ಉಡುಪಿ: ಹೆಬ್ರಿ-ಮಲ್ಪೆ 169ಎ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಭಾಗವಾಗಿ ನಡೆಯುತ್ತಿರುವ ಹೆಬ್ರಿ-ಆತ್ರಾಡಿ, ಮಲ್ಪೆ-ಕರಾವಳಿ ಬೈಪಾಸ್ ಕಾಮಗಾರಿ ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ ಈಗ 3ನೇ ಬಾರಿ 3ಡಿ ನೋಟಿಫಿಕೇಶನ್ ಹೊರಡಿಸಲಾಗಿದೆ.
ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ 2022ರಿಂದ ಹೊರಡಿಸುತ್ತಿರುವ 3ನೇ ನೋಟಿಫಿಕೇಶನ್ ಇದಾಗಿದೆ. ಇನ್ನು 10 ದಿನಗಳ ಒಳಗೆ ಕೊನೆಯ 4ನೇ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಈ ಅಧಿಸೂಚನೆ ಪ್ರಕಾರ ಪೆರ್ಡೂರು, ಹಿರಿಯಡಕ, ಕರಾವಳಿ ಬೈಪಾಸ್-ಮಲ್ಪೆವರೆಗೂ ಭೂಸ್ವಾಧೀನ ವಿವರಗಳನ್ನು ಸರ್ವೇ ನಂಬರ್, ಭೂ ಮಾಲಕರ ವಿವರ ಸಹಿತ ತಿಳಿಸಲಾಗಿದೆ.
ಈ ಮಧ್ಯೆ ಹಲವರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಈಗಾಗಲೇ ಆತ್ರಾಡಿ-ಹೆಬ್ರಿ 26 ಕಿ. ಮೀ. ರಸ್ತೆಯಲ್ಲಿ 20 ಕಿ. ಮೀ. ಪೂರ್ಣಗೊಂಡಿದೆ. ಉಳಿದಿರುವ 6 ಕಿ.ಮೀ.ಯಲ್ಲಿ ಹಿರಿಯಡಕ ಮತ್ತು ಪೆರ್ಡೂರು ಪೇಟೆ ವ್ಯಾಪ್ತಿ ಹೆಚ್ಚಿದೆ. ಈ ಭಾಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಅಧಿಕಾರವನ್ನು ಕುಂದಾಪುರ ಉಪವಿಭಾಗ ಆಯುಕ್ತರಿಗೆ ನೀಡಲಾಗಿದ್ದು, ಹಂತಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ಭೂ ಸ್ವಾಧೀನ ಪ್ರಕ್ರಿಯೆ ಸಮರ್ಪಕವಾಗಿಲ್ಲ. ಪರಿಹಾರ ಪ್ರಕ್ರಿಯೆ ಸರಿಯಾಗಿಲ್ಲ ಎಂಬ ಸಂತ್ರಸ್ತರ ದೂರಿನ ಮೇರೆಗೆ ಜಿಲ್ಲಾಡಳಿತ, ಕಂದಾಯ ಇಲಾಖೆ, ಪ್ರಾಧಿಕಾರ ಜಂಟಿ ಸರ್ವೆ ನಡೆಸಿತ್ತು. ಅದರಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
ಪರಿಹಾರಕ್ಕೆ ಸಂಬಂಧಿಸಿ ಹೆದ್ದಾರಿ ಪರಿಹಾರ ಮಾನದಂಡದಂತೆ ಈ ಹಿಂದೆ ನಿಗದಿಪಡಿಸಿದ ಪರಿಹಾರವು ಎಲ್ಲರಿಗೂ ಸಿಗಲಿದೆ. ಬೇಡಿಕೆಯಷ್ಟು ಹೆಚ್ಚು ಪರಿಹಾರ ಸಂತ್ರಸ್ತರಿಗೆ ಸಿಗುವುದು ಕಷ್ಟಸಾಧ್ಯ ಎಂದು ಹೆದ್ದಾರಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.