Advertisement

ದಾಖಲೆ ಚಳಿಗೆ ಉತ್ತರ ಕರ್ನಾಟಕ ಗಡಗಡ

06:00 AM Dec 20, 2018 | Team Udayavani |

ಹುಬ್ಬಳ್ಳಿ: ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಚಳಿಗೆ ಥರಗುಟ್ಟುತ್ತಿದೆ. ಬುಧವಾರ ಬಿಸಿಲ ತಾಪದಿಂದ ಸದಾ ಕುದಿಯುವ ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ 9.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದೇ ವೇಳೆ, ಕಲಬುರಗಿಯಲ್ಲೂ ಒಂದೂವರೆ ದಶಕದ ಬಳಿಕ 12.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Advertisement

ಗುಮ್ಮಟ ನಗರಿ ವಿಜಯಪುರದಲ್ಲಿ ಚಳಿ ಜೊತೆಗೆ ಅಧಿಕ ಪ್ರಮಾಣದಲ್ಲಿ ಮಂಜು ಮುಸುಕಿದ ವಾತಾವರಣವಿದೆ. ಹೀಗಾಗಿ ಇಡೀ ದಿನ ಚಳಿಗೆ ನಡುಗುವಂತಾಗಿದೆ. ಡಿ.18ರಂದು 13 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ, ಡಿ.19ರಂದು 9.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಸುಕಿನಿಂದಲೇ ಅತ್ಯ ಧಿಕ ಮಂಜು ಆವರಿಸಿದ ಕಾರಣ ನಗರದ ಬಹುತೇಕ ಭಾಗದಲ್ಲಿ ಸೂರ್ಯನ ದರ್ಶನವೇ ಆಗಲಿಲ್ಲ. ವಿಶ್ವದ ಅಚ್ಚರಿ ಎನಿಸಿರುವ ಐತಿಹಾಸಿಕ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಬಹುಮಹಡಿ ಆಧುನಿಕ ಕಟ್ಟಡಗಳೆಲ್ಲ ಭಾರೀ ಪ್ರಮಾಣದ ಮಂಜು ಅವರಿಸಿ ಅಗೋಚರವಾಗಿದ್ದವು. ಇಂಥ ಮಂಜು ಹಾಗೂ ಚಳಿ ನಾನೆಂದೂ ಕಂಡಿರಲಿಲ್ಲ. ಮಂಜು ಹೆಚ್ಚಿಗೆ ಬೀಳುವ ಕಾರಣ ಮಳೆ ಕೊರತೆಯ ಮಧ್ಯೆಯೂ ಬೆಳೆದು ನಿಂತ ಬೆಳೆಗಳು ಉತ್ತಮವಾಗಿ ಹೂ ಬಿಟ್ಟು, ಕಾಳು ಕಟ್ಟಲು ಸಹಕಾರಿ ಆಗುತ್ತದೆ ಎನ್ನುತ್ತಾರೆ ವಿಜಯಪುರದ ಬಸನಗೌಡ ಬಿರಾದಾರ.

ಕಲಬುರಗಿಯಲ್ಲೂ ಚಳಿ:
ಸದಾ ಬಿಸಿಲಿನಿಂದ ಚುರುಗುಟ್ಟುವ ಕಲಬುರಗಿಯಲ್ಲೂ ಒಂದೂವರೆ ದಶಕದ ಬಳಿಕ ಕನಿಷ್ಟ ತಾಪಮಾನ ದಾಖಲಾಗಿದೆ. ಬುಧವಾರ 12.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ತ್ತು. ಮೈ ನಡುಗುವ ಚಳಿಯಿಂದ ಜನತೆ ತತ್ತರಿಸಿದ್ದಾರೆ. ಬೆಳಗಾವಿಯಲ್ಲಿ 12, ರಾಯಚೂರಿನಲ್ಲಿ 14, ಚಿತ್ರದುರ್ಗದಲ್ಲಿ 14, ಚಿಕ್ಕಮಗಳೂರಿನಲ್ಲಿ 15, ಶಿವಮೊಗ್ಗ ಹಾಗೂ ಧಾರವಾಡದಲ್ಲಿ 16, ಬಾಗಲಕೋಟೆಯಲ್ಲಿ 19, ಬಳ್ಳಾರಿ, ದಾವಣಗೆರೆ, ಕೊಪ್ಪಳ, ಹಾವೇರಿ, ಉತ್ತರ ಕನ್ನಡದಲ್ಲಿ ಕನಿಷ್ಟ 17 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಚಂಡಮಾರುತ ಎಫೆಕ್ಟ್:
ಭಾರತದ ಆಗ್ನೇಯ ದಿಕ್ಕಿನ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವಾಗಿ ವೇಗ ಪಡೆದ ಚಂಡಮಾರುತ ಹಾಗೂ ಪಶ್ಚಿಮದಿಂದ ಬೀಸುವ ಗಾಳಿಯ ಪರಿಣಾಮ ತಾಪಮಾನ ಕನಿಷ್ಟ ಮಟ್ಟ ತಲುಪಲು ಕಾರಣವಾಗಿದೆ. ಇದುವೇ ಕನಿಷ್ಟ ಹಾಗೂ ಗರಿಷ್ಠ ಮಂಜು ಆವರಿಸಿಕೊಳ್ಳಲು ಕಾರಣ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಇನ್ನೂ ಒಂದೆರಡು ದಿನ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ವಿವಿ ವಿಜಯಪುರ-ಹಿಟ್ನಳ್ಳಿ ಫಾರ್ಮ್ನ ಹವಾಮಾನ ವಿಭಾಗದ ತಜ್ಞ ವೆಂಕಟೇಶ್‌. ಚಂಡಮಾರುತದ ಪರಿಣಾಮದಿಂದ ಚಳಿ ಹೆಚ್ಚಾಗಿರುವುದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನ ಬೆಳಗ್ಗೆ, ಸಂಜೆ ಹೊರಗೆ ಓಡಾಡಲು ಹಿಂಜರಿಯುತವಂತಾಗಿದೆ.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಷ್ಟಾಗಿ ಚಳಿ ಇಲ್ಲ. ಹಿಂದೆಯೆಲ್ಲ 14, 15 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುತ್ತಿತ್ತು. ಆದರೆ, ಸೀಮಾಂಧ್ರದಲ್ಲಿ ಬೀಸಿದ ಸೈಕ್ಲೋನ್‌ನಿಂದಾಗಿ ಕಳೆದ 2-3 ದಿನಗಳಿಂದ 14 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.
ಡಾ.ಸತ್ಯನಾರಾಯಣ, ಸಹ ಸಂಶೋಧಕರು, ಕೃಷಿ ವಿವಿ ರಾಯಚೂರು

Advertisement

ಕಳೆದ ಮೂರ್ನಾಲ್ಕು ವರ್ಷಗಳಿಂದ ಕಡಿಮೆ ಮಳೆಯಾಗಿದ್ದು, ಪ್ರಸಕ್ತ ವರ್ಷವೂ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದ ಕಪ್ಪು ಮಣ್ಣಿನ ಈ ಪ್ರದೇಶದಲ್ಲಿ ತೇವಾಂಶ ಪ್ರಮಾಣ ಕಡಿಮೆಯಗುವ ಕಾರಣ ಇಂಥ ವಾತಾವಣರ ಸೃಷ್ಟಿಯಾಗುತ್ತದೆ.
ಡಾ.ಶಂಕರ ಕುಲಕರ್ಣಿ, ಕೃಷಿ ವಿವಿ ವಿಜಯಪುರ-ಹಿಟ್ನಳ್ಳಿ ಫಾರ್ಮ್ನ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next