ಈ ಸಂದರ್ಭದಲ್ಲಿ ಸಹಾಯಕ ಅಭಿಯಂತ ರಘುನಾಥ, ಹೆಬ್ರಿ ವಿಭಾಗದ ಅಧಿಕಾರಿ ಸಂದೀಪ್‌, ಅಜೆಕಾರಿನ ನಟರಾಜ್‌, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಪಿ.ಡಿ.ಒ. ವಿಜಯ, ಸುತ್ತಮುತ್ತಲಿನ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next