Advertisement

ಚೆನ್ನೈನಲ್ಲಿ ಭಾರೀ ಮಳೆ, ಪ್ರವಾಹದ ಎಚ್ಚರಿಕೆ : ಜನಜೀವನ ಅಸ್ತವ್ಯಸ್ತ

02:38 PM Nov 07, 2021 | Team Udayavani |

ಚೆನ್ನೈ : ಚೆನ್ನೈ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು,ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

Advertisement

ನಗರಕ್ಕೆ ಹತ್ತಿರವಾಗಿರುವ ಮೂರು ಜಲಾಶಯಗಳ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಹಂತಹಂತವಾಗಿ ತೆರೆದಿರುವುದರಿಂದ ಅಧಿಕಾರಿಗಳು ಭಾನುವಾರ ಜನರಿಗೆ ಪ್ರಾಥಮಿಕ ಪ್ರವಾಹ ಎಚ್ಚರಿಕೆಯನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಜಲಾವೃತವಾಗಿರುವ ಪ್ರದೇಶಗಳನ್ನು ಪರಿಶೀಲಿಸಿದರು. ಪ್ರವಾಹದ ಸ್ಥಿತಿ ಎದುರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಿನ್ನೆ ರಾತ್ರಿಯಿಂದ ಸುಮಾರು 12 ಗಂಟೆಗಳ ಒಳಗೆ ಚೆನ್ನೈನಲ್ಲಿ 20 ಸೆಂ.ಮೀ ಮಳೆಯಾಗಿದೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ. ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ, ಚೆನ್ನೈ ಮತ್ತು ಅದರ ಉಪನಗರಗಳಲ್ಲಿ 23 ಸೆಂ.ಮೀ ಮಳೆಯಾಗಿದೆ.

ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ಚೆಂಗಲ್‌ಪೇಟ್ ಮತ್ತು ತಿರುವಳ್ಳೂರಿನಲ್ಲಿ ತಲಾ ಒಂದು ತಂಡ ಮತ್ತು ಮಧುರೈನಲ್ಲಿ ಎರಡು ತಂಡಗಳು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

Advertisement

ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂತಹ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಪ್ರಾಥಮಿಕ ಪ್ರವಾಹದ ಎಚ್ಚರಿಕೆ ನೀಡಿರುವ ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ಕಾಂಚೀಪುರಂ ಮತ್ತು ತಿರುವಳ್ಳೂರ್ ಜಿಲ್ಲಾಧಿಕಾರಿಗಳಿಗೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರಿಸಲು ಸೂಚಿಸಿದ್ದಾರೆ.

2015 ರಲ್ಲಿ ಚೆನ್ನೈ ಜಲ ಪ್ರಳಯವನ್ನು ಅನುಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next