Advertisement

ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ

06:00 AM Aug 12, 2018 | Team Udayavani |

ಬೆಂಗಳೂರು/ನವದೆಹಲಿ: ಕರ್ನಾಟಕದ ಕರಾವಳಿ ಭಾಗವೂ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ 2 ದಿನಗಳ ಕಾಲ ಕಡಲ್ಕೊರೆತವೂ ತೀವ್ರಗೊಳ್ಳಲಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. 

Advertisement

ಈ ಮಧ್ಯೆ, ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.

ಬಂಗಾಳ ಕೊಲ್ಲಿಯುದ್ದಕ್ಕೂ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಆಗಸ್ಟ್‌ 15ರವರೆಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ತೀವ್ರವಾಗಿರಲಿದೆ ಎಂದೂ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಆಯ್ದ ಭಾಗಗಳಲ್ಲಿ ಮಳೆ ಪ್ರಭಾವ ಹೆಚ್ಚು ಇರಲಿದೆ. ಈ ಪ್ರದೇಶಗಳಲ್ಲಿ ಮಳೆ ಬೀಳುವ ಸಾಧ್ಯತೆ ಶೇ. 50ರಿಂದ 75ರಷ್ಟಿದೆ. ಉತ್ತರ ಒಳನಾಡಿನಲ್ಲೂ ಮಳೆ ಆಗಲಿದೆ. ಆದರೆ, ಪ್ರಮಾಣ ತುಂಬಾ ಕಡಿಮೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಮತ್ತೆರಡು ಬಲಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಶನಿವಾರ ಮಹಿಳೆಯೊಬ್ಬರು ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಶೃಂಗೇರಿ ತಾಲೂಕು ಬೇಗಾರು ಗ್ರಾ.ಪಂ. ವ್ಯಾಪ್ತಿಯ ದೇವಾಲೆಕೊಪ್ಪ ಮಳಲಿಯ ಸುಶೀಲಾ (45) ಮೃತಪಟ್ಟವರು. ಭತ್ತದ ನಾಟಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ. ಐವತ್ತು ಮೀಟರ್‌ ದೂರದಲ್ಲಿ ಇವರ ಶವ ಪತ್ತೆಯಾಗಿದೆ.ಮತ್ತೂಂದೆಡೆ ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ತರೀಕೆರೆ ತಾಲೂಕು ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಭದ್ರಾಜಲಾಶಯದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಬಸವರಾಜು (40) ಮೃತಪಟ್ಟವರು. ಇವರು ತನ್ನ ಐವರು ಸ್ನೇಹಿತರೊಂದಿಗೆ ಭದ್ರಾ ಜಲಾಶಯ ವೀಕ್ಷಣೆಗೆ ಜು.9 ರಂದು ಬಂದಿದ್ದರು. ಸ್ನೇಹಿತರು ಬೇಡವೆಂದರೂ ಕೇಳದೆ ಜಲಾಶಯದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ.

Advertisement

ಈ ಮಧ್ಯೆ ಜಿಲ್ಲೆಯ ಮಲೆನಾಡು ಭಾಗಗಳಾದ ಶೃಂಗೇರಿ, ಮೂಡಿಗೆರೆ ತಾಲೂಕುಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಶುಕ್ರವಾರ ಸ್ವಲ್ಪ ತಗ್ಗಿದ್ದ ಮಳೆ ಶನಿವಾರ ಮತ್ತೆ ಅಬ್ಬರಿಸಿದೆ. ಶೃಂಗೇರಿ ತಾಲೂಕಿನಾದ್ಯಂತ ಮಳೆ ಬಿಡದೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಜಾವಳಿ, ಭೆೈರಾಪುರ ಸುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ನರಸಿಂಹರಾಜಪುರ, ಕೊಪ್ಪ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಆಗಾಗ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

ನಾಲ್ಕೂ ಕ್ರೆಸ್ಟ್‌ ಗೇಟ್‌ಗಳಿಂದ ನೀರು ಹೊರಕ್ಕೆ
ವಾರದ ಹಿಂದೆ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದ ಒಂದು ಗೇಟ್‌ನಿಂದ ಮಾತ್ರ ನೀರು ಹೊರ ಬಿಡಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಜಲಾಶಯದ ನಾಲ್ಕೂ ಕ್ರೆಸ್ಟ್‌ಗೇಟ್‌ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.

ಕೇರಳದ ವೈನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಿದ್ದು, ಜಲಾಶಯದಿಂದ 80 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಜನವಸತಿ ಪ್ರದೇಶ ಹಾಗೂ ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ವರುಣಾ (ಬೊಕ್ಕಳ್ಳಿ ) ಹಾಗೂ ನಂಜನಗೂಡು (ಕುಳ್ಳಂಕನ ಹುಂಡಿ) ವಿಧಾನಸಭಾ ಕ್ಷೇತ್ರದ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಅವರಿಗೆ ನಂಜನಗೂಡಿನ ಶ್ರೀಕಂಠೇಶ್ವರನ ದಾಸೋಹ ಹಾಗೂ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಈ ಮಧ್ಯೆ ಶನಿವಾರ ರಾಜ್ಯದ ಚಿಕ್ಕಮಗಳೂರಿನಲ್ಲಿ 68 ಮಿ.ಮೀ., ಉತ್ತರ ಕನ್ನಡದಲ್ಲಿ 44 ಮಿ.ಮೀ., ಉಡುಪಿ 51, ದಕ್ಷಿಣ ಕನ್ನಡ 39, ಹಾಸನ 29, ಚಿಕ್ಕಬಳ್ಳಾಪುರ 17.5, ಬೆಳಗಾವಿ 12, ದಾವಣಗೆರೆ 10.7 ಮಿ.ಮೀ. ಮಳೆಯಾಗಿದೆ. ಧಾರವಾಡ, ಗದಗ, ತುಮಕೂರು, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next