ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ನಗರದ ವಿವಿಧೆಡೆ 30ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸುವಂತಾಯಿತು. ಇದೇ ವೇಳೆ, ರಾಜ್ಯದ ಇತರೆಡೆಯೂ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ 6 ಮಂದಿ ಅಸುನೀಗಿದ್ದಾರೆ.
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿತ್ತು: ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರಾಜಧಾನಿಯ ಜನಜೀವನ ಅಸ್ತವ್ಯಸ್ತಗೊಂಡಿತು. ಜೆ.ಸಿ.ರಸ್ತೆಯ ಮಿನರ್ವ ವೃತ್ತದಲ್ಲಿ ನಿಲುಗಡೆ ಮಾಡಿದ್ದ ಎಸ್ಟೀಮ್ (ಕೆಎ- 02 ಎನ್-0771) ಕಾರಿನ ಮೇಲೆ ಬೃಹದಾಕಾರದ ಮರ ಬಿದ್ದು, ಮರದಡಿ ಸಿಲುಕಿದ ಕಾರಿನಿಂದ ಹೊರಬರಲಾಗದೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಸುಮನಹಳ್ಳಿಯ ದಂಪತಿ ರಮೇಶ್ ಮತ್ತು ಭಾರತಿ ಹಾಗೂ ಆಕೆಯ ಸಹೋದರ ಜಗದೀಶ್ ಎಂದು ಗುರುತಿಸಲಾಗಿದೆ. ಮೂಲತಃ ತುಮಕೂರಿನವರಾದ ರಮೇಶ್, ಶಿವಮೊಗ್ಗದ ಭಾರತಿ ಅವರನ್ನು ವಿವಾಹವಾಗಿದ್ದರು. ಕಾರು ರಿಪೇರಿ ಹಿನ್ನೆಲೆಯಲ್ಲಿ ಸಂಜೆ ಜೆ.ಸಿ.ನಗರದ ಮಿನರ್ವ ವೃತ್ತದ ಬಳಿ ಇರುವ ಗ್ಯಾರೇಜ್‌ಗೆ ಬಂದಿದ್ದರು. ರಿಪೇರಿ ನಂತರ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತ ಮೂವರೂ ಕಾರಿನ ಹಿಂಬದಿಯಲ್ಲಿ ಕುಳಿತಿದ್ದರು. ಮುಂಭಾಗದಲ್ಲಿ ದಂಪತಿಯ ಪುತ್ರ ರೋಹಿತ್ ಕಾರು ಚಾಲನೆ ಮಾಡುತ್ತಿದ್ದರು. ರೋಹಿತ್‌ಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭಾರತಿ ಅವರು ಹೆಬ್ಟಾಳ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮೇಶ್ ಸಿದ್ಧ ಉಡುಪು ಕಾರ್ಖಾನೆಯೊಂದರ ನೌಕರರಾಗಿದ್ದರು. ಮಳೆಯ ಕಾರಣ ಕಾರನ್ನು ನಿಧಾನವಾಗಿ ಚಾಲನೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಕಲಾಸಿಪಾಳ್ಯ ಠಾಣೆ ಪೊಲೀಸರು, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊಚ್ಚಿಹೋದ ಯುವಕ?
ಇದೇ ವೇಳೆ, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್ ಬಳಿ ಚರಂಡಿಯಲ್ಲಿ ಬಿದ್ದು ವರುಣ್ (18) ಎಂಬ ಯುವಕ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ವಯ್ನಾಲಿಕಾವಲ್ ನಿವಾಸಿ ವರುಣ್, ತನ್ನ ಮೂವರು ಸ್ನೇಹಿತರೊಂದಿಗೆ ಅಂಡರ್‌ಪಾಸ್‌ನಲ್ಲಿ ನಡೆದುಕೊಂಡು ಬರುತ್ತಿದ್ದರು. ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದು, ಚಪ್ಪಡಿಕಲ್ಲನ್ನು ತೆರೆದಿಡಲಾಗಿತ್ತು. ಇದನ್ನು ಗಮನಿಸದ ವರುಣ್, ಚರಂಡಿಯಲ್ಲಿ ಆಯತಪ್ಪಿ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಮೇಯರ್ ಜಿ.ಪದ್ಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತರೆಡೆ 6 ಸಾವು
ಇದೇ ವೇಳೆ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆಯೂ ಉತ್ತಮ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ 6 ಮಂದಿ ಅಸುನೀಗಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಳಗುಣಕಿಯಲ್ಲಿ ಮನೆಯ ಗೋಡೆ ಕುಸಿದು ರಾಚಪ್ಪ ಬಡಿಗೇರ (65) ಹಾಗೂ ಅವರ ಪತ್ನಿ ಸಿದ್ದವ್ವ ಬಡಿಗೇರ (60), ಜೇವೂರ ಗ್ರಾಮದಲ್ಲಿ ಕರಿಬಸಪ್ಪ ಆಕಳವಾಡಿ (68) ಹಾಗೂ ಅವರ ಪತ್ನಿ ಇಂದಿರಾಬಾಯಿ ಆಕಳವಾಡಿ (63) ಎಂಬ ವೃದ್ಧ ದಂಪತಿಗಳು ಅಸುನೀಗಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಓಜುಗುಂಟೆ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಭೂತಣ್ಣ (50) ಎಂಬುವರು ಮೃತಪಟ್ಟಿದ್ದಾರೆ. ಅವರ ಪತ್ನಿ ಪುಟ್ಟಮ್ಮ ಹಾಗೂ ಮಗ ಭೂತರಾಜ ತೀವ್ರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ನಿಂಬಲಗುಂದಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಹೊಲದಲ್ಲಿ ಕುರಿ ಕಾಯ್ದುಕೊಂಡು ರಾತ್ರಿ ಮರಳಿ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದು ಶೇಖಪ್ಪ ಸುಂಕದ (38) ಎಂಬುವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.
ಇಂದೂ ಮಳೆ ಸಂಭವ
ಭಾನುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement