Advertisement
ರಾಷ್ಟ್ರೀಯ ಹೆದ್ದಾರಿ 48ರ ಕೆಂಪು ಹೊಳೆಯಿಂದ ಶಿರಾಡಿ ಗ್ರಾಮದ ಅಡ್ಡ ಹೊಳೆವರೆಗೆ 8.50 ಮೀ. ಅಗಲ, 12.38 ಕಿ.ಮೀ. ಉದ್ದದ ರಸ್ತೆಗೆ ಕಾಂಕ್ರೀಟ್ ಅಳವಡಿಸುವ ಕಾಮಗಾರಿಯನ್ನು ಮಂಗಳೂರಿನ ಓಷಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆ ಜನವರಿಯಲ್ಲಿ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸಕಲೇಶಪುರದಿಂದ ಧರ್ಮಸ್ಥಳವರೆಗೂ ಹೆದ್ದಾರಿ ಬದಿಯ ಹೊಟೇಲ್ ಗಳು, ಅಂಗಡಿ ಮುಂಗಟ್ಟುಗಳು ವ್ಯಾಪಾರವಿಲ್ಲದೆ ತೀವ್ರ ಆರ್ಥಿಕ ಹೊಡೆತ ಅನುಭವಿಸಿದ್ದವು. ಕೆಲವು ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಪ್ರಸ್ತುತ ಎಲ್ಲ ಮಳಿಗೆಗಳು ಮತ್ತೆ ಬಾಗಿಲು ತೆರೆದು ಗ್ರಾಹಕರನ್ನು ಸೆಳೆಯಲು ಸಜ್ಜಾಗಿವೆ.
ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದರೂ ಅಲ್ಲಲ್ಲಿ ತಡೆಗೋಡೆಗಳ ಕಾಮಗಾರಿ ಈಗಲೂ ನಡೆಯುತ್ತಿದೆ. ಹೊಳೆಯ ನೀರಿನ ರಭಸಕ್ಕೆ ರಸ್ತೆಯ ಬದಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇರುವುದರಿಂದ ಅಂತಹ ಕಡೆಗಳಲ್ಲಿ ವಾಹನ ಸವಾರರು ನಿಗದಿತ ವೇಗದಲ್ಲಿಯೇ ಎಚ್ಚರದಿಂದ ವಾಹನ ಚಲಾಯಿಸುವುದು ಸೂಕ್ತ. ಮಾರನಹಳ್ಳಿಯಲ್ಲಿ ಹೊಳೆನೀರಿನ ರಭಸಕ್ಕೆ ರಸ್ತೆ ಬದಿಯ ಮಣ್ಣು ಕೊಚ್ಚಿಹೋಗಿ ಕಾಂಕ್ರೀಟ್ ರಸ್ತೆಯ ತಳಭಾಗಕ್ಕೂ ಕೆಲವು ದಿನಗಳ ಹಿಂದೆ ಅಪಾಯ ಎದುರಾಗಿತ್ತು. ಇದೀಗ ತಾತ್ಕಾಲಿಕವಾಗಿ ಸರಿಪಡಿಸಲಾಗಿದೆಯಾದರೂ ಎಚ್ಚರದಿಂದಲೇ ಸಾಗುವುದು ಉತ್ತಮ.