ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಮುಂಜಾನೆ ಹಾಗೂ ಮಂಗಳವಾರ ದಿನವಿಡೀ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ನಿರಂತರ ಮಳೆಯಿಂದ ಮೈಸೂರಿನಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ಸುಮಾರು 30.10 ಮಿಮೀ ಮಳೆ ಸುರಿದು ದಾಖಲೆ ಸೃಷ್ಠಿಸಿದೆ.
ಮೈಸೂರಿನ ಗಾಂಧಿ ನಗರದ ಲಿಡ್ಕರ್ ಕಾಲೋನಿ ನಿವಾಸಿ ಮದಂಧರ್ ಅಲಿಯಾಸ್ ಮಗ್ಗಿ(42) ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನಿದ್ರೆಗೆ ಜಾರಿದ್ದಾರೆ. ಈ ವೇಳೆ ಸುರಿದ ಭಾರಿ ಮಳೆಯಿಂದಾಗಿ ಚರಂಡಿ ನೀರು ನುಗ್ಗಿ ಮೊಹಿನ್ ಮನೆ ಜಲಾವೃತಗೊಂಡಿದೆ. ಗೋಡೆ ಶಿಥಿಲಗೊಂಡು ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ಮದಂಧರ್ ಮೃತಪಟ್ಟಿದ್ದಾರೆ. ಮೈಸೂರು, ಮಂಡ್ಯ, ಎಚ್.ಡಿ.ಕೋಟೆ, ನಂಜನಗೂಡು, ಹುಣಸೂರು ತಾಲೂಕುಗಳಲ್ಲೂ ಭಾರಿ ಮಳೆ ಕಾರಣ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ತಡವಾಗಿ ಆಚರಿಸಲಾಯಿತು.
ಮೈಸೂರು ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆ ಯಿಂದಾಗಿ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು- ಊಟಿ ಹೆದ್ದಾರಿಯ ಅರಮನೆ ಮುಂಭಾಗದ ರಸ್ತೆ ಬದಿಗಳಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಸ್ಲಾಬ್‌ಗಳು ಕಿತ್ತು ಬಿದ್ದಿವೆ. ತಿ.ನರಸೀಪುರ ತಾಲೂಕಿನಲ್ಲಿ ಮೋಡಕವಿದ ವಾತಾವರಣವಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಮಧ್ಯಾಹ್ನ 3ಗಂಟೆಯಿಂದಲೇ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ರಾವಂದೂರು ಹೋಬಳಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ತುಂಬಿ ಹರಿದ ಲೋಕಪಾವನಿ: ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ನೀರು ತುಂಬಿ
ಜಮೀನುಗಳಲ್ಲಿ ನೀರು ಹರಿದಿದೆ. ಬತ್ತಿ ಹೋಗಿದ್ದ ಶ್ರೀರಂಗಪಟ್ಟಣದ ಲೋಕಪಾವನಿ ನದಿ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹರ್ಷ ಮನೆಮಾಡಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ, ಗದಗ, ಹುಬ್ಬಳ್ಳಿಯಲ್ಲಿ ಮಂಗಳವಾರ ಮಳೆಯಾಗಿದೆ.