ಬಾಗಲಕೋಟೆ: ಪ್ರೌಢ ಶಾಲೆಯೊಂದರ ವಿದ್ಯಾರ್ಥಿಗಳು ಹೆಬ್ಬುಲಿ ಸಿನೆಮಾ ಸ್ಟೈಲ್ ನಲ್ಲಿ ಕಟಿಂಗ್ ಮಾಡಿಕೊಂಡು ಓದಿನ ನಿರ್ಲಕ್ಷ್ಯ ವಹಿಸುತ್ತಿರುವ ಕುರಿತು, ಆ ಶಾಲೆಯ ಮುಖ್ಯಾಧ್ಯಾಪಕರು ನೇರವಾಗಿ ಕ್ಷೌರದ ಅಂಗಡಿಗಳ ಮಾಲಿಕರಿಗೆ ಬರೆದ ಪತ್ರ ವೈರಲ್ ಆಗಿದ್ದು, ಇದಕ್ಕೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಶಿವಾಜಿ ನಾಯಕ ಎಂಬುವವರು, ಅದೇ ಗ್ರಾಮದಲ್ಲಿ ಇರುವ ಸುಮಾರು ಐದು ಕ್ಷೌರ ಅಂಗಡಿಗಳಿಗೆ ನೇರವಾಗಿ ಪತ್ರ ಬರೆದು, ತಮ್ಮ ಪ್ರೌಢ ಶಾಲೆಯ ಬಾಲಕರಿಗೆ ಹೆಬ್ಬುಲಿ ಸಿನೆಮಾ ಶೈಲಿಯ ಹಾಗೂ ಇನ್ನಿತರೆ ಬೇರೆ ಬೇರೆ ಸ್ಟೈಲ್ ನಲ್ಲಿ ಕಟಿಂಗ್ ಮಾಡದಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ಒಂದು ವೇಳೆ, ಅಂತಹದ್ದೇ ಕಟಿಂಗ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರೆ, ಆಯಾ ಮಕ್ಕಳ ಪಾಲಕರಿಗೆ ಅಥವಾ ನಮಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.
ಏನಿದು ಪತ್ರ: ಕುಲಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ಒಟ್ಟು 325 ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದು, ಅದರಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಹುತೇಕ ಎಲ್ಲ ಗಂಡು ಮಕ್ಕಳು, ಹೆಬ್ಬುಲಿಯಂತಹ ಹಾಗೂ ಇತರೆ ತರಹದ ಕಟಿಂಗ್ (ತಲೆಯ ಒಂದು ಬದಿಗೆ ಕೂದಲು ಬಿಟ್ಟು, ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು) ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು, ಇದರಿಂದ ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೇ, ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡುತ್ತಿಲ್ಲ. ಇದರಿಂದ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಶಿಸ್ತಿನ ಹೇರ್ ಕಟಿಂಗ್ ಮಾಡಬೇಕೆಂದು ವಿನಂತಿಸಿದ್ದಾರೆ. ಇದಕ್ಕೆ ಗ್ರಾಮದ ಐದು ಕಟಿಂಗ್ ಅಂಗಡಿಗಳ ಮಾಲಿಕರು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.
ಸಕತ್ ರೇಸ್ಪಾನ್ಸ್: ಮುಖ್ಯಾಧ್ಯಾಪಕ ಶಿವಾಜಿ ಅವರ ಈ ಪತ್ರ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಇದಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಈ ಕುರಿತು ಉದಯವಾಣಿ ಜತೆಗೆ ಮಾತನಾಡಿದ ಮುಖ್ಯಾಧ್ಯಾಪಕ ಶಿವಾಜಿ ನಾಯಕ, ಈ ಪತ್ರ ಇಷ್ಟೊಂದು ವೈರಲ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಆ ಉದ್ದೇಶವೂ ನಮಗಿಲ್ಲ. ಕಳೆದ ನಾಲ್ಕೈದು ವರ್ಷಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಅವಲೋಕಿಸಿದರೆ, ಹೆಣ್ಣು ಮಕ್ಕಳಿಗಿಂತ, ಗಂಡು ಮಕ್ಕಳು ಫೇಲ್ ಆಗುತ್ತಿದ್ದಾರೆ. ಅಲ್ಲದೇ ನಿತ್ಯವೂ ಶಾಲೆಗೆ ವಿವಿಧ ತರಹದ ಸ್ಟೈಲ್ ನಲ್ಲಿ ಕಟಿಂಗ್ ಮಾಡಿಕೊಂಡು ಬರುತ್ತಿದ್ದು, ಶೈಕ್ಷಣಿಕ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ನಾವು, ಎಸ್ಡಿಎಂಸಿ ಹಾಗೂ ಕೆಲ ಪಾಲಕರೊಂದಿಗೆ ಚರ್ಚಿಸಿ, ಈ ಪತ್ರ ಬರೆಯಲಾಗಿದೆ. ಇದಕ್ಕೆ ಎಲ್ಲ ಕಟಿಂಗ್ ಅಂಗಡಿ ಮಾಲಿಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:2011 ರಿಂದ ಭಾರತದ ಪೌರತ್ವ ತೊರೆದ 17.5 ಲಕ್ಷ ಮಂದಿ: ಎಸ್. ಜೈಶಂಕರ್ ಮಾಹಿತಿ
ಈಗಿನ ವ್ಯವಸ್ಥೆಯಲ್ಲಿ ಮಕ್ಕಳಿಗೆ ಹೊಡೆದು, ಬೆದರಿಸಿ ಬದಲಾಯಿಸಲು ಸಾಧ್ಯವಿಲ್ಲ. ಅವರ ಮನಗೆದ್ದು ನಾವು ಶಿಕ್ಷಣ ಕೊಡಬೇಕು. ಅಲ್ಲದೇ ನಮ್ಮ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕ ವರ್ಗವಿದ್ದು, ಕಳೆದ ವರ್ಷ ಎಸ್ಸ್ಸೆಸ್ಸೆಲ್ಸಿಯಲ್ಲಿ ಶೇ.91ರಷ್ಟು ಫಲಿತಾಂಶ (117 ವಿದ್ಯಾರ್ಥಿಗಳಲ್ಲಿ 106 ಜನ ಉತ್ತೀರ್ಣ) ಬಂದಿದೆ. ಫೇಲ್ ಆದವರಲ್ಲಿ ಅತಿಹೆಚ್ಚು ಗಂಡು ಮಕ್ಕಳೇ ಇದ್ದಾರೆ. ಹೀಗಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳದ ಜತೆಗೆ ವಿದ್ಯಾರ್ಥಿಗಳು, ಇತರೆ ಚಟುವಟಿಕೆಗೆ ವಾಲದಂತೆ, ಶಿಕ್ಷಣಕ್ಕೆ ಹೆಚ್ಚು ಒತ್ತು-ಮಹತ್ವ ನೀಡಲು ಈ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.