Advertisement

ನಗರದಲ್ಲಿ ಧಾರಾಕಾರ ಮಳೆ: 2 ಬಲಿ

07:06 AM May 27, 2020 | Lakshmi GovindaRaj |

ಬೆಂಗಳೂರು: ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಒಂದೇ ದಿನ ನಗರದ ಇಬ್ಬರು ಬಲಿಯಾಗಿದ್ದು, ಒಂದು ಹಸು ವಿದ್ಯುತ್‌ ತಗುಲಿ ಸಾವನ್ನಪ್ಪಿದೆ. ಅಲ್ಲದೆ, 50ಕ್ಕೂ ಹೆಚ್ಚು ಮರ, ವಿದ್ಯುತ್‌ ಕಂಬಗಳು ನೆಲಕಚ್ಚಿವೆ.  ಪ್ರತ್ಯೇಕ ಘಟನೆಗಳಲ್ಲಿ  ನಂದಿನಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಯುವತಿ ಮತ್ತು ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ನಂದಿನಿ ಬಡಾವಣೆ ಲಕ್ಷ್ಮೀದೇವಿನಗರ ವಾರ್ಡ್‌ನ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್‌ ಇಟ್ಟಿಗೆ  ಕಲ್ಲುಗಳು ಬಿದ್ದು ಪಕ್ಕದ ಮನೆಯೊಳಗಿದ್ದ ಯುವತಿ ಶಿಲ್ಪಾ (22) ಮೃತಪಟ್ಟಿದ್ದಾರೆ.

Advertisement

ಕಾಮಗಾರಿಗಾಗಿ ಜೋಡಿಸಿದ್ದ ನೂರಾರು ಸಿಮೆಂಟ್‌ ಇಟ್ಟಿಗೆಗಳು ಭಾರೀ ಮಳೆಗೆ ಪಕ್ಕದ ಮನೆಯ ಶೀಟ್‌ ಮನೆ ಮೇಲೆ ಬಿದ್ದಿವೆ. ಇದೇ ವೇಳೆ ಶಿಲ್ಪಾ  ಮನೆಯೊಳಗೆ ಕುಳಿತಿದ್ದರು. ಆಗ, ಶಿಲ್ಪಾ ತಲೆ ಮೇಲೆ 4-5 ಇಟ್ಟಿಗೆಗಳು ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರ ವಿರುದಟಛಿ ಕ್ರಮಕೈಗೊಳ್ಳಲಾಗುವುದು  ಎಂದು ಪೊಲೀಸರು ಹೇಳಿದ್ದಾರೆ. ಆಟೋ ಚಾಲಕನ ಪುತ್ರಿ ಶಿಲ್ಪಾ ಇತ್ತೀಚೆಗಷ್ಟೇ ಬಿಎಸ್‌ಸಿ ವ್ಯಾಸಂಗ ಪೂರೈಸಿ ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಇನ್ನೊಂದು ಬಲಿ: ಇದೇ ರೀತಿ, ಬೇಗೂರು ಠಾಣೆ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಸ್ಕೂಟಿ ಮೇಲೆ ಹೊರಟಿ ದ್ದ ಹೇಮಾ ಮಾಲಿನಿ (49) ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕೆ, ಜಯ ನಗರ ಖಾಸಗಿ  ಕ್ಲಿನಿಕ್‌ನಲ್ಲಿ ಕೆಲಸ  ಮಾಡುತ್ತಿದ್ದು, ಸಂಜೆ 7 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಹೋಗುವಾಗ ಮನೆಯಿಂದ ಸುಮಾರು ನೂರು ಮೀಟರ್‌ ದೂರದಲ್ಲೇ ಘಟನೆ ನಡೆದಿದೆ.

ಬೇಗೂರು ಮಾರ್ಗವಾಗಿ ಸ್ಕೂಟಿಯಲ್ಲಿ ಹೋಗುವ ವೇಳೆ ಮರ ಸ್ಕೂಟಿ ಮೇಲೆ ಬಿದ್ದಿದೆ  ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ತಿಳಿಸಿದ್ದಾರೆ. ಈ ಮಧ್ಯೆ ಭಾರೀ ಗಾಳಿ ಸಹಿತ ಮಳೆ ಅಬ್ಬರಕ್ಕೆ ನಗರದಲ್ಲಿ 50ಕ್ಕೂ ಹೆಚ್ಚು ಮರ ಧರೆಗುರುಳಿವೆ. ಇನ್ನು ಕೆಲವೆಡೆ ಮರದ ರೆಂಬೆ, ಕೊಂಬೆಗಳು ಧರೆಗುರುಳಿದ್ದು ಬಸ್‌, ಕಾರು-ಬೈಕ್‌ಗಳು ಜಖಂಗೊಂಡಿರುವುದು ವರದಿಯಾಗಿದೆ.

ಬಿಬಿಎಂಪಿ ಆಯುಕ್ತ ಭೇಟಿ: ಲಕ್ಷಿದೇವಿ ನಗರದಲ್ಲಿ ಯುವತಿ ಮೃತಪಟ್ಟ ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಬಿ. ಎಚ್‌.ಅನಿಲ್‌ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಟ್ಟಡ ನಿರ್ಮಾಣ ಕಾಮಗಾರಿ  ಯಲ್ಲಿ ನಿರ್ಲಕ್ಷ್ಯ  ವಹಿಸಿದ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಈ ವೇಳೆ ಯುವತಿ ಕುಟುಂಬಕ್ಕೆ ಸಾಂತ್ವನ  ಹೇಳಿದ ಆಯುಕ್ತರು, ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮೇಯರ್‌ ಅವರೊಂದಿಗೆ ಚರ್ಚೆ ಮಾಡಿ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Advertisement

ಜನರ ಪರದಾಟ: ನಗರದಲ್ಲಿ ರಾತ್ರಿ 7 ಗಂಟೆ ನಂತರ ಸಂಚಾರ ಮಾಡದಂತೆ ನಿರ್ಬಂಧ ಇರುವುದಕ್ಕೂ ಅದೇ ಸಮಯದಲ್ಲಿ ನಗರದ ಹಲವೆಡೆ ಮಳೆ ಬಿದ್ದ ಹಿನ್ನೆಲೆಯಲ್ಲಿ ಜನ ಪರದಾಡುವಂತಾಯಿತು. ಗುಡುಗು, ಮಿಂಚು ಸಹಿತ ಮಳೆ  ಸುರಿದ ಮಳೆಗೆ ನಗರದ ಹಲವು ಭಾಗದಲ್ಲಿ ಮರದ ರೆಂಬೆ, ಕೊಂಬೆಗಳು ಧರೆಗುರುಳಿದವು. ಮಳೆಯಿಂದಾಗಿ ನಗರದ ಪ್ರಮುಖ ಜಂಕ್ಷನ್‌, ಅಂಡರ್‌ ಪಾಸ್‌, ಫ್ಲೆಓವರ್‌ಗಳಲ್ಲಿ ನೀರು ನಿಂತಿದ್ದರಿಂದ ಸವಾರರು ಹರಸಾಹಸ  ಪಡಬೇಕಾಯಿತು.

ಇನ್ನು ಮಳೆಯಿಂದ ತಿಪ್ಪಸಂದ್ರ ಮಾರುಕಟ್ಟೆ 4, ಇಂದಿರಾನಗರ ಹಾಗೂ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ತಲಾ 2, ಗಿರಿನಗರ, ರಾಜಾಜಿನಗರ, ಚಾಮರಾಜಪೇಟೆ, ಯಶವಂತಪುರ, ಮಹಾಲಕ್ಷಿಲೇಔಟ್‌, ಸದಾಶಿವನಗರ,  ಜೆ.ಪಿ.ನಗರ, ಸಿ.ವಿ.ರಾಮನ್‌ನಗರ, ಬಿಟಿಎಂ ಲೇಔಟ್‌ ಸೇರಿ ಹಲವು ಭಾಗದಲ್ಲಿ ಮರಗಳು ಬಿದ್ದಿವೆ. ಆದರೆ, ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next