ಚಿಕ್ಕೋಡಿ: ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಸುರಿಯುತ್ತಿದೆ. ಗುರುವಾರ ರಾತ್ರಿ ಮತ್ತೆ ಭಾರಿ ಮಳೆ ಸುರಿದಿದ್ದು, ಕೃಷ್ಣಾ ಮತ್ತು ದೂಧಗಂಗಾ ನದಿಗೆ 2 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಪ್ರಸಕ್ತ ವರ್ಷ ಮತ್ತೆ ಪ್ರವಾಹ ಎದುರಾಗುವ ಭೀತಿ ಆವರಿಸಿದೆ.
ಕಳೆದ 2019 ಮತ್ತು 2021 ರಲ್ಲಿ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಎದುರಾಗಿ ನೂರಾರು ಹಳ್ಳಿಗಳು ಜಲಾವೃತಗೊಂಡು ಸಂಕಷ್ಟ ಎದುರಿಸಿದ್ದವು. ಈಗ ಮತ್ತೇ ಅದೇ ಪರಿಸ್ಥಿತಿ ಎದುರಾಗುವ ಲಕ್ಷಣ ಗೋಚರಿಸುತ್ತಿದೆ.
ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಡದಲ್ಲಿ ದಿನದಿಂದ ದಿನಕ್ಕೆ ಏರಿಕೆ ಪ್ರಮಾಣ ಅಧಿಕಗೊಂಡಿದೆ. ಈಗಾಗಲೇ ಕೃಷ್ಣಾ ನದಿ ಒಡಲು ದಾಟಿ ಹರಿಯುತ್ತಿದೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಶ್ರಾವಣ ಮಾಸದಲ್ಲಿ ಮತ್ತೆ ಜನರನ್ನು ಸಂಕಷ್ಟಕ್ಕೆ ದೂಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆಯೇ? ಎಂಬುದು ನದಿ ಪಕ್ಕದಲ್ಲಿ ನೆಲೆಸಿರುವ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಮಹಾಬಳೇಶ್ವರ ಭಾಗದಲ್ಲಿ 297 ಮಿಮೀ. ನವಜಾ 128 ಮಿಮೀ ಹಾಗೂ ಕೋಯ್ನಾ ಭಾಗದಲ್ಲಿ 200 ಮಿಮೀ ಮಳೆಯಾಗಿದೆ.
ಈಗಾಗಲೇ ಕೃಷ್ಣಾ ನದಿಗೆ 1.76 ಲಕ್ಷ ಕ್ಯುಸೆಕ್, ದೂಧಗಂಗಾ ನದಿಗೆ 32 ಸಾವಿರ ಕ್ಯುಸೆಕ್ ಹೀಗೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 2.8 ಲಕ್ಷ ಕ್ಯುಸೆಕ್ ನೀರು ಹರಿದು ಆಲಮಟ್ಟಿಗೆ ಹೋಗುತ್ತಿದೆ.