ಹೆಬ್ರಿ: ಸೋಮವಾರ ಸಂಜೆ ಬೀಸಿದ ಭಾರೀ ಗಾಳಿಗೆ ಹೆಬ್ರಿ ಸುತ್ತಮುತ್ತ ಮರಗಳು ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಹೆಬ್ರಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸೀತಾನದಿ ಬ್ರಹ್ಮಸ್ಥಾನದ ಬಳಿ ಬೃಹದಾಕಾರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಸುಮಾರು 1 ತಾಸು ರಸ್ತೆ ಸಂಚಾರ ಸ್ಥಗಿತವಾಗಿತ್ತು.
ಪರಿಣಾಮ ಹೆಬ್ರಿಯಲ್ಲಿ ಸುಮಾರು ಒಂದು ತಾಸು ವಾಹನ ದಟ್ಟಣೆ ಕಂಡುಬಂತು. ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ. ನೇತೃತ್ವದ ತಂಡ ಸುಗಮ ಸಂಚಾರಕ್ಕೆ ಶ್ರಮಿಸಿತು. ಕೆಲವೆಡೆ ಹಲವಾರು ವಿದ್ಯುತ್ ಕಂಬಗಳು ಕೂಡ ಬಿದ್ದಿವೆ.
ಕುಚ್ಚಾರು ಶಾಲಾ ವಠಾರದ ರಸ್ತೆ ಬದಿಯಲ್ಲಿದ್ದ ಬೃಹದಾಕಾರದ ಮರ ವೊಂದು ಸಂಚರಿಸುತ್ತಿದ ದ್ವಿಚಕ್ರ ವಾಹನದ ಮೇಲೆ ಬಿದ್ದಿದ್ದು, ಸವಾರ ಪವಾಡಸದೃಶ ಪಾರಾಗಿದ್ದಾರೆ.
ಹೆಬ್ರಿ ಗ್ರಾಮದ ಕಿನ್ನಿಗುಡ್ಡೆಯಲ್ಲಿ ಸರೋಜಾ ಶೆಟ್ಟಿ ಅವರ ಕೊಟ್ಟಿಗೆಯ ಮೇಲೆ ಮರ ಬಿದ್ದು ಅಂದಾಜು 10 ಸಾವಿರ ರೂ. ನಷ್ಟ ಸಂಭವಿಸಿರುತ್ತದೆ. ಜತೆಗೆ ಅಡಿಕೆ ಮರಗಳೂ ಬಿದ್ದಿವೆ. ಮುದ್ರಾಡಿ ಗ್ರಾಮದ ಸಮಗಾರ ಬೆಟ್ಟು ಮುದ್ದಣ್ಣ ಪೂಜಾರಿ ಅವರ ಮನೆ ಮೇಲೆ ಮರ ಬಿದ್ದು ಅಂದಾಜು 15 ಸಾ. ರೂ. ನಷ್ಟ ಸಂಭವಿಸಿದೆ.