Advertisement

ವಿಜಯಪುರದಲ್ಲಿ ಭಾರಿ ಮಳೆ: ಭೀಮಾ ನದಿಯ ಸೇತುವೆ ಮುಳುಗಡೆ, ವಸತಿ ಪ್ರದೇಶ ಜಲಾವೃತ

12:56 PM Sep 11, 2022 | keerthan |

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಆಲಮೇಲ ತಾಲೂಕಿನ ಬಗಲೂರು ಬಳಿ ಭೀಮಾ ನದಿಯ ಸೇತುವೆ ಮುಳುಗಡೆಯಾಗಿದ್ದು, ಗ್ರಾಮದ ಸಂಪರ್ಕ ಕಡಿತವಾಗಿದೆ. ನಗರದಲ್ಲಿ ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ನಷ್ಟ ಸಂಭವಿಸಿದೆ.

Advertisement

ಭೀಮಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ವಿವಿಧ ಜಲಾಶಯ, ಬಾಂದಾರುಗಳಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹೊರ ಬಿಡಲಾಗಿದೆ. ಪರಿಣಾಮ ಆಲಮೇಲ ತಾಲೂಕಿನ ಬಗಲೂರ ಗ್ರಾಮದ ಸೇತುವೆ ಮುಳುಗಡೆ ಆಗಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ನದಿಯಲ್ಲಿ ಪ್ರವಾಹ ಗಂಭೀರವಾಗಿರುವ ಕಾರಣ ಸಾರ್ವಜನಿಕರು ನದಿ ತೀರಕ್ಕೆ ಹೋಗದಂತೆ ತಾಲೂಕು ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮತ್ತೊಂದೆಡೆ ನಾಲ್ಕಾರು ಗಂಟೆ ಸುರಿದ ಮಳೆಗೆ ವಿಜಯಪುರ ನಗರವೂ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದ ರೈತರ ಬೆಳೆ, ವ್ಯಾಪಾರ, ವಾಣಿಜ್ಯ ಪ್ರದೇಶಗಳ ಹಾನಿ ಸಂಭವಿಸಿದ್ದು, ಜಿಲ್ಲಾಡಳಿತ ಹಾನಿಯ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.

ಮಳೆ ನೀರಿನಿಂದ ನಗರದ ತಗ್ಗು ಪ್ರದೇಶಗಳ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ ವಿಷಯ ತಿಳಿಯುತ್ತಲೇ ವಿಜಯಪುರ ಉಪ ವಿಭಾಗಾಧಿಕಾರಿ ನಗರದ ಶಾಪೇಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ:ನರೇಗಾದಡಿ ಕಾಲುಸಂಕ ನಿರ್ಮಾಣಕ್ಕೆ ಸಿದ್ಧತೆ : ಕಾಮಗಾರಿಗೆ ಮಳೆ ಅಡ್ಡಿ

Advertisement

ಅಪ್ಸರಾ ಟಾಕೀಸ್ ಸಂಪೂರ್ಣ ಜಲಾವೃತವಾಗಿದ್ದು, ಚಿತ್ರವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ನಿಲುಗಡೆ ಮಾಡಿದ್ದ ವಾಹನಗಳು ಮಳೆ ನೀರಿನಲ್ಲಿ ಮುಳಗಿ ಹೋಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಭಾರಿ ಮಳೆಗೆ 3-4 ಅಡಿ ನೀರು ಹರಿಯಲು ಆರಂಭಿಸಿ, ನೆಲ ಮಾಳಿಗೆಯಲ್ಲಿದ್ದ ಬಹುತೇಕ ವ್ಯಾಪಾರ ಮಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಇತ್ತ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಜೊತೆ ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ ಮಳೆಯಿಂದ ಬಾಧಿತ ಶಿಖರಖಾನೆ, ಗಾಂಧಿನಗರ ಮತ್ತು ಕಾವಿ ಪ್ಲಾಟ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಮನೆಗಳಿಗೆ ಮಳೆ ನೀರು ನುಗ್ಗಿದ ಬಾಧಿತರ ಅಹವಾಲು ಆಲಿಸಿ, ಪರಿಶೀಲಿಸಿದರು.

ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಿಕಿ, ವಿಜಯಪುರ ತಹಶೀಲ್ದಾರ ಸಿದರಾಯ ಭೊಸಗಿ ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next