ಮಲ್ಪೆ: ವಾಯುಭಾರ ಕುಸಿತದಿಂದಾಗಿ ಅರಬಿ ಸಮುದ್ರದಲ್ಲಿ ಚಂಡಮಾರುತ ಕಂಡು ಬಂದಿರುವುದರಿಂದ ಶುಕ್ರವಾರ ಬಹುತೇಕ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ದಡ ಸೇರಿದ್ದಾರೆ. ಜಿಲ್ಲೆ, ಹೊರಜಿಲ್ಲೆ ಸೇರಿದಂತೆ ಹೊರರಾಜ್ಯದ ಆಳಸಮುದ್ರ ಮೀನುಗಾರಿಕಾ ಬೋಟ್‌ಗಳು ದಡದತ್ತ ವಾಪಸಾಗುತ್ತಿವೆ.
ಕಳೆದ ಎರಡು ದಿನಗಳಿಂದ ಆಳಸಮುದ್ರದಲ್ಲಿ ಒಂದೇ ಸವನೆ ಗಾಳಿ ಬೀಸಲಾರಂಭಿಸಿದ್ದು ಭಾರೀ ಗಾತ್ರದ ಅಲೆಗಳು ಏಳುತ್ತಿವೆ. ಇದರಿಂದಾಗಿ ಆಳಸಮುದ್ರದಲ್ಲಿರುವ ದೋಣಿಗಳು ಮೀನುಗಾರಿಕೆ ನಡೆಸಲಾಗದೇ ಸಮೀಪದ ಬಂದರನ್ನು ಆಶ್ರಯಿಸಿವೆ.
ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ತೆರಳಿದ ಬಹುತೇಕ ಬೋಟುಗಳು ಗೋವಾ, ಕಾರವಾರ ಬಂದರಿಗೆ ಪ್ರವೇಶಿಸಿವೆ. ಮಂಗಳೂರು, ಮಲ್ಪೆ, ಹೊನ್ನಾವರ ಕಾರವಾರದಲ್ಲಿ ಈಗಾಗಲೇ ಪಸೀìನ್, ತ್ರಿಸೆವೆಂಟಿ, ಸಣ್ಣಟ್ರಾಲ್ ಬೋಟುಗಳು ತೆರಳಿಲ್ಲ.
ಮಲ್ಪೆ ಬಂದರಿನಲ್ಲಿ ಇಲ್ಲಿಯ ಬೋಟುಗಳಲ್ಲದೆ ಹೊರಬಂದರಿನ ಬೋಟುಗಳು ಬಂದಿದ್ದರಿಂದ ಜಾಗದ ಕೊರತೆಯಿರುವುದರಿಂದ ಹೊಳೆಭಾಗದಲ್ಲಿ ದೋಣಿಯನ್ನು ಇರಿಸಲಾಗಿದೆ.
ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡು 40 ದಿನದಗಳಲ್ಲಿ ಪ್ರಾಕೃತಿಕ ವಿಕೋಪ ಕಂಡು ಬಂದಿರುವುದು ಉತ್ತಮ ಮೀನುಗಾರಿಕೆಗೆ ಹೊಡೆತವಾಗಿದೆ. ಆರಂಭದಲ್ಲಿ ದಿನಗಳಲ್ಲಿ ಬಂಡಸೆ, ರಿಬ್ಬನ್ ಫಿಶ್ ಮೊದಲಾದ ಉತ್ತಮ ಜಾತಿಯ ಮೀನುಗಳು ಸಿಕ್ಕಿರುವುದು ಆಶಾದಾಯಕವಾಗಿತ್ತು. ಇದೀಗ ಚಂಡಮಾರುತ ಬಂದಿರುವುದು ಉತ್ತಮ ಮೀನುಗಾರಿಕೆಗೆ ತಣ್ಣೀರಚಿದಂತಾಗಿದೆ.