ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿರುವ ಪರಿಣಾಮ ನಿಗದಿ ಭಾರಕ್ಕಿಂತ ಅಧಿಕ ಭಾರ ಹೊತ್ತು ಸಂಚರಿಸುವ ಟಿಪ್ಪರ್ ಲಾರಿಗಳಿಗೆ ಲಗಾಮು ಹಾಕುವರೇ ಇಲ್ಲದಂತಾಗಿದ್ದು, ಇದರ ಪರಿಣಾಮ ಒಂದಡೆ ಸರಣಿ ಅಪಘಾತಗಳಾದರೆ ಮತ್ತೂಂದಡೆ ಲಕ್ಷಾಂತರ ರೂ. ಸುರಿದು ಡಾಂಬರೀಕರಣ ಮಾಡಿದ ರಸ್ತೆಗಳು ಹಾಳಾಗಿ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಹೌದು, ಜಿಲ್ಲೆಯಲ್ಲಿ ಬಳ್ಳಾರಿಯನ್ನು ಮೀರಿಸುವ ಪ್ರಮಾಣದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಒಂದರದಲ್ಲಿಯೆ ಗಣಿಗಾರಿಕೆ ನಡೆಯುತ್ತಿದ್ದು, ಸರ್ಕಾರಕ್ಕೆ ರಾಜಧನ ಸಂಗ್ರಹದ ಮೂಲಕ ವಾರ್ಷಿಕ ಕೋಟ್ಯಾಂತರ ರೂ. ಆದಾಯ ಹರಿದು ಹೋದರೂ ಜಿಲ್ಲೆಯಲ್ಲಿ ಮಾತ್ರ ಅಧಿಕ ಭಾರ ಹೊತ್ತು ಸಂಚರಿಸುವ ಲಾರಿಗಳ ಪರಿಣಾಮ ಅಪಘಾತಗಳ ಸರಣಿಗೆ ಕಾರಣವಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ.
ಜಿಲ್ಲೆಯಲ್ಲಿ 151 ಕಲ್ಲು ಕ್ವಾರಿಗಳು: ಜಿಲ್ಲೆಯಲ್ಲಿ 89 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳು, 151 ಕಲ್ಲು ಕ್ವಾರಿಗಳು, 74 ಜೆಲ್ಲಿ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ನೂರಾರು ಲಾರಿಗಳ ಮೂಲಕ ಕಟ್ಟಡ ಹಾಗೂ ಇತರೇ ನಿರ್ಮಾಣಕ್ಕೆ ಅವಶ್ಕವಾದ ಸಾಮಗ್ರಿಗಳು ಜಿಲ್ಲೆಯ ಗಣಿಗಾರಿಕೆಯಿಂದ ಬೆಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ. ಆದರೆ, ಲಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಕಲ್ಲು, ಜೆಲ್ಲಿ, ಎಂ. ಸ್ಯಾಂಡ್ ಮತ್ತಿತರ ಕಟ್ಟಡಗಳಿಗೆ ಅವಶ್ಯಕ ಸಾಮಗ್ರಿಗಳು ಸಾಗಿಸುವಾಗ ಲಾರಿ ಮಾಲೀಕರು ಅಕ್ರಮವಾಗಿ ಅಧಿಕ ಭಾರ ಹೊತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಮೂಲಕ ರಸ್ತೆ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.
ಸಾಮಾನ್ಯವಾಗಿ 6 ಚಕ್ರ ವಾಹನಗಳಿಗೆ 10-15 ಟನ್, 10 ಚಕ್ರಗಳ ವಾಹನಗಳಿಗೆ 25-35 ಟನ್ ಹಾಗೂ 14 ಚಕ್ರದ ವಾಹನಗಳಲ್ಲಿ 30-14 ಟನ್ ಹಾಗೂ 16 ಚಕ್ರದ ವಾಹನಗಳಲ್ಲಿ 34-48 ಟನ್ ಹಾಕಬಹುದು. ಆದರೆ ಲಾರಿ ಮಾಲೀಕರು ನಿಗದಿತ ತೂಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ 4-8 ಟನ್ ಅಧಿಕವಾಗಿ ಸಾಗಾಟ ಮಾಡುವ ಮೂಲಕ ಜಿಲ್ಲೆಯ ನೈಸರ್ಗಿಕ ಸಂಪತ್ತು ಲೂಟಿಗೆ ಇಳಿದಿದ್ದಾರೆ.
ಮುದ್ದೇನಹಳ್ಳಿ, ಜಡಲತಿಮ್ಮನ ರಸ್ತೆ ದುಸ್ಥಿತಿ ಕೇಳುವವರಿಲ್ಲ : ಅಧಿಕ ಭಾರ ಹೊತ್ತ ಲಾರಿಗಳಿಂದ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನ ಹಳ್ಳಿ ರಸ್ತೆ,ನಂದಿ ರಸ್ತೆ ಹಾಗೂ ಜಡಲತಿಮ್ಮನಹಳ್ಳಿ ರಸ್ತೆಗಳು ಪೂರ್ಣ ಹಾಳಾಗಿದ್ದು, ಎಷ್ಟು ಬಾರಿ ಡಾಂಬರೀಕರಣ ಮಾಡಿದರೂ ಟಿಪ್ಪರ್ ಲಾರಿಗಳ ಸಂಚಾರಕ್ಕೆ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ಸುಗಮ ವಾಹನ ಸಂಚಾರಕ್ಕೆ ತೀವ್ರ ಸಂಚಕಾರ ತರುತ್ತಿವೆ. ಕೆಲವೊಮ್ಮೆ ಲಾರಿಗಳನ್ನು ಅಡ್ಡಗಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿಲ್ಲ. ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ, ಮಂಡಿಕಲ್ಲು, ಗುಡಿಬಂಡೆ ಸುತ್ತಮುತ್ತಲೂ ಟಿಪ್ಪರ್ ಲಾರಿಗಳ ಅಬ್ಬರ ಹೆಚ್ಚಾಗಿದೆ. ಈ ಭಾಗದಲ್ಲಿ ಕೆಲವೊಂದು ಕಡೆ ಅಕ್ರಮ ಗಣಿಗಾರಿಕೆ ಹೆಚ್ಚಾಗಿದ್ದು, ರಾತ್ರೋರಾತ್ರಿ ಜಿಲ್ಲೆ ಯಿಂದ ಅಕ್ರಮವಾಗಿ ಜೆಲ್ಲಿ, ಎಂ.ಸ್ಯಾಂಡ್ ಹಾಗೂ ಕಲ್ಲುಗಳನ್ನು ಸಾಗಿಸುವ ಲಾರಿಗಳು ಅಧಿಕ ಭಾರ ಹೊತ್ತು ಸಂಚರಿಸುವ ಮೂಲಕ ರಸ್ತೆ ಸುರಕ್ಷತಾ ನಿಯಮ ಗಾಳಿಗೆ ತೂರಿವೆ.
ಭಾರ ಹೊತ್ತು ಸಾಗುವ ಲಾರಿಗಳಿಂದ ಅಪಘಾತ: ಅಧಿಕ ಭಾರ ಹೊತ್ತು ಸಂಚರಿಸುವ ಟಿಪ್ಪರ್ ಲಾರಿಗಳು ಹೆದ್ದಾರಿಗಳಲ್ಲಿ ರಾಜಾರೋಷವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂ ಸಿ ಸಂಚರಿಸುತ್ತಿರುವ ಪರಿಣಾಮವೇ ಚಿಕ್ಕಬಳ್ಳಾಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ಟಿಪ್ಪರ್ ಲಾರಿಗಳ ಮಾಲೀಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಲಾರಿಗಳನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದು ಇದರಿಂದ ಬೈಕ್, ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಅಪಘಾತಗಳಿಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಸುತ್ತಮುತ್ತ ಸಂಭವಿಸುವ ರಸ್ತೆ ಅಪಘಾತಗಳಿಗೆ ಬಹುತೇಕ ಸರಕು ಸಾಗಾಣಿ ಮಾಡುವ ಲಾರಿಗಳು, ಕಂಟೈನರ್ ಲಾರಿಗಳು, ಬಲ್ಕರ್ ಲಾರಿಗಳು, ಜೆಲ್ಲಿ, ಎಂ.ಸ್ಯಾಂಡ್, ಕಟ್ಟಡ ಕಲ್ಲುಗಳನ್ನು ಸಾರಿಸುವ ಲಾರಿಗಳಿಂದಲೇ ಹೆಚ್ಚು ಸಂಭವಿಸುತ್ತಿರುವುದು ಎದ್ದು ಕಾಣುತ್ತಿದೆ.
ಬರೀ 51 ಪ್ರಕರಣ, 19.10 ಲಕ್ಷ ದಂಡ ವಸೂಲಿ : ಜಿಲ್ಲೆಯಲ್ಲಿ ಅಧಿಕ ಭಾರ ಹೊತ್ತು ಸಂಚರಿಸುವ ಸರಕು ಸಾಗಾಣಿ ವಾಹನಗಳ ವಿರುದ್ಧ ಇಲ್ಲಿವರೆಗೂ ಕೇವಲ 51 ಪ್ರಕರಣಗಳನ್ನು ಮಾತ್ರ ದಾಖಲಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, 7,36,049 ರಾಜಿ ದಂಡ ಹಾಗೂ 11,74,821 ರೂ. ತೆರಿಗೆ ಸೇರಿ ಒಟ್ಟು 19,10,870 ವಸೂಲಿ ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಅಪರೂಪಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಾಚರಣೆ ನಡೆಸಿ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದು ಕೆಲವೊಂದು ಲಾರಿಗಳು ಅಡ್ಡದಾರಿಯಲ್ಲಿ ಸಂಚರಿಸಿದರೂ ಮೌನವಾಗಿದ್ದಾರೆ.
– ಕಾಗತಿ ನಾಗರಾಜಪ್ಪ