ಬೆಂಗಳೂರು: ರಾಜ್ಯದಲ್ಲಿ ಮಂಗಳವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ತಾಯಿ-ಮಗಳು ಮತ್ತು ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಹಾಗೆಯೇ, ಭೂ ಕುಸಿತದಿಂದ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ 6 ಸೇತುವೆಗಳು ಮುಳುಗಡೆಯಾಗಿವೆ.
ಮಲೆನಾಡು ಭಾಗದಲ್ಲಿ ನಿರಂತರ ಮಳೆಗೆ ತುಂಗಾ, ಭದ್ರಾ, ಹೇಮಾವತಿ, ವರದಾ, ಕುಮುದ್ವತಿ, ಅಘನಾಶಿನಿ, ಶರಾವತಿ, ಗಂಗಾವಳಿ, ಶರಾಬಿ, ಕಾಳಿ ನದಿಗಳು ಆರ್ಭಟಿಸುತ್ತಿವೆ. ಚಿಕ್ಕಮಗಳೂರು ತಾಲೂಕು ಉಂಡೇದಾಸರಹಳ್ಳಿ ಸಮೀಪ ತುಂಬಿ ಹರಿಯುವ ಹಳ್ಳದಲ್ಲಿ ಚಿಂದಿ ಆಯಲು ಹೋಗಿ 40 ವರ್ಷದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಪಕ್ಕದ ಮನೆಯ ಗೋಡೆ ಕುಸಿದು ತಾಯಿ ರುಕ್ಮಿಣಿ ಮಾಚಕ (37) ಹಾಗೂ ಮಗಳು ಶ್ರೀದೇವಿ ಮಾಚಕ (13) ಮೃತಪಟ್ಟಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ 1.04 ಲಕ್ಷ ಕ್ಯೂಸೆಕ್ ದಾಟಿದೆ. ಇದರ ಪರಿಣಾಮವಾಗಿ ಕರ್ನಾಟಕದ ಗಡಿಯಲ್ಲಿರುವ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನರಸಿಂಹವಾಡಿ ಜಲಾವೃತಗೊಂಡಿದೆ.
ದೂಧಗಂಗಾ, ಪಂಚಗಂಗಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳ ನೀರಿನ ಮಟ್ಟವೂ ಭಾರೀ ಏರಿಕೆಯಾಗಿದೆ. ನಿಪ್ಪಾಣಿ ತಾಲೂಕಿನ ಐದು, ಗೋಕಾಕ-ಶಿಂಗಳಾಪುರ ನಡುವಿನ ಸೇತುವೆ ಮುಳುಗಡೆಯಾಗಿವೆ. ಜಲಾಶಯಗಳು ತುಂಬಿದ್ದು, ನೀರು ಬಿಡುತ್ತಿರುವುದರಿಂದ ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಜು.15ರಿಂದ ಬಿಡುವು ಸಾಧ್ಯತೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಜು. 15ರಿಂದ ಬಿಡುವು ನೀಡುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.