Advertisement

ಹೆಬ್ಬಾಳ ಠಾಣೆ ಗೋಳು ಕೇಳ್ಳೋರ್ಯಾರು?

08:48 AM Nov 02, 2019 | Suhan S |

ಬೆಂಗಳೂರು: “ಸಾರ್ವಜನಿಕರು ಕುಳಿತುಕೊಳ್ಳಲು ಸ್ಥಳವಿಲ್ಲ. ಕಡತಗಳನ್ನು ಇಡಲು ಜಾಗದ ಕೊರತೆ, ಸಿಬ್ಬಂದಿ ಸಮರ್ಪಕ ಕಾರ್ಯ ನಿರ್ವಹಣೆಗೂ ಇಕ್ಕಟ್ಟು ಪರಿಸ್ಥಿತಿ… ಪ್ರತಿ ದಿನದ ಸಿಬ್ಬಂದಿಯ ರೋಲ್‌ಕಾಲ್‌ ಮಾಡಲು ಸಮೀಪದ ಶಾಲಾ ಆವರಣಕ್ಕೆ ಹೋಗಬೇಕು.. ಇವುಗಳ ನಡುವೆ ಮಳೆ ಬಂದರೆ ಕಟ್ಟಡ ಕುಸಿಯುವ ಭೀತಿ’ 1981ರ ಸಂದರ್ಭದ ಹೆಬ್ಟಾಳ ಪೊಲೀಸ್‌ ಠಾಣೆಯ ಸ್ಥಿತಿಯಿದು.

Advertisement

ಹಲವು ವರ್ಷಗಳಿಂದ ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಕಿಷ್ಕಿಂದೆಯಂತಹ ಸ್ಥಳದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಠಾಣೆಯ ಸಿಬ್ಬಂದಿಗೆ ಮತ್ತೂಂದು ಅನಿವಾರ್ಯ ಸಂಕಷ್ಟ ಶುರುವಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಠಾಣೆಯ ಪಕ್ಕದಲ್ಲಿರುವ ಬೃಹತ್‌ ಆಲದ ಮರದ ಕೊಂಬೆ ಮುರಿದು ಬಿದ್ದು ಠಾಣೆಯ ಮೆಲ್ಭಾಗದಲ್ಲಿರುವ ಎರಡು ಕೊಠಡಿಗಳು ಜಖಂಗೊಂಡಿವೆ.

ಠಾಣೆಯ ಒಳಗಡೆ ರಾತ್ರಿ ಪಾಳಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ, ಇದೊಂದು ಘಟನೆ ಠಾಣೆಯ ಸಿಬ್ಬಂದಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಮೂಲ ಸೌಕರ್ಯಗಳಿಲ್ಲದೆ ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಇದೀಗ ಹಳೆಯ ಕಟ್ಟಡ ಮಳೆ ಬಂದರೆ ಕುಸಿಯಬಹುದೇನೋ ಎಂಬ ಭಯದ ಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹೆಬ್ಟಾಳ ಠಾಣೆಯ ಮೂಲ ಸೌಕರ್ಯಗಳ ಸಮಸ್ಯೆಗೆ ಪರಿಹಾರವಾಗಿ ಹಾಗೂ ಠಾಣೆ ಸ್ಥಳಾಂತರ ಕುರಿತು ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಮುಕ್ತಿಗೆ ಮಾತ್ರ ಗ್ರಹಣ ಹಿಡಿದಿದೆ. ಠಾಣೆ ಸ್ಥಳಾಂತರ ಕುರಿತ ಪ್ರಸ್ತಾವನೆಗಳು ಹಿರಿಯ ಅಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಗಳ ಕಚೇರಿಗಳಲ್ಲಿ ಧೂಳು ತಿನ್ನುತ್ತಿವೆ. ಹೀಗಾಗಿಯೇ ಸಮಸ್ಯೆ ಶಾಶ್ವತವಾಗಿ ಉಳಿದುಕೊಂಡು ಭಾರೀ ಮಳೆಗೆ ಮರಬಿದ್ದು ಎರಡು ಕೊಠಡಿಗಳೇ ಜಖಂಗೊಳ್ಳುವ ಸ್ಥಿತಿಗೆ ಬಂದು ನಿಂತಿದೆ.

ಕಾರ್ಯನಿರ್ವಹಣೆಯೇ ಸಂಕಷ್ಟ: ರಸ್ತೆಯ ಪಕ್ಕದಲ್ಲಿಯೇ ಕಿಷ್ಕಿಂದೆಯಂತಹ ಸ್ಥಳದಲ್ಲಿರುವ ಪೊಲೀಸ್‌ ಠಾಣೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಸಿಬ್ಬಂದಿ ಕಾರ್ಯನಿರ್ವಹಣೆಗೂ ಭಂಗವುಂಟಾಗಿದೆ. ಸಾರ್ವಜನಿಕರು ಬಂದರೆ ಅವರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲ. ಸಿಬ್ಬಂದಿಯೇ ಕೆಲವೊಮ್ಮೆ ಎದ್ದು ಅವರ ಕುರ್ಚಿ ಬಿಟ್ಟುಕೊಡುವ ಪರಿಸ್ಥಿತಿಯಿದೆ. ಅಷ್ಟೇ ಅಲ್ಲದೆ ಆರೋಪಿಗಳನ್ನು ಬಂಧಿಸಿಡಲು ಕಿರಿದಾದ ಸೆಲ್‌ ಇದೆ. ಜಾಗದ ಸಮಸ್ಯೆಯಿಂದ ಮತ್ತೂಂದು ಸೆಲ್‌ ಅನ್ನು ಕಡತಗಳನ್ನು ಸಂರಕ್ಷಿಸಿಡಲಾಗಿದೆ.

ಜಾಗದ ಸಮಸ್ಯೆಯಿಂದ ಆರೋಪಿಗಳನ್ನು ಬೇರೊಂದು ಠಾಣೆಗಳಿಗೆ ಕರೆದೊಯ್ದು ವಿಚಾರಣೆ ನಡೆಸಿರುವ ನಿದರ್ಶನಗಳು ಕೂಡ ಇವೆ. ಠಾಣಾಧಿಕಾರಿ ಕೊಠಡಿ ಠಾಣೆಯ ಪ್ರವೇಶ ದ್ವಾರದ ಪಕ್ಕವೇ ಇದೆ. ಒಳಭಾಗದಲ್ಲಿ ಪಿಎಎಸ್‌ಐಗಳ ಕೊಠಡಿಗಳಿವೆ. ಠಾಣೆಗೆ ದೂರು ದಾಖಲಿಸಿವವರು ಗೌಪ್ಯವಾಗಿ ಮಾಹಿತಿಯನ್ನು ಪೊಲೀಸರಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ದೂರುದಾರರು ಪೊಲೀಸರ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಸೆಲ್‌ನಲ್ಲಿರುವ ಆರೋಪಿಗಳಿಗೂ ಕೇಳಿಸುತ್ತದೆ. ಇದಲ್ಲದೆ ಮುಂದೆ ಇರುವ ರಸ್ತೆಯಲ್ಲಿ ನಿರಂತರವಾಗಿ ಹಾದು ಹೋಗುವ ವಾಹನಗಳ ಸದ್ದು, ಸಾರ್ವಜನಿಕರ ಸಂಭಾಷಣೆ ಗದ್ದಲ ಪೊಲೀಸ್‌ ಸಿಬ್ಬಂದಿಯು ಕಾರ್ಯನಿರ್ವಹಣೆಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡಲಿದೆ. ಪೊಲೀಸ್‌ ಠಾಣೆಯಲ್ಲಿ ಪ್ರತಿನಿತ್ಯ ಸಿಬ್ಬಂದಿಯ ರೋಲ್‌ಕಾಲ್‌ ಕೂಡ ಎಲ್ಲಿ ಮಾಡಬೇಕು ಎಂಬುದೇ ಪ್ರಶ್ನೆಯಾಗುತ್ತಿದೆ. ಸಮೀಪದಲ್ಲಿರುವ ಶಾಲಾ ಆವರಣದಲ್ಲಿ ರೋಲ್‌ ಕಾಲ್‌ ನಡೆಯುತ್ತಿದೆ. ಕೆಲವೊಮ್ಮೆ ಠಾಣೆಯ ಮೇಲೆ ಮಾಡಿಕೊಂಡು ಬರುವ ಸ್ಥಿತಿಯಿದೆ ಎಂದು ಮೂಲಗಳು ಹೇಳಿವೆ.

Advertisement

 

ಫುಟ್ಪಾತ್‌ ಜಾಗ ಆಕ್ರಮಿಸಿಕೊಂಡ ಜಪ್ತಿ ವಾಹನಗಳು:

ಜಾಗದ ಸಮಸ್ಯೆಯಿಂದಾಗಿ ಠಾಣೆಯ ಮುಂದಿರುವ ಪಾದಚಾರಿ ರಸ್ತೆ ಪೊಲೀಸರು ಜಪ್ತಿ ಮಾಡಿ ಕೊಂಡಿರುವ ವಾಹನಗಳಿಗೆ ಮೀಸಲಾಗಿದೆ. ಅಷ್ಟೇ ಅಲ್ಲದೆ ಠಾಣೆಯ ಸಿಬ್ಬಂದಿಯ ವಾಹನಗಳು ಕೂಡ ನಿಲ್ಲಿಸಲು ಜಾಗವಿಲ್ಲದೆ ಅಲ್ಲಿಯೇ ಆಶ್ರಯ ಪಡೆದುಕೊಂಡಿವೆ. ಪರಿಣಾಮ ಪಾದಚಾರಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಂತಾಗಿದೆ.

 

-ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next