Advertisement

ಹೆಚ್ಚಿದ ವಾಹನ ದಟ್ಟಣೆ : ನಿಯಮ ಮರೆತ ಜನರಿಂದ 24,800 ರೂ. ದಂಡ ಸಂಗ್ರಹ

07:31 PM Jun 15, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಮಂಗಳವಾರ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಇತರೆ ಅಂಗಡಿಗಳು ಕಾರ್ಯಾಚರಿಸುತ್ತಿರುವ ದೃಶ್ಯ ಉಡುಪಿ ನಗರದ ವ್ಯಾಪ್ತಿಯಲ್ಲಿ ಕಂಡು ಬಂತು.

Advertisement

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ದಿನನಿತ್ಯ ವಸ್ತುಗಳ ಅಂಗಡಿ, ಕೃಷಿ ಯಂತ್ರೋಪಕರಣ, ಕಟ್ಟಡ ನಿರ್ಮಾಣ ಮಳಿಗೆ ಸೇರಿದಂತೆ ಇತರೆ ಅಗತ್ಯ ಮಳಿಗೆಗಳನ್ನು ಕೋವಿಡ್‌ ನಿಯಮಾವಳಿಯೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ನಗರದಲ್ಲಿ ರಸ್ತೆಯ ಬದಿಯಲ್ಲಿ ಚಪ್ಪಲಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳನ್ನು ತೆರೆದು ಕಾರ್ಯಾಚರಿಸಲಾರಂಭಿಸಿದ್ದು, ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಂದ್‌ ಮಾಡಿಸಿದ್ದಾರೆ.

ದಂಡದಲ್ಲಿ ಹೆಚ್ಚಳ
ಲಾಕ್‌ಡೌನ್‌ ಬಳಿಕ ಜೂ.14ರಂದು (ಆನ್‌ಲಾಕ್‌ ಮೊದಲ ದಿನ) 24,800 ರೂ. ದಂಡ ದಾಖಲಾಗಿದೆ. ಅದರಲ್ಲಿ 16,300 ರೂ. ನಗರಾಡಳಿತದಿಂದ ಸಂಗ್ರಹವಾಗಿದ್ದು, ಉಡುಪಿ ನಗರದಲ್ಲಿ 16,000ರೂ., ಬೈಂದೂರು ಪ.ಪಂ.ನಲ್ಲಿ 200 ರೂ. ಹಾಗೂ ಕುಂದಾಪುರ ಪುರಸಭೆಯಿಂದ 100ರೂ. ನಂತೆ ಒಟ್ಟು 16,300 ರೂ. ದಂಡ ಸಂಗ್ರಹವಾಗಿದೆ. ಪೊಲೀಸ್‌ ಇಲಾಖೆಯಿಂದ 7,900 ರೂ. ಸಂಗ್ರಹವಾಗಿದೆ. ಎ.27ರ ಬಳಿಕ ಇದೇ ಮೊದಲ ಬಾರಿ 240 ಪ್ರಕರಣಗಳು ದಾಖಲಾಗಿದೆ.

ಟ್ರಾಫಿಕ್‌ ಹೆಚ್ಚಳ
ಅನ್‌ಲಾಕ್‌ ಎರಡನೇ ದಿನವಾದ ಮಂಗಳವಾರ ನಗರದಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿಯೂ ಸಹ ವಾಹನ ಸಂಚಾರ ಹೆಚ್ಚಾಗಿತ್ತು. ಉಡುಪಿ ನಗರದ ಎಲ್ಲ ರಸ್ತೆಗಳಲ್ಲಿಯೂ ವಾಹನಗಳು ಎರಡೂ ಬದಿಯಲ್ಲಿ ನಿಂತುಕೊಂಡ ಪರಿಣಾಮ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹರಸಾಹಸಪಟ್ಟರು.

ಇದನ್ನೂ ಓದಿ :ಅಮೆರಿಕದಲ್ಲಿ ಗ್ರಾಹಕ ವಲಯ ಕೇಂದ್ರೀತ ಎಸ್‌ಪಿಎಸಿ ಪ್ರಾರಂಭಿಸಿದ‌ ಮಣಿಪಾಲ್ ಗ್ರೂಪ್ ಅಧ್ಯಕ್ಷ

Advertisement

ಇಂದು ಮೊಬೈಲ್‌ ಅಂಗಡಿ, ಸ್ಟೇಷನರಿ ತೆರೆಯಲು ಅನುಮತಿ
ಜಿಲ್ಲೆಯಲ್ಲಿ ಆನ್‌ಲೈನ್‌ ತರಗತಿ ನಡೆಯುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಜೂ. 16ರಂದು ಬೆಳಗ್ಗೆ 6ರಿಂದ 2ವರೆಗೆ ಅವಶ್ಯಕವಾಗಿರುವ ಪುಸ್ತಕ, ಪೆನ್ನು ಮತ್ತು ಸ್ಟೇಶನರಿ ವಸ್ತುಗಳು, ಮೊಬೈಲ್‌ ದುರಸ್ತಿ ಹಾಗೂ ಖರೀಸಲು ಒಂದು ದಿನದ ಮಟ್ಟಿಗೆ ಅವಕಾಶ ಕಲ್ಪಿಸಲಾಗಿದೆ. ಬುಕ್ಸ್‌ ಸ್ಟಾಲ್‌, ಸ್ಟೇಷನರಿ ಹಾಗೂ ಮೊಬೈಲ್‌ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.

ಚಪ್ಪಲಿ ಅಂಗಡಿಗಳ ವ್ಯವಹಾರಕ್ಕೆ ಅನುಮತಿ ಇಲ್ಲ
ಕೊರೊನಾ ಲಾಕ್‌ಡೌನ್‌ ಜು. 21 ರವರೆಗೂ ಚಾಲ್ತಿಯಲ್ಲಿರುವುದರಿಂದ ಕೆಲವೊಂದು ನಿದಿಷ್ಠ ಸೇವೆಗಳಿಗೆ ಮಾತ್ರ ವಿನಾಯಿತಿ ದೊರಕಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಟೈಗರ್‌ ವೃತ್ತದಲ್ಲಿ ಪಾದರಕ್ಷೆಗಳ ರಿಪೇರಿ ಮತ್ತು ಮಾರಾಟ ನಡೆಸುತ್ತಿದ್ದ ಅಂಗಡಿಗೆ ಮಂಗಳವಾರ ನಗರಸಭೆಯ ಅಧಿಕಾರಿಗಳು ಆಗಮಿಸಿ ವ್ಯವಹಾರ ಸ್ಥಗಿತಗೊಳಿಸುವಂತೆ ವಿನಂತಿಸಿದರು.

ಅನಾವಶ್ಯಕ ಸಂಚಾರ ಬೇಡ
ಕೊರೊನಾ ಲಾಕ್‌ಡೌನ್‌ ವ್ಯವಸ್ಥೆಯಲ್ಲಿ ಕೊಂಚ ಸಡಿಲಿಕೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನ ಸಂಚಾರ ವಿಪರೀತವಾಗುತ್ತಿದೆ. ಅದನ್ನು ನಿಯಂತ್ರಿಸಲು ಮಂಗಳವಾರ ನಗರಸಭೆಯ ಅಧಿಕಾರಿಗಳು ಕೆಲವು ಸ್ಥಳಗಳಿಗೆ ದಿಢೀರ್‌ ಭೇಟಿ ನೀಡಿ ಜನರಲ್ಲಿ ಅನಾವಶ್ಯಕ ಸಂಚಾರ ಬೇಡವೆಂದು ತಿಳಿಸಿದರು.

ಸಂಚಾರದಿಂದ ಸಂಚಕಾರ!
ಸೋಮವಾರದಿಂದ ಕೊರೊನಾ ಲಾಕ್‌ಡೌನ್‌ನಲ್ಲಿ ರಿಯಾಯಿತಿ ನೀಡಿದ್ದೇ ತಡ ಉಡುಪಿ ನಗರದಲ್ಲಿ ವಾಹನ ಸಂಚಾರ ಮಿತಿ ಮೀರಿದೆ. ಮಧ್ಯಾಹ್ನ 12.30ರ ಅನಂತರವೂ ವಾಹನಗಳ ಓಡಾಟ ಇಳಿಮುಖವಾಗಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next