ಅಜೆಕಾರು: ಅಂಡಾರು ಗ್ರಾಮದಲ್ಲಿ ಮಾ. 21ರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಅಪಾರ ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 8 ಲ.ರೂ. ನಷ್ಟ ಸಂಭವಿಸಿದೆ.
ಬೃಹತ್ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳಿದವು.
ಗಾಳಿಯ ರಭಸಕ್ಕೆ ಹೆಂಚಿನ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.
ಸಂಚಾರ ಸ್ಥಗಿತ: ಧೂಳು ಸಹಿತ ಭಾರೀ ಗಾಳಿಗೆ ವಾಹನ ಸಂಚಾರ ಒಂದು ಗಂಟೆ ಕಾಲ ಸ್ಥಗಿತಗೊಂಡಿತ್ತು.
ಮನೆ, ಅಡಿಕೆ ತೋಟಕ್ಕೆ ಹಾನಿ
ಅಂಡಾರು ಗ್ರಾಮದ ಬಹುತೇಕ ಮಂದಿಯ ತೋಟ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೆಲವು ನಾಗರಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿ ಸುಮಾರು 4 ಲಕ್ಷ ರೂ ನಷ್ಟ ಸಂಭವಿಸಿದೆ.
ಮಾದನಾಡಿ ಗೋಪಾಲಕೃಷ್ಣ ಭಟ್ ಅವರ ಅಡಿಕೆ ಮರಗಳು ಉರುಳಿಬಿದ್ದು ಸುಮಾರು 50 ಸಾವಿರ ರೂ. ನಷ್ಟ ಉಂಟಾಗಿದೆ. ತೋಟದ ಮನೆ ಗಣಪತಿ ಸೇರ್ವೇಗಾರ್‌ರವರ ಮನೆ, ಕೊಟ್ಟಿಗೆ, ಅಡಿಕೆ ತೋಟಕ್ಕೆ ಹಾನಿಯಾಗಿದ್ದು ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ.
ಗುಳಿಬೆಟ್ಟು ಅನಂತ ಸೇರ್ವೇಗಾರ್ ಅಡಿಕೆ ತೋಟ ಹಾನಿಯಾಗಿ ಸುಮಾರು 10 ಸಾವಿರ ರೂ. ನಷ್ಟ, ಗೋಪಾಲ ಆಚಾರ್ಯರ ಅಡಿಕೆ ತೋಟ ಹಾನಿ 3 ಸಾವಿರ ರೂ. ನಷ್ಟ, ಹಾಡಿಮನೆ ವೆಂಕಟರಮಣ ಕಿಣಿಯವರ ಅಡಿಕೆತೋಟ ಹಾನಿ 8 ಸಾವಿರ ರೂ. ನಷ್ಟ, ರಮೇಶ್ ಪೈ ಹಾಡಿಮನೆ ಅಡಿಕೆ ಮರ ಹಾನಿ 20 ಸಾವಿರ ರೂ. ನಷ್ಟ, ಕಾಳೇರಿ ರಾಮಕೃಷ್ಣ ಸೇರ್ವೇಗಾರ್‌ರ ಅಡಿಕೆ ತೋಟಕ್ಕೆ ಹಾನಿ 15 ಸಾವಿರ ರೂ. ನಷ್ಟ, ಗುಡ್ಡೆಮನೆ ಉಮೇಶ್ ನಾಯಕ್ ಅಡಿಕೆತೋಟ ಹಾನಿ 10 ಸಾವಿರ ರೂ. ನಷ್ಟ, ಗುಡ್ಡೆಮನೆ ಸುರೇಶ್ ನಾಯಕ್ ಮನೆಗೆ ತೆಂಗಿನ ಮರ ಬಿದ್ದು ಹಾನಿ ಹಾಗೂ ಅಡಿಕೆ ತೋಟ ಹಾನಿ ಸುಮಾರು 30 ಸಾವಿರ ರೂ. ನಷ್ಟ, ಕಾಳೇರಿ ದಿನಕರ ಸೇರ್ವೇಗಾರ್ ಅಡಿಕೆ ತೋಟ ಹಾನಿ 10 ಸಾವಿರ ರೂ. ನಷ್ಟ, ವಾರಿಜಾ ಶ್ಯಾನುಭೋಗರ ಬೆಟ್ಟು ಮನೆ ಹಾನಿ 20 ಸಾವಿರ ರೂ.
ನಷ್ಟ, ಕಾಳೇರಿ ಚಂದ್ರಕಾಂತ್‌ರವರ ಅಡಿಕೆತೋಟ ಹಾನಿ 5 ಸಾವಿರ ರೂ. ನಷ್ಟ, ಕಾಳೇರಿ ರಮೇಶ್ ಸೇರ್ವೇಗಾರ್ ಅಡಿಕೆ ತೋಟಕ್ಕೆ ಹಾನಿ 10 ಸಾವಿರ ರೂ. ನಷ್ಟ, ಸುಂದರ ನಾಯ್ಕ ಅಡಿಕೆ ಮರ ಹಾನಿ 10 ಸಾವಿರ ರೂ. ನಷ್ಟ, ಗುಳಿಬೆಟ್ಟು ಶಂಕರ್ ಶೆಟ್ಟಿ ಅಡಿಕೆ ತೋಟ ಹಾನಿಯಾಗಿ 20 ಸಾವಿರ ರೂ. ನಷ್ಟ, ವನಿತಾ ಸತೀಶ್ ಸೇವೇಗಾರ್ ಅವರ ಅಡಿಕೆ ತೋಟ ಹಾನಿಯಾಗಿ 15 ಸಾವಿರ ರೂ. ನಷ್ಟ, ಅಂಡಾರು ಕೊಡಮಣಿತ್ತಾಯ ಸಭಾಭವನದ ಮೇಲ್ಛಾವಣಿಗೆ ಹಾನಿ 5 ಸಾವಿರ ರೂ. ನಷ್ಟ ಸಂಭವಿಸಿದೆ. ಅಲ್ಲದೆ ಗ್ರಾಮದಲ್ಲಿರುವ ಹೆಚ್ಚಿನ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.
ಭಾರೀ ಬಿರುಗಾಳಿಗೆ ಹಾನಿಯಾದ ಪ್ರದೇಶಗಳಿಗೆ ಜಿ. ಪಂ. ಸದಸ್ಯೆ ಜ್ಯೋತಿ ಹರೀಶ್, ಗ್ರಾ. ಪಂ. ಅಧ್ಯಕ್ಷೆ ಉಷಾ ಹೆಬ್ಟಾರ್, ಸದಸ್ಯರಾದ ಸಂತೋಷ್ ಅಮೀನ್,ದಿನೇಶ್ ಸೇರ್ವೇಗಾರ್, ಲಕ್ಷ್ಮೀ ಕಿಣಿ, ಬೇಬಿ, ಸಂಗೀತಾ ನಾಯಕ್, ತಾ.ಪಂ. ಮಾಜಿ ಸದಸ್ಯೆ ಪ್ರಮೀಳಾ ಹರೀಶ್, ಅರಣ್ಯ ರಕ್ಷಕ ಫಕೀರಪ್ಪ, ಮೆಸ್ಕಾಂ ಅಧಿಕಾರಿ ಉಪೇಂದ್ರ ನಾಯಕ್, ಗ್ರಾಮಕರಣಿಕ ಶ್ರೀಮಾರುತಿ, ಗ್ರಾಮಸಹಾಯಕ ಜಗದೀಶ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಯುವಕರು ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಸಹಕರಿಸಿದರು.
ಮೆಸ್ಕಾಂಗೆ 4 ಲ.ರೂ. ನಷ್ಟ
ಭಾರೀ ಗಾತ್ರದ ಮರಗಳು ಉರುಳಿ ಬಿದ್ದು ಮೆಸ್ಕಾಂನ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿದೆ. ಮೆಸ್ಕಾಂನ ಎಚ್‌ಟಿ ಲೈನ್‌ನ ಸುಮಾರು 10 ವಿದ್ಯುತ್ ಕಂಬಗಳು ಹಾಗೂ ಎಲ್‌ಟಿ ಲೈನ್‌ನ 15 ಕಂಬಗಳು ತುಂಡಾಗಿದ್ದು ಸುಮಾರು 4 ಲಕ್ಷ ರೂ ನಷ್ಟ ಸಂಭವಿಸಿದೆ. ಗ್ರಾಮದ ಬಹುತೇಕ ಪ್ರದೇಶಗಳ ವಿದ್ಯುತ್ ಕಂಬಗಳಿಗೆ ಹಾನಿಯಾದ ಪರಿಣಾಮ ಸಂಪೂರ್ಣ ಗ್ರಾಮ ಕತ್ತಲೆಯಲ್ಲಿ ಮುಳುಗಿತ್ತು. ಹೊಸ ಕಂಬ ಅಳವಡಿಕೆ ಕಾರ್ಯದಲ್ಲಿ ಮೆಸ್ಕಾಂ ಸಿಬಂದಿ ತೊಡಗಿದ್ದಾರೆ.