Advertisement

ಗ್ರಾಮಾಂತರದಲ್ಲಿ ಭಾರೀ ಮಳೆ: ವಿವಿಧೆಡೆ ಹಾನಿ, ಜನಸಂಚಾರ ಅಸ್ತವ್ಯಸ್ತ

11:14 PM Jul 23, 2019 | Team Udayavani |

ಮಹಾನಗರ: ಮಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಎರಡೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ ಅಪಾರ ಹಾನಿಯಾಗಿದ್ದು ಜನ ಸಂಚಾರ ಅಸ್ತವ್ಯಸ್ತವಾಗಿದೆ.

Advertisement

ಸಸಿಹಿತ್ಲು: ಗಾಳಿಗೆ ಮನೆ ಮೇಲ್ಛಾವಣಿ ಕುಸಿತ
ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬಳಿಯ ಮನೆಯೊಂದರ ಒಂದು ಭಾಗದ ಮೇಲ್ಛಾವಣಿಯು ಗಾಳಿಗೆ ಕುಸಿದು ಭಾರೀ ನಷ್ಟ ಸಂಭವಿಸಿದೆ. ಯಶೋದಾ ಅವರು ವಾಸವಾಗಿದ್ದ ಈ ಮನೆಯ ಮೇಲ್ಛಾವಣಿಯ ಸಹಿತ ಪಕ್ಕಾಸ್‌, ರೀಪು, ಹಂಚುಗಳು ಸಹ ಧರಾಶಾಯಿಯಾಗಿದ್ದು, ಆಧಾರವಾಗಿದ್ದ ಗೋಡೆಗೂ ಹಾನಿಯಾಗಿದೆ. ಸುಮಾರು 60 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.ಯಶೋದಾ ಅವರ ಸಹಿತ ಮನೆಯಲ್ಲಿನ ಕುಟುಂಬದ ಸದಸ್ಯರು ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳಕ್ಕೆ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಶೋಕ್‌ ಬಂಗೇರ ಭೇಟಿ ನೀಡಿದ್ದು ಪರಿಹಾರಕ್ಕಾಗಿ ಕಂದಾಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಗ್ರಾಮ ಕರಣಿಕರಾದ ಮೋಹನ್‌ ಅವರು ನಷ್ಟದ ಬಗ್ಗೆ ವರದಿಯನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಪೊರ್ಕೋಡಿ: ಕೃತಕ ನೆರೆಯಿಂದ ವಾಹನ ಸಂಚಾರಕ್ಕೆ ತೊಂದರೆ
ಬಜಪೆ: ಬಜಪೆ -ಜೋಕಟ್ಟೆ -ಸುರತ್ಕಲ್‌ ರಸ್ತೆಯ ಪೊರ್ಕೋಡಿಯಲ್ಲಿ ಮಳೆಯ ನೀರು ಹರಿದಾಡಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯ ಮೇಲಿಂದ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಎರಡು ದಿನದಿಂದ ಧಾರಾಕಾರ ಮಳೆ ಬರುತ್ತಿದ್ದು ಈ ಪ್ರದೇಶದ ಗದ್ದೆಗಳಲ್ಲಿ ನೀರು ತುಂಬಿದೆ. ಬಜಪೆಯಿಂದ ಬರುವ ತೋಡುಗಳಲ್ಲಿ ಮಳೆಯ ನೀರು ಕೂಡ ಹರಿಯುತ್ತಿದೆ. ಪೊರ್ಕೋಡಿ ಪ್ರದೇಶದಲ್ಲಿ ರಸ್ತೆಯು ತಗ್ಗು ಪ್ರದೇಶದಲ್ಲಿದ್ದು ಗದ್ದೆಗಳು ನೀರಿನಲ್ಲಿ ತುಂಬಿದಾಗ ತೋಡುಗಳ ಬದಲು ರಸ್ತೆಯಲ್ಲಿಯೇ ಹರಿಯುತ್ತಿವೆ. ಈ ಪ್ರದೇಶದಲ್ಲಿ ಒಂದೇ ಮೋರಿ ಇದ್ದು ಇದರಿಂದ ಮಳೆಯ ನೀರು ಪರ್ಯಾಪ್ತವಾಗುತ್ತಿಲ್ಲ.

ಮಳೆಯ ನೀರು ರಸ್ತೆಯ ಮೇಲಿಂದ ಹರಿದಾಡುವ ಕಾರಣ ಜೋರುಮಳೆ ಬಂದಾಗ ರಸ್ತೆ ಇಡೀ ನೀರು ನಿಂತು ಕೃತಕ ನೆರೆ ಉಂಟಾಗುತ್ತದೆ. ಈ ಸಮಯದಲ್ಲಿ ರಸ್ತೆ ಕಾಣದೇ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ನೀರು ರಸ್ತೆಯ ಮೇಲಿಂದ ಹರಿದಾಡುವ ಕಾರಣ ರಸ್ತೆ ಬದಿಯ ಮಣ್ಣು ಕೊರೆತವಾಗಿದ್ದು, ರಸ್ತೆ ಕಡಿಯುವ ಭೀತಿ ಇದೆ.

Advertisement

ಅದ್ಯಪಾಡಿ: ಮಳೆಗೆ ಗುಡ್ಡ ಕುಸಿತ
ಬಜಪೆ: ಸೋಮವಾರ ರಾತ್ರಿ ಸುರಿದ ಮಳೆಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಅದ್ಯಪಾಡಿ ಚರ್ಚ್‌ ಬಳಿಯ ಗುಡ್ಡದ ಮಣ್ಣು ಕುಸಿತ ಕಂಡಿದೆ. ಕುಸಿದ ಮಣ್ಣು ಕೆಂಜಾರು-ಅದ್ಯಪಾಡಿ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಉಳ್ಳಾಲ: ಕೃತಕ ನೆರೆ
ಉಳ್ಳಾಲ: ಉಳ್ಳಾಲ, ಕೋಟೆಕಾರು ದೇರಳಕಟ್ಟೆ, ಕೊಣಾಜೆ, ಮುಡಿಪುವಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮದಕದಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ಕೊಣಾಜೆ ಸಮೀಪದ ದಡಸ್‌ ಆದಿಶಕ್ತಿ ದೇವಸ್ಥಾನದ ನಾಗನಕಟ್ಟೆಯ ಬಳಿ ಕಾಂಪೌಂಡ್‌ ಕುಸಿದು ಬಿದ್ದು ಹಾನಿಯಾಗಿದೆ ಉಳಿದಂತೆ ಸಣ್ಣಪುಟ್ಟ ಹಾನಿಯಾಗಿದ್ದು, ಕೊಲ್ಯ ಕನೀರು ತೋಟದಲ್ಲಿ ಕೃತಕ ನೆರೆಯಾಗಿದೆ. ಮಣ್ಣು ಇನ್ನೂ ಕುಸಿತವಾಗುವ ಸಂಭವವಿದೆ. ಜೇಸಿಬಿ ಮೂಲಕ ಮಣ್ಣುನ್ನು ರಸ್ತೆಯಿಂದ ತೆಗೆಯಲಾಗಿದ್ದರೂ ಮಣ್ಣು , ಬಂಡೆ ಗಳು ಉರುಳಿ ಪುನಃ ರಸ್ತೆಗೆ ಬರಲು ಸಾಧ್ಯ ವಿದೆ. ಗುಡ್ಡದ ಕೆಳಗೆ ಮನೆಗಳಿದ್ದು ಇನ್ನೂ ಮಳೆ ಬಂದಲ್ಲಿ ಮಣ್ಣು, ಬಂಡೆಗಳು ಉರುಳುವ ಸಂಭವವಿದ್ದು ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ.

ಅತ್ತೂರುಬೈಲು ಪ್ರದೇಶ ಜಲಾವೃತ
ಕಿನ್ನಿಗೋಳಿ: ಸೋಮವಾರ ಸುರಿದ ಭಾರೀ ಮಳೆಗೆ ನಂದಿನಿ ನದಿ ತುಂಬಿ ಹರಿಯುತ್ತಿದೆ. ಅತ್ತೂರುಬೈಲು ಜಲಾವೃತವಾಗಿತು. ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಿಂದ ಮುಳುಗಿದೆ. ಕಟೀಲು ಮಿತ್ತಬೈಲ್‌ ಪ್ರದೇಶದಲ್ಲಿಯೂ ಜಲಾವೃತ್ತವಾಗಿದೆ,

7 ಮನೆಗಳು ಜಲಾವೃತ
ಕೆಮ್ರಾಲ್‌ ಗ್ರಾ. ಪಂ. ವ್ಯಾಪ್ತಿಯ ಪಂಜಬೈಲ ಗುತ್ತು ಪ್ರದೇಶದಲ್ಲಿ 7 ಮನೆಗಳು ಜಲಾವೃತ ವಾಗಿವೆ. ಅಲ್ಲಿನ ಸತೀಶ್‌ ಶೆಟ್ಟಿ ಬೈಲಗತ್ತು ತನ ಸ್ವಂತ ದೋಣಿಯಲ್ಲಿ ಅಲ್ಲಿನ ಜನರು ಸಂಚಾರಕ್ಕೆ ಬಳಸಿ ಕೊಂಡಿದ್ದಾರೆ. ಸೋಮವಾರ ರಾತ್ರಿಯಿಂದಲೇ ನೆರೆ ನೀರು ಜಾಸ್ತಿಯಾಗಿದೆ ಎಂದು ಸತೀಶ್‌ ಶೆಟ್ಟಿ ತಿಳಿಸಿದ್ದಾರೆ.

ಉಲ್ಯ: 13 ಮನೆಗಳು ಜಲಾವೃತ
ಕೆಮ್ರಾಲ್‌ ಗ್ರಾ.ಪಂ. ವ್ಯಾಪ್ತಿಯ ಉಲ್ಯ ಪ್ರದೇಶ ದಲ್ಲಿ 13 ಮನೆಗಳು ಜಲಾವೃತಗೊಂಡಿದ್ದು ಅಲ್ಲಿನ ಮನೆಗಳಿಗೆ ಸಂಪರ್ಕ ಕಲಿಸುವ ರಸ್ತೆಯೂ ಮುಳು ಗಿದೆ. ಇದರಿಂದ ಜನರೂ ಸಂಕ ಷ್ಟಕ್ಕೆ ಒಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next