Advertisement

ಸರ್ವೆ ಗೌರಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳ

02:25 AM Jun 28, 2018 | Team Udayavani |

ವಿಶೇಷ ವರದಿ – ಸವಣೂರು: ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೌರಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಕಾಣಿಯೂರು, ಸವಣೂರು ಭಾಗದ ಜನತೆಗೆ ಪುತ್ತೂರಿನ ರಸ್ತೆ ನಡುವೆ ಗೌರಿ ಹೊಳೆ ಸಿಗುತ್ತಿದ್ದು, ಇಲ್ಲಿನ ಹಳೆಯ ಸಂಪರ್ಕ ಕಲ್ಪಿಸುವ ಈ ಸೇತುವೆ ಹಳೆಯದಾಗಿದೆ. ಸಾಕಷ್ಟು ತಗ್ಗಿನಲ್ಲೂ ಇದೆ. ಸವಣೂರು – ಪುತ್ತೂರು ನಡುವೆ ಸಂಪರ್ಕದ ದೃಷ್ಟಿಯಿಂದ ಇರುವ ಏಕೈಕ ದಾರಿ ಇದು.

Advertisement

ಮುಳುಗು ಸೇತುವೆ
ಗೌರಿಹೊಳೆಯ ಸೇತುವೆಯು ಸವಣೂರು, ಮುಂಡೂರು ಹಾಗೂ ನರಿ ಮೊಗರು – ಈ ಮೂರು ಗ್ರಾ.ಪಂ.ಗಳ ವ್ಯಾಪ್ತಿಗೆ ಸೇರಿದೆ. ತೀರಾ ತಳಮಟ್ಟದಲ್ಲಿ ನಿರ್ಮಿಸಿರುವ ಕಾರಣ ಈ ಸೇತುವೆ ಮುಳುಗಡೆಯ ಭೀತಿಯನ್ನೂ ಎದುರಿಸುತ್ತಿದೆ. ಮುಳುಗು ಸೇತುವೆಯಾಗಿರುವ ಕಾರಣ ಎರಡು ಬದಿಗಳಲ್ಲಿ ತಡೆಬೇಲಿ ನಿರ್ಮಿಸದೆ, ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ. ಆದರೆ, ವಾಹನ ಚಾಲಕರು ಹಾಗೂ ಸವಾರರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಸೇತುವೆಯನ್ನು ಮೇಲ್ದರ್ಜೆಗೇರಿಸಿ, ಉತ್ತಮ ಸೇತುವೆಯಾಗಿ ಪರಿವರ್ತಿಸಿದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸೇತುವೆಯ ಮೇಲೆ ದಿನೇ ದಿನೇ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಪ್ರಮುಖ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ, ಕಾಣಿಯೂರು, ಪಂಜ ಹಾಗೂ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪುತ್ತೂರು -ಸವಣೂರು -ಕಾಣಿಯೂರು ರಸ್ತೆಯ ಸರ್ವೆಯಲ್ಲಿನ ಮುಳುಗು ಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ಪರಿವರ್ತಿಸುವ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ.


1963ರಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣಗೊಂಡ ಈ ಸೇತುವೆಯನ್ನು ಎತ್ತರದಲ್ಲಿ ಹೊಸದಾಗಿ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ಮುಳುಗು ಸೇತುವೆಯ ಅಡೆ-ತಡೆ ಪ್ರಯಾಣಿಕರಿಗೆ ಇದ್ದೆ ಇದೆ. ಅಪಾಯಕಾರಿ ತಿರುವು ಕೂಡ ಸವಾರರಿಗೆ ಸವಾಲಾಗಿದೆ.

ಡಾಮರು ಕಾಮಗಾರಿ
ಕೆಲ ವರ್ಷಗಳ ಹಿಂದೆಯಷ್ಟೇ ಪುತ್ತೂರು -ಕಾಣಿಯೂರು- ಮಂಜೇಶ್ವರ ರಾಜ್ಯ ಹೆದ್ದಾರಿಯ ರಸ್ತೆಯ ವಿಸ್ತರಣೆ ಹಾಗೂ ಡಾಮರು ಹಾಕುವ ಕಾಮಗಾರಿ ಪೂರ್ಣಗೊಂಡಿದೆ. ಆ ಸಮಯದಲ್ಲೇ ಈ ಸೇತುವೆಯ ಮೇಲ್ದರ್ಜೆಗೆ ಅನುದಾನ ಬಿಡುಗಡೆಗೊಂಡಿದ್ದರೆ ಸೇತುವೆ ಕಾರ್ಯ ಜತೆಯಾಗಿ ನಡೆಯುತ್ತಿತ್ತು ಎಂಬುವುದು ಗ್ರಾಮಸ್ಥರ ಅಭಿಪ್ರಾಯ. ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಮೂಲಕ ಧರ್ಮಸ್ಥಳಕ್ಕೆ ಪ್ರಯಾಣಿಸ ಬೇಕಾದರೆ ಸರ್ವೆ ಮುಳುಗು ಸೇತುವೆ ದಾಟಲೇಬೇಕು. ಮುಂದಿನ ದಿನಗಳಲ್ಲಿ ಈ ರಸ್ತೆ ವಾಹನ ದಟ್ಟಣೆಯ ರಸ್ತೆ ಆಗುವುದು ಖಚಿತ.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಪ್ರಕಾರ ಸೇತುವೆ ಬಳಕೆಗೆ ಯೋಗ್ಯ ಸ್ಥಿತಿಯಲ್ಲಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಅನುದಾನ ಬಿಡುಗಡೆಯಾದ ಬಳಿಕ ಮೇಲು ಸೇತುವೆಯ ಕನಸು ನನಸಾಗಲಿದೆ. ತಿರುವು ಪ್ರದೇಶಗಳ ಸುರಕ್ಷತೆಯ ದೃಷ್ಟಿಗೆ ಮೇಲು ಸೇತುವೆ ಅನುಕೂಲ ಎನ್ನುವ ಲೆಕ್ಕಾಚಾರ. ಅಂತೂ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next