ಸುಳ್ಯ/ಪುತ್ತೂರು: ದಕ್ಷಿಣಕನ್ನಡದ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿಇಂದು ಸಾಯಂಕಾಲ ಗಾಳಿ ಸಹಿತ ಭಾರೀ ಮಳೆಯಾಗಿದೆ.
ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, ಎಕರೆಗಟ್ಟಲೆ ಬಾಳೆ ತೋಟ ನಾಶವಾಗಿದೆ. ಇಷ್ಟು ಮಾತ್ರವಲ್ಲದೆ ಪುತ್ತೂರು ಹಾಗೂ ಕಡಬ ತಾಲೂಕಿನ ಹಲವು ಕಡೆಗಳಲ್ಲಿ ಮರ ಮತ್ತು ಮರದ ಗೆಲ್ಲುಗಳು ಮುರಿದುಬಿದ್ದ ಕಾರಣ ಹಲವಾರು ವಾಹನಗಳು ಜಖಂಗೊಂಡಿವೆ.
ಪುತ್ತೂರಿನ ಬೆದ್ರಾಳ ಮರೀಲು ಬಳಿ ವಿದ್ಯುತ್ ಕಂಬ ರಸ್ತೆಗೆ ಉರುಳಿರುವ ಕಾರಣ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಇತ್ತ ದರ್ಭೆ – ಕಾಣಿಯೂರು ರಸ್ತೆಯ ಮರೀಲು ರೈಲ್ವೇ ಬ್ರಿಡ್ಜ್ ಬಳಿ ಮುಖ್ಯ ರಸ್ತೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಇನ್ನೊಂದು ಘಟನೆಯಲ್ಲಿ ಬೆದ್ರಾಳದಲ್ಲಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದರ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಲಾರಿ ಸಂಪೂರ್ಣ ಪೂರ್ಣ ಜಖಂಗೊಂಡಿದೆ. ಈ ಘಟನೆಯಿಂದ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಕಡಬ ತಾಲೂಕಿನ ಆಲಂಕಾರಿನಲ್ಲಿ ಇಂದು ಬೀಸಿದ ಗಾಳಿಯ ಹೊಡೆತಕ್ಕೆ ಸಿಲುಕಿ ಬಾಳೆ ತೋಟಪೂರ್ತಿ ನಾಶವಾಗಿದೆ.
ಅಜೇರಿನ ಪುಣಚದಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಇನ್ನು ಗೂನಡ್ಕ ದರ್ಖಾಸು ಬಳಿ ಗಾಳಿಯ ಅಬ್ಬರಕ್ಕೆ ಮನೆ ಮಾಡಿನ ಶೀಟುಗಳೆಲ್ಲಾ ಹಾರಿಹೋಗಿವೆ.