Advertisement

ಬಿಸ್ಲೆ ಘಾಟ್‌ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ವಿರೋಧ

04:18 PM Aug 17, 2021 | Team Udayavani |

ಸಕಲೇಶಪುರ: ತಾಲೂಕಿನಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಬಿಸಿಲೆ ಘಾಟ್‌ ರಸ್ತೆಯಲ್ಲಿ ಭಾರೀ ಗಾತ್ರದ ವಾಹನ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಬಿಸ್ಲೆ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಾಲ್ಸೂರು-ಬಿಸ್ಲೆ-ವನಗೂರು ರಾಜ್ಯ ಹೆದ್ದಾರಿ 87 ದಕ್ಷಿಣ ಕನ್ನಡ ಹಾಗೂ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಘಾಟ್‌ ರಸ್ತೆಯಾಗಿದ್ದು
ಬಿಸ್ಲೆ, ವನಗೂರು, ಹೆತ್ತೂರು, ಯಸಳೂರು ಸುತ್ತಮುತ್ತಲಿನ ಜನತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಈ ರಸ್ತೆಯನ್ನೇ ಆಶ್ರಯಿಸಿದ್ದಾರೆ. ಅರಕಲಗೂಡು, ಸೋಮವಾರಪೇಟೆ ತಾಲೂಕುಗಳ ವಾಹನ ಸವಾರರೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಇದೇ ರಸ್ತೆ ಬಳಸುತ್ತಿದ್ದಾರೆ. ಇದಲ್ಲದೆ ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಿಂದ ಬಿಸ್ಲೆಗೆ ಬರುವ ಪ್ರವಾಸಿಗರು ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳಗಳಾದ
ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗಲು ಈ ರಸ್ತೆ ಮೇಲೆ ಅವಲಂಬಿತರಾಗಿದ್ದಾರೆ.

ತಾಲೂಕಿನ ವನಗೂರಿನಿಂದ-ಸುಬ್ರಹ್ಮಣ್ಯ ನಡುವೆ ಸುಮಾರು 41 ಕಿ.ಮೀ ಅಂತರದ ಕಡಿದಾದ ತಿರುವು ಹೊಂದಿರುವ ಈ ರಸ್ತೆ, ಹಲವು ವರ್ಷ ದುಸ್ಥಿತಿಯಲ್ಲಿದ್ದು ಸಂಚಾರ ಕಷ್ಟಕರವಾಗಿತ್ತು. ಈ ಹಿನ್ನೆಲೆ ಎ.ಮಂಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2018ರಲ್ಲಿ ಈ ರಸ್ತೆಯನ್ನು ದುರಸ್ಥಿಪಡಿಸಲಾಯಿತು. ಚೌಡಮ್ಮನ ದೇವಸ್ಥಾನದ ಸಮೀಪ 4 ಕಿ.ಮೀ. ದೂರದ ಅಂತರವನ್ನು 2021ಇತ್ತೀಚೆಗಷ್ಟೆ ಅರಣ್ಯ ಇಲಾಖೆ ತಕರಾರು ನಡುವೆ ಪೂರ್ಣಗೊಳಿಸಲಾಯಿತು.

ಇದನ್ನೂ ಓದಿ:ಇದೊಂದು ಉಗ್ರಗಾಮಿ ಸಂಘಟನೆ; ತಾಲಿಬಾನ್ ಫೇಸ್ ಬುಕ್ ಖಾತೆ ರದ್ದು: ಎಫ್ ಬಿ ಸಂಸ್ಥೆ

ಈ ರಸ್ತೆ ಪ್ರವಾಸಿಗರಿಗೆ ಸ್ವರ್ಗವಾಗಿದ್ದು ಕಡಿದಾದ ತಿರುವು ಹೊಂದಿರುವುದರಿಂದ ಸಣ್ಣಪುಟ್ಟ ವಾಹನ, ಸಾರ್ವಜನಿಕ ಸಾರಿಗೆ ವಾಹನಗಳಿಗೆ
ಮಾತ್ರ ತಿರುಗಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಆದರೆ, ಇತ್ತೀಚೆಗಷ್ಟೇ ದೋಣಿಗಾಲ್‌ ಸಮೀಪ ಭೂ ಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ 75 ಸಕಲೇಶಪುರ-ಮಂಗಳೂರು ನಡುವೆ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಟ್ಯಾಂಕರ್‌, ಮೈನ್ಸ್‌ ಲಾರಿಯಂತಹ ಭಾರೀ ವಾಹನಗಳ ಚಾಲಕರು ಬಿಸ್ಲೆ ಹಾಗೂ ಚೌಡಮ್ಮನ ದೇವಸ್ಥಾನದ ಸಮೀಪವಿರುವ ಚೆಕ್‌ ಪೋಸ್ಟ್‌ನಲ್ಲಿ ಹಣ ನೀಡಿ ವಾಹನ ಚಲಾಯಿಸುತ್ತಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಜತೆಗೆ ಕಡಿದಾದ ತಿರುವುಗಳಿರುವ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ರಸ್ತೆ ಹದಗೆಡುವ ಸಾಧ್ಯತೆ ಇರುವುದಲ್ಲದೆ ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಬೇಕೆಂದು ಬಿಸ್ಲೆ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕುರಿತು ನನಗೆ ಮಾಹಿತಿಯಿಲ್ಲ. ಈ ಕುರಿತು ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಜತೆ ಸಭೆ ಸೇರಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
-ಅನ್ವರ್‌ ಭಾಷಾ, ಕಾರ್ಯಪಾಲಕ ಅಭಿಯಂತರರು, ಲೋಕೋಪ ಯೋಗಿ ಇಲಾಖೆ, ಸಕಲೇಶಪುರ
ಉಪವಿಭಾಗ

ಬಿಸ್ಲೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ರಸ್ತೆ ಹದಗೆಡುವುದರಲ್ಲಿ ಅನುಮಾನವಿಲ್ಲ. ಕೂಡಲೇ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಬೇಕು.
-ಆನಂದ್‌,
ವನಗೂರು ಗ್ರಾಪಂ ಅಧ್ಯಕ್ಷರು

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next