ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ತಾಲೂಕುಗಳು ನಲುಗಿ ಹೋಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
Advertisement
ಸಾವಿರಾರು ಹೇಕ್ಟರ್ ಪ್ರದೇಶದ ಬೆಳೆಗಳು ನೀರು ಪಾಲಾಗಿದ್ದರೆ, ವಿವಿಧ ಸೇತುವೆಗಳ ಮೇಲಿಂದ ನೀರು ಹರಿದಿವೆ. ಮನೆಗಳು ಭಾಗಶಃ ಕುಸಿದು ಜನರ ಬದುಕನ್ನು ಅತಂತ್ರಗೊಳಿಸಿದೆ.
ಹುಲಸೂರು ತಾಲೂಕಿನಲ್ಲಿ 16 ಮಿ.ಮೀ ಮತ್ತು ಕಮಲನಗರ ತಾಲೂಕಿನಲ್ಲಿ 14 ಮಿ.ಮೀ ಮಳೆಯಾಗಿದೆ. ಹುಮನಾಬಾದ, ಚಿಟಗುಪ್ಪ ಮತ್ತು ಭಾಲ್ಕಿ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ಜಮೀನುಗಳಿಗೆ ನೀರು ಜಲಾವೃತಗೊಂಡು ರಾಶಿಗೆ ಬಂದಿದ್ದ ಉದ್ದು, ಹೆಸರು ಬೆಳೆ ಹಾನಿಯಾಗಿದೆ. ಸೋಯಾ ಮತ್ತು ಕಬ್ಬು ಸಹ ನೆಲಸಮ ಗೊಂಡಿದ್ದು, ರೈತರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಜಿಲ್ಲೆಯ ಅನೇಕ ಕೆರೆಗಳು ಅಪಾಯದ ಮಟ್ಟ ಮೀರಿ ತುಂಬಿರುವುದರಿಂದ ಸುತ್ತಲಿನ ಜಮೀನುಗಳಿಗೆ ನೀರು ಆವರಿಸಿ, ಬೆಳೆಗಳಿಗೆ ಧಕ್ಕೆ ತಂದಿದೆ. ಮಾಂಜ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ನದಿ ಪಾತ್ರದ ಜಮೀನುಗಳಲ್ಲೂ ನೀರು ಸಂಗ್ರಹವಾಗಿ ಬೆಳೆಗಳು ಸುಟ್ಟು ಹೋಗಿದ್ದು, ಗ್ರಾಮಸ್ಥರಲ್ಲಿ ಈಗ ನೆರೆ ಆತಂಕ ಶುರುವಾಗಿದೆ.
Related Articles
Advertisement
ಮಳೆಯಿಂದ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮಕ್ಕೆ ಹೆಚ್ಚು ಪರಿಣಾಮ ಬೀರಿದ್ದು, ಸೋಮವಾರ ನಸುಕಿನ ಜಾವ ಗ್ರಾಮದ ಹನುಮಾನ ಮಂದಿರ ಗರ್ಭಗುಡಿ ಗೋಪುರ ಸಮೇತ ಕುಸಿದು ಬಿದ್ದಿದೆ. ಪಕ್ಕದಲ್ಲೇ ಹರಿಯುವ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಳವಾದ್ದರಿಂದ ಗ್ರಾಮಕ್ಕೆ ನೀರು ನುಗ್ಗಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಮೂರು ಕುಟುಂಬಗಳಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಎಣಕೂರ ಗ್ರಾಮದಲ್ಲಿ ಭಾರಿ ಮಳೆಯಿಂದ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು,ಕುಟುಂಬಗಳಿಗೆ ಶಾಲೆಯ ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಲಸೂರು- ಭಾಲ್ಕಿ, ದಾಡಗಿ, ಗೋರಚಿಂಚೋಳಿ ಮತ್ತು ನಿಡೇಬಾನ್ ಸೇತುವೆಗಳ ಮೇಲಿಂದ ನೀರು ಹರಿದು ಕೆಲ ಕಾಲ ಸಂಪರ್ಕ ಕಡಿತಗೊಳ್ಳುವಂತೆ ಮಾಡಿತು. ದಾಬಕಾ ಹೋಬಳಿಯ ಮತಖೇಡ್ ಗ್ರಾಮದಲ್ಲಿ ರಾತ್ರಿ ಸಿಡಿಲು ಬಡಿದು ಬಬ್ರುವಾನ್ ಅವರಿಗೆ ಸೇರಿದ ಎಮ್ಮೆ ಮೃತಪಟ್ಟಿದೆ. ಮಳೆ ನೀರಿನ ರಭಸಕ್ಕೆ ಹುಲಸೂರು-ಔರಾದ ಮಾರ್ಗದ ಜಮಖಂಡಿ ಬಳಿ ರಸ್ತೆ ಕಿತ್ತು ಹೋಗಿ ಅಪಾಯ ಸೃಷ್ಟಿಸಿದೆ. ಬಸವಕಲ್ಯಾಣ ಗೋರ್ಟಾ ಗ್ರಾಮದ ಎಸ್‌ಸಿ ಬಡಾವಣೆಯಲ್ಲಿ ನೀರು ನುಗ್ಗಿದ್ದು, ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ನದಿ ಪಾತ್ರದ ಗ್ರಾಮಸ್ಥರಿಗೆ ಎಚ್ಚರಿಕೆಕಾರಂಜಾ ಜಲಾಶಯ ಮೇಲ್ಭಾಗದ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ಹಾಗಾಗಿ ಜಲಾಶಯ ಗರಿಷ್ಠ ಮಟ್ಟ ತಲುಪುವ ಸಂಭವ ಕಂಡಲ್ಲಿ ತಕ್ಷಣ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗುವುದು ಎಂದು ಕಾರಂಜಾ ವಿಭಾಗದ ಇಇ ತಿಳಿಸಿದ್ದಾರೆ. ಜಲಾಶಯದ ಕೆಳ ಭಾಗದ ಗ್ರಾಮಗಳಿಗೆ ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ. ನದಿ ಕೆಳ ಭಾಗದ ತಳ ಪಾತ್ರದ ಅಕ್ಕ ಪಕ್ಕದ ಜನರು, ಸಾರ್ವಜನಿಕರು ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ಒಡೆಯುವುದಾಗಲಿ, ಈಜುವುದಾಗಲಿ, ದನ ಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಸಂರಕ್ಷಿಸಿಕೊಳ್ಳಲು ಮುಂಜಾಗ್ರತೆ ವಹಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.