ಹೆಬ್ರಿ: ಹೆಬ್ರಿಯ ಜೋತಿಷಿ ರಮೇಶ್ ಭಟ್ ಎಂಬವರಿಗೆ ವೀಡಿಯೋ ತುಣುಕೊಂದನ್ನು ತೋರಿಸಿ 40 ಲ. ರೂ. ನೀಡಲು ಬೇಡಿಕೆ ಇರಿಸಿ ಕೊಲೆ ಬೆದರಿಕೆಯೊಡಿದ್ದ ಪ್ರಮುಖ ಆರೋಪಿಗಳನ್ನು ಜು.25ರಂದು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಬೇಳಂಜೆಯ ಸುಮಾ ಹಾಗೂ ಕಿರಣ್ ಬಂಧಿತರು. ಬ್ಲ್ಯಾಕ್‌ಮೇಲ್ಗೆ ಬಳಸುತ್ತಿದ್ದ ಕಾರು, ಬೈಕ್, ಒಟ್ಟು 7 ಮೊಬೈಲ್, 26 ಸಾ. ರೂ., ಚಾಕು ಹಾಗೂ ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ
ಜು. 19ರಂದು ಕಿರಣ್, ಲಕ್ಷ್ಮೀ ಹಾಗೂ ಮಂಜುನಾಥ ಎಂಬವರು ಸೇರಿ ಜೋತಿಷಿಯಲ್ಲಿಗೆ ಜೋತಿಷ್ಯ ಉದ್ದೇಶಕ್ಕಾಗಿ ಸುಮಾಳನ್ನು ಕಳುಹಿಸಿದ್ದರು. ಅಲ್ಲಿ ರಾಶಿಪ್ರಶ್ನೆ ಕೇಳುವ ನೆಪದಲ್ಲಿ ಮೊಬೈಲ್ನಿಂದ ಚಿತ್ರೀಕರಣ ನಡೆಸಿ, ಅದಕ್ಕೆ ಬೇರೆಯೇ ರೂಪ ಕೊಟ್ಟು ಅರ್ಚಕರಿಗೆ ತೋರಿಸಿ 40 ಲ. ರೂ. ನೀಡುವಂತೆ ಬೇಡಿಕೆ ಇರಿಸಿದ್ದರು. ಭಟ್ಟರು 80 ಸಾ.ರೂ. ನೀಡಿದ್ದರು. ಅದಕ್ಕೆ ಒಪ್ಪದ ಅವರು, ‘ನಾಳೆ ಬರುತ್ತೇವೆ, 40 ಲ. ರೂ. ಅನ್ನು ಕೊಡಬೇಕು’ ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ರಮೇಶ್ ಭಟ್ ಹೆಬ್ರಿ ಠಾಣೆಗೆ ದೂರು ನೀಡಿದ್ದರು.
ಠಾಣಾಧಿಕಾರಿ ಮಹಾಬಲ ಶೆಟ್ಟಿ ಹಾಗೂ ಸಿಪಿಐ ಹಾಲಮೂರ್ತಿ ರಾವ್ ಅವರು ಎಸ್.ಪಿ. ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಸಹಾಯಕ ಪೊಲೀಸ್ ಅಧಿಕ್ಷಕ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಪ್ರಕರಣ ಬಯಲಿಗೆಳಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬಂದಿ ವರ್ಗದ ರಾಜೇಶ್ ಕೊಕ್ಕರ್ಣೆ, ಪ್ರವೀಣ್ ಶೆಟ್ಟಿ, ಸುರೇಂದ್ರ ಶೆಟ್ಟಿ, ದಾಮೋದರ್ ಉಲ್ಲಾಸ್, ಹಾಲೇಶಪ್ಪ, ಜ್ಯೋತಿ, ಜಯಲಕ್ಷ್ಮಿ, ಸತೀಶ್ ಮೊದಲಾದವರು ಪಾಲ್ಗೊಂಡಿದ್ದರು.
ಹಲವೆಡೆ ಬ್ಲ್ಯಾಕ್‌ಮೇಲ್
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇನ್ನೂ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ರೀತಿಯಲ್ಲಿ ತಲ್ಲೂರಿನ ವೈದ್ಯರು, ಜನ್ನಾಡಿಯ ಉದ್ಯಮಿಯೋರ್ವ ರಿಂದ 1.5 ಲ. ರೂ. ಹಾಗೂ ಹೊಸಂಗಡಿಯ ಜೋತಿಷಿಯಿಂದ 3 ಲ. ರೂ. ವಸೂಲು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.