Advertisement

ದುಬಾರಿ ದಂಡದ ಭಯ: ಡಿ.ಎಲ್.ಗೆ ದುಂಬಾಲು!

07:30 PM Sep 12, 2019 | mahesh |

ಸುಳ್ಯ: ಹೊಸ ಕಾಯ್ದೆ ಪ್ರಕಾರ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ತೆರೆಬೇಕಾದ ಬೆನ್ನಲ್ಲೇ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲನ ಪರವಾನಿಗೆಗೆ ಅರ್ಜಿ ಸಲ್ಲಿಸುವವರ ಪ್ರಮಾಣದಲ್ಲಿ ಶೇ. 20 ಏರಿಕೆ ಕಂಡಿದೆ!

Advertisement

ಎಲ್ಎಲ್ಆರ್‌, ಡಿಎಲ್ಗೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ದ್ವಿಗುಣಗೊಂಡಿದೆ ಅನ್ನುತ್ತಿದೆ ಸಾರಿಗೆ ಇಲಾಖೆಯ ಈಗಿನ ಅಂಕಿ-ಅಂಶ.

ದಂಡದ ಆತಂಕ
ಲೈಸನ್ಸ್‌ ಇಲ್ಲದೆ ಸಣ್ಣ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ಸವಾರರಿಗೆ ಈಗಿನ ದಂಡದ ಮೊತ್ತ ಅರಗಿಸಿಕೊಳ್ಳಲಾಗದಷ್ಟು ಏರಿರುವುದೇ ಅರ್ಜಿ ಸಲ್ಲಿಕೆ ಪ್ರಮಾಣ ಹೆಚ್ಚಳಕ್ಕೆ ಕಾರಣ. ಪುತ್ತೂರು-ಸುಳ್ಯ ತಾಲೂಕು ಒಳಗೊಂಡ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಗೆ ಎಲ್ಎಲ್ಆರ್‌, ಡಿಎಲ್ ಬಾಕಿ ಇರುವ ಸವಾರರು, ಚಾಲಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಸೈಬರ್‌ ಕೇಂದ್ರ, ಚಾಲನೆ ಕಲಿಕಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸುವವರು ಸಂಖ್ಯೆ ದುಪ್ಪಟ್ಟಾಗಿದೆ ಎನ್ನುತ್ತಾರೆ ಕಲಿಕಾ ಕೇಂದ್ರಗಳ ಮಾಲಕರು.

60 ಸ್ಲಾಟ್ ಭರ್ತಿ
ಸಾರಿಗೆ ಇಲಾಖೆ ಪರಿವಾಹನ್‌ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಎಲ್ಎಲ್ಆರ್‌ ಮತ್ತು ಡಿಎಲ್ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಜಿದಾರ ನಿಗದಿಪಡಿಸಿಕೊಂಡ ದಿನಾಂಕದಂದು ಆರ್‌ಟಿಒ ಕಚೇರಿಗೆ ಬಂದು ದಾಖಲೆ ಸಲ್ಲಿಕೆಯೊಂದಿಗೆ ಅಲ್ಲೇ ಆನ್‌ಲೈನ್‌ ಪರೀಕ್ಷೆಗೆ ಹಾಜರಾಗಿ ಎಲ್ಎಲ್ಆರ್‌ ಪಡೆದು, ಒಂದು ತಿಂಗಳ ಬಳಿಕ ಡಿಎಲ್ ಪಡೆಯಬಹುದು. ಪುತ್ತೂರು ಕಚೇರಿಯಲ್ಲಿ ದಿನವೊಂದಕ್ಕೆ 60 ಸ್ಲಾಟ್ ಇವೆ. ಹೊಸ ಕಾಯ್ದೆ ಅನುಷ್ಠಾನಕ್ಕೆ ಮೊದಲು 25ರಿಂದ 30 ಸ್ಲಾಟ್ ಮಾತ್ರ ಭರ್ತಿ ಆಗುತ್ತಿದ್ದವು. ಭಾರೀ ದಂಡದ ಬಳಿಕ ಪ್ರತಿದಿನವೂ 60 ಸ್ಲಾಟ್ ಭರ್ತಿ ಆಗುತ್ತಿವೆ. ಕೆಲವೊಂದು ದಿನ ಹೆಚ್ಚುವರಿ ಬೇಡಿಕೆ ಇದೆ. ಸಾಮಾನ್ಯವಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಅನುಕೂಲಕರ ದಿನ ಮತ್ತು ಸಮಯ ಆಯ್ಕೆ ಮಾಡಿಕೊಂಡು ಸಾರಿಗೆ ಇಲಾಖೆ ಕಚೇರಿಗೆ ಬರುತ್ತಿದ್ದ ವಾಹನ ಸವಾರರು ದಂಡದ ಭಯದಿಂದ ತುರ್ತಾಗಿ ಡಿಎಲ್ ಪಡೆಯಲು ಮುಂದಾಗಿದ್ದಾರೆ.

ವಿಮಾ ಕಚೇರಿಯಲ್ಲೂ ರಶ್‌
ವಾಹನಗಳ ಇನ್ಶೂರೆನ್ಸ್‌ ನವೀಕರಣ ಮಾಡಿರದ ಸವಾರರು ವಿಮಾ ಕಚೇರಿ ಮುಂಭಾಗ ಕಾಯುತ್ತಿದ್ದಾರೆ. ವಾಯು ಮಾಲಿನ್ಯ ತಪಾಸಣ ಕೇಂದ್ರಗಳಲ್ಲಿ ತಪಾ ಸಣಾ ಪತ್ರ ಪಡೆದುಕೊಳ್ಳುತ್ತಿರುವ ಸಂಖ್ಯೆ ಕೂಡ ಹೆಚ್ಚಾಗಿದೆ.

Advertisement

ಎಲ್ಲೆಡೆ ಅವಕಾಶ
ಡಿಎಲ್, ವಾಹನ ನೋಂದಣಿಯನ್ನು ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೂ ಮಾಡುವ ಅವಕಾಶ ಇದೆ. ಹೀಗಾಗಿ ಪುತ್ತೂರು ವ್ಯಾಪ್ತಿಯವರು ಮಂಗಳೂರು, ಬಂಟ್ವಾಳ ಹೀಗೆ ಬೇರೆ ಕಡೆಗೆ ತೆರಳಿ ಎಲ್ಎಲ್ಆರ್‌, ಡಿಎಲ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೂ ಇಲ್ಲಿ ಪರವಾನಿಗೆ ಪಡೆಯುವವರ ಸಂಖ್ಯೆ ಸ್ವಲ್ಪ ಏರಿಕೆ ಕಂಡಿದೆ. – ಆನಂದ ಗೌಡ, ಆರ್‌ಟಿಒ, ಪುತ್ತೂರು ಸಾರಿಗೆ ಪ್ರಾದೇಶಿಕ ಕಚೇರಿ

Advertisement

Udayavani is now on Telegram. Click here to join our channel and stay updated with the latest news.

Next