ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹರಿಹರ ಮತ್ತು ಹರಪನಹಳ್ಳಿ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ಹರಿಹರ ಮತ್ತು ಹರಪನಹಳ್ಳಿ ನಡುವಿನ ರಸ್ತೆ ಮಾರ್ಗ ಸಂಪೂರ್ಣ ಬಂದ್ ಆಗಿದೆ.
ಹರುಹರದ ಕಾಳಿದಾಸ ನಗರದಲ್ಲಿ ಮಳೆಯ ನೀರು 40ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ ಜನರು ರಾತ್ರಿಯಿಡೀ ನೀರು ಹೊರ ಹಾಕುವಂತಾಯಿತು. ಗುರುವಾರ ಬೆಳಗ್ಗೆಯೂ ಮಳೆ ಮುಂದುವರಿದಿದ್ದು ಜನರ ಸಂಕಷ್ಟ ಹೆಚ್ಚಿಸಿತು.
ದಾವಣಗೆರೆ ಮತ್ತು ಹಳೆ ಕುಂದುವಾಡ ರಸ್ತೆ ಸಹ ಮಳೆಯ ನೀರಿನಿಂದ ಮುಳುಗಿದ ಪರಿಣಾಮ ಸಂಪರ್ಕ ಕಡಿತವಾಗಿತ್ತು. ಬುಧವಾರ ರಾತ್ರಿಯಿಂದ ಸತತವಾಗಿ ಎಂಟು ಗಂಟೆಗಳ ಕಾಲ ಬಂದ ಮಳೆಯಿಂದ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆಗಳಿಗೆ ಮಳೆಯ ನೀರು ತುಂಬಿದ್ದರಿಂದ ಸಾಕಷ್ಟು ಸಮಸ್ಯೆ ಅನುಭವಿಸುವಂತಾಯಿತು.
ಸಂಸದೆ ಸೂಚನೆ
ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಹಾಗೂ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನಿರ್ದೇಶನ ನೀಡಿದ್ದಾರೆ.
ವಾಯುಭಾರ ಕುಸಿತದಿಂದ ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ಎಡೆಬಿಡದೆ ಮಳೆಯಾಗುತ್ತಿದೆ. ನದಿ ಪಾತ್ರದಲ್ಲಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಸಂಸದರು ಸೂಚನೆ ನೀಡಿದ್ದಾರೆ.
ಮಳೆಯಿಂದ ಮನೆ ಕುಸಿದು ಸಂಕಷ್ಟದಲ್ಲಿರುವ ಜನರ ರಕ್ಷಣೆ ಹಾಗೂ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.