Advertisement

ಬಿಸಿಲ ಪ್ರತಾಪಕ್ಕೆ ಬಸವಳಿದ ಕಾಫಿನಾಡಿನ ಜನತೆ!

07:56 PM Mar 28, 2021 | Team Udayavani |

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆ ಭಾಗದ ಜನತೆ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದು, ಹಗಲು ಹೊತ್ತು ತಂಪು ಪಾನೀಯಗಳ ಮೊರೆ ಹೋದರೆ, ರಾತ್ರಿ ವೇಳೆ ಫ್ಯಾನ್‌, ಕೂಲರ್‌ಗಳ ಮೊರೆ ಹೋಗುವಂತಾಗಿದೆ.

Advertisement

ಪ್ರತಿ ನಿತ್ಯ ವಾತಾವರಣದಲ್ಲಿ ಉಷ್ಣಾಂಶ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರಹೋಗದಂತಾಗಿದೆ. ಮನೆ ಮತ್ತು ಕಚೇರಿ ಯಲ್ಲಿ ಫ್ಯಾನ್‌, ಕೂಲರ್‌ಗಳ ಮೊರೆ ಹೋಗುವಂತಾಗಿದೆ. ರಾತ್ರಿ ವಾತಾವರಣದಲ್ಲಿನ ಝಳದ ಜತೆಗೆ ಸೊಳ್ಳೆಗಳ ಕಾಟದಿಂದ ಪರಿತಪಿಸುವಂತಾಗಿದೆ.

ಬಿಸಲ ಝಳ ಹೆಚ್ಚಾಗುತ್ತಿದ್ದಂತೆ ತಂಪು ಪಾನೀಯಗಳಿಗೆ ಬೇಡಿಕೆ ಉಂಟಾಗಿದೆ. ಎಳನೀರು, ಕಬ್ಬಿನಹಾಲು, ಜ್ಯೂಸ್‌, ಕಲ್ಲಂಗಡಿ, ಕರಬೂಜಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಜೂಸ್‌ ಅಂಗಡಿಗಳತ್ತ ಜನರು ಹರಿದು ಬರುತ್ತಿದ್ದಾರೆ. ಪೋಷಕರು, ಮಕ್ಕಳಾದಿಯಾಗಿ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಇನ್ನು ಬಿಸಿಲ ಝಳಕ್ಕೆ ಮನೆಯಿಂದ ಹೊರಬರುತ್ತಿಲ್ಲ.

ರಜೆ ದಿನಗಳಲ್ಲಿ ಬೇಸರ ಕಳೆಯಲು ಮನೆಯಿಂದ ಹೊರಬಂದರೂ ಮರದ ನೆರಳು, ಉದ್ಯಾನವನಗಳಲ್ಲಿ ತಂಪಾದ ಹುಲ್ಲು ಹಾಸಿನ ಮೇಲೆ ಕಲ್ಲುಹಾಸಿನ ಮೇಲೆ ಕುಳಿತು ದಣಿವಾರಿಸಿಕೊಳ್ಳುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಹತ್ತನೇ ವಯಸ್ಸಿನಿಂದ ಎಳನೀರು ಮಾರಾಟ ಮಾಡುತ್ತಿದ್ದೇನೆ. ಆಗ ಒಂದು ಎಳನೀರಿಗೆ 1ರೂ. ಇತ್ತು. ಇಂದು ಒಂದು ಎಳನೀರಿಗೆ 30ರಿಂದ 35ರೂ.ಗೆ ಮಾರಾಟ ಮಾಡುತ್ತಿದ್ದೇನೆ.

ಬೇಸಿಗೆ ಆರಂಭಕ್ಕೂ ಮೊದಲು ಪ್ರತೀ ದಿನ 100ರಿಂದ 150 ಎಳನೀರು ಮಾರಾಟವಾಗುತ್ತಿತ್ತು. ಈಗ ದಿನಕ್ಕೆ 500 ಎಳನೀರು ಮಾರಾಟವಾಗುತ್ತಿದೆ ಎಂದು ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಎಳನೀರು ವ್ಯಾಪಾರ ಮಾಡುವ ಮಹಮದ್‌ ಹೇಳುತ್ತಾರೆ. ಬೇಸಿಗೆ ಕಾಲ ಆರಂಭವಾಗಿದ್ದು, ಬಿಸಿಲ ಬೇಗೆಯ ದಣಿವಾರಿಸಿಕೊಳ್ಳಲು ಬಹುತೇಕ ಜನರು ಎಳನೀರು ಮೊರೆ ಹೋಗಿದ್ದು, ಎಳನೀರು ಹಾಸನ ಮತ್ತು ಸಖರಾಯಪಟ್ಟಣದಿಂದ ತರಿಸಿಕೊಳ್ಳುತ್ತೇವೆ ಎಂದರು.

Advertisement

ಕಳೆದ 25 ವರ್ಷಗಳಿಂದ ಕಬ್ಬಿನಹಾಲು ವ್ಯಾಪಾರ ಮಾಡುತ್ತಿದ್ದು, ಬೇಸಿಗೆ ಆರಂಭವಾಗುತ್ತಿದ್ದಂತೆ ಜನರು ಕಬ್ಬಿನ ಹಾಲಿನ ಕಡೆ ಮುಖ ಮಾಡುತ್ತಾರೆ. ಕಬ್ಬಿನಹಾಲು ದೇಹವನ್ನು ಮಾತ್ರ ತಂಪಾಗಿಸುವುದಲ್ಲದೆ, ಇದು ಆರೋಗ್ಯಕ್ಕೂ ಬಹು ಉಪಯುಕ್ತ ಪಾನೀಯವಾಗಿದೆ. ಪ್ರಸ್ತುತ ದಿನಕ್ಕೆ 1 ಸಾವಿರದವರೆಗೂ ವ್ಯವಹಾರವಾಗುತ್ತದೆ ಎಂದು ಕಬ್ಬಿನ ಹಾಲು ವ್ಯಾಪಾರಿ ಮುಜೀಬ್‌ ಹೇಳುತ್ತಾರೆ. ಇನ್ನು ಕಲ್ಲಂಗಡಿ ಹಣ್ಣುಗಳಿಗೂ ಬೇಡಿಕೆ ಹೆಚ್ಚಾಗಿದ್ದು, ನಗರದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ ಕಲ್ಲಂಗಡಿ ಅಂಗಡಿಗಳನ್ನು ತೆರೆದಿದ್ದು, ಅಲ್ಲಿಯೇ ಮಾರಾಟ ಮಾಡಲಾಗುತ್ತಿದೆ.

ಕೆಲವರು ಸ್ಥಳದಲ್ಲೇ ಕಲ್ಲಂಗಡಿ ಹಣ್ಣು ಖರೀದಿಸಿ ತಿಂದರೆ ಬಹುತೇಕ ಗ್ರಾಹಕರು ಹಣ್ಣುಗಳನ್ನು ಮನೆಗಳಿಗೆ ತಗೆದುಕೊಂಡು ಹೋಗುತ್ತಿದ್ದಾರೆ. ಕಲ್ಲಂಗಡಿ ಹಣ್ಣು ಕೆ.ಜಿಗೆ 20ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಒಂದು ಲಾಟ್‌ ಕಲ್ಲಂಗಡಿ ಹಣ್ಣುಗಳನ್ನು ಹಾಕಲಾಗಿತ್ತು. ಎಲ್ಲಾ ಹಣ್ಣುಗಳು ವ್ಯಾಪಾರವಾಗಿ ಐದಾರು ಹಣ್ಣುಗಳು ಮಾತ್ರ ಉಳಿದುಕೊಂಡಿವೆ ಎನ್ನುತ್ತಾರೆ ಕಲ್ಲಂಗಡಿ ವ್ಯಾಪಾರಿ ಫರ್ವಿಜ್‌. ಕಬೂìಜ ಹಣ್ಣಿಗೂ ಬೇಡಿಕೆ ಬಂದಿದ್ದು, ಆಂದ್ರದಿಂದ ಟನ್‌ಗಟ್ಟಲೇ ತರಿಸಲಾಗುತ್ತಿದೆ.

ಐದಾರು ವರ್ಷಗಳಿಂದ ಕಬೂìಜ ವ್ಯಾಪಾರ ಮಾಡುತ್ತಿದ್ದು, ಕೆಜಿಗೆ 25ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೇಸಿಗೆಯಾಗಿರುವುದರಿಂದ ಜನರು ಹಣ್ಣುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಾರೆ ಎನ್ನುತ್ತಾರೆ ಕಬೂìಜ ವ್ಯಾಪಾರಿ ಅಪ್ಪು. ಮಲೆನಾಡು ಜಿಲ್ಲೆಯಲ್ಲೂ ಬಿಸಿಲಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಕೆಲವರು ತಂಪು ಪಾನೀಯದ ಮೊರೆ ಹೋದರೆ, ಈ ಬೇಸಿಗೆ ಕಾಲ ಮುಗಿದರೆ ಸಾಕಪ್ಪ ಎಂದು ದೇವರ ಮೊರೆ ಹೋಗುವಂತಾಗಿದೆ. ಒಟ್ಟಾರೆ ಮಲೆನಾಡಿನ ಜನತೆಯೂ ಬಿಸಿಲ ಝಳಕ್ಕೆ ತತ್ತರಿಸಿ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next