Advertisement

Heavy Rains ಸುಬ್ರಹ್ಮಣ್ಯ: ಹೆದ್ದಾರಿಗೆ ನುಗ್ಗಿದ ಕುಮಾರಧಾರೆ

11:42 PM Jul 19, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟದಲ್ಲಿದೆ. ಕುಮಾರಧಾರಾದ ಉಪ ನದಿ ದರ್ಪಣತೀರ್ಥ ಕೂಡ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ಮುಂಜಾನೆ ವೇಳೆ ಎರಡು ನದಿಗಳ ಹರಿವು ಹೆಚ್ಚಾಗಿ ನೀರು ಹೆದ್ದಾರಿಯನ್ನು ಆವರಿಸಿತು. ಈ ಕಾರಣದಿಂದ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು.

Advertisement

ಕುಮಾರಧಾರಾದಲ್ಲಿ ಶುಕ್ರವಾರ ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯು ಕುಮಾರಧಾರ ವೃತ್ತದವರೆಗೆ ಆವರಿಸಿದೆ. ಸ್ನಾನಘಟ್ಟವನ್ನು ದಾಟಿ ಸುಮಾರು 100 ಮೀ.ಗೂ ದೂರ ನೀರು ವ್ಯಾಪಿಸಿದೆ.

ಕುಕ್ಕೆ-ಮಂಜೇಶ್ವರ ಸಂಪರ್ಕ ಬಂದ್‌
ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತು. ನದಿ ನೀರು ಸುಮಾರು ಅರ್ಧ ಕಿ.ಮೀ. ದೂರದ ತನಕ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು.

ದರ್ಪಣತೀರ್ಥ ಸೇತುವೆಯಿಂದ ಸುಮಾರು 100 ಮೀ. ದೂರವಿರುವ ತಿರುಗಣೆಗುಂಡಿ ತನಕ ಹೆದ್ದಾರಿಯನ್ನು ಪ್ರವಾಹ ಆಕ್ರಮಿಸಿಕೊಂಡಿದ್ದು, ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಪರಿಸರದ ತೋಟ ಹಾಗೂ ಕೆಲವು ಮನೆಗಳು ಜಲಾವೃತವಾಗಿವೆ.

ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲಬೈಲು, ಕುದುರೆಮಜಲು ಪರಿಸರ ಜಲಾವೃತವಾಗಿದೆ.

Advertisement

ಸುಬ್ರಹ್ಮಣ್ಯ ಪರಿಸರದ ಹರಿಹರದ ಗುಂಡಡ್ಕ ಸೇತುವೆ ಮೇಲೂ ನೀರು ನುಗಿದ್ದು, ಪಂಜದ ಬೊಳ್ಮಲೆ ಎಂಬಲ್ಲಿ ಹೆದ್ದಾರಿಗೆ ನೆರೆ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೆಲವು ಕಡೆ ರಸ್ತೆ ಮುಳುಗಿರುವ ಕಾರಣ ಎನ್‌ಡಿಆರ್‌ಎಫ್ ತಂಡವು ಸ್ಥಳೀಯರಿಗೆ ದೋಣಿ ವ್ಯವಸ್ಥೆ ಮಾಡಿದರು. ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನೀರು ರಸ್ತೆಗೆ ನುಗ್ಗಿ ಸಂಚಾರ ವ್ಯತ್ಯಯವಾಯಿತು. ಪಂಜದ ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆಯೂ ಸಂಭವಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next