ಬೆಂಗಳೂರು: ಬಿರು ಬೇಸಗೆಯಿಂದ ಕಂಗಾಲಾಗಿದ್ದ ಸಿಲಿಕಾನ್ ಸಿಟಿಯ ಹಲವೆಡೆ ಶುಕ್ರವಾರ ಮಧ್ಯಾಹ್ನವೇ ಭಾರೀ ಮಳೆ ಸುರಿದಿದೆ. ಕೆಲವೆಡೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಸೆಕೆಯಿಂದ ಕಂಗಾಲಾಗಿದ್ದ ಜನರು ದಿನವಿಡೀ ಮೋಡ ಕವಿದ ವಾತಾವರಣ ಮತ್ತು ಮಳೆ ಸುರಿದ ಬಳಿಕ ತಂಪಿನ ಅನುಭವವನ್ನು ಆನಂದಿಸಿದ್ದಾರೆ. ಗುರುವಾರ ರಾತ್ರಿಯೂ ಕೆಲವೆಡೆ ಮಳೆ ಸುರಿದಿತ್ತು.
162 ದಿನಗಳ ಬಳಿಕ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದ್ದು ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದೆ. ಯಲಹಂಕ ಭಾಗದಲ್ಲಿ ಬಲವಾದ ಗಾಳಿ ಸಮೇತ ಮಳೆಯಾದ ಬಗ್ಗೆ ವರದಿಯಾಗಿದೆ. ಹೊಸಕೋಟೆ ಭಾಗದಲ್ಲೂ ಮಳೆಯಾಗಿದ್ದು ಸಿಡಿಲಿನ ಅಬ್ಬರವೂ ಜೋರಾಗಿತ್ತು ಎಂದು ವರದಿಯಾಗಿದೆ. ನವೆಂಬರ್ 23 ರಂದು ನಗರದಲ್ಲಿ ಕೊನೆಯ ಮಳೆ ಸುರಿದಿತ್ತು.
ಮುಂದಿನ ನಾಲ್ಕು ದಿನಗಳಲ್ಲಿ ಬೆಂಗಳೂರು ನಗರ ಸೇರಿ ಸುತ್ತಮುತ್ತ ಗುಡುಗು ಸಹಿತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಬಿರು ಬೇಸಗೆಯಿಂದ ಬಳಲಿದ್ದ ಬೆಂಗಳೂರಿನ ಜನರಿಗೆ ಕೊಂಚ ಆರಾಮ ನೀಡುವ ಸಾಧ್ಯತೆ ಇದೆ.
ಮೊದಲ ಮಳೆ ಸುರಿದ ವೇಳೆ ಕೊತ್ತನೂರಿನಲ್ಲಿ ವಿದ್ಯುತ್ ಕಂಬ ಮತ್ತು ಮರ ಬಿದ್ದು ಕಾರೊಂದು ಜಖಂ ಗೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ಆರ್ ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು , ಅಭಿಮಾನಿಗಳು ಈಗಾಗಲೇ ಲೆಕ್ಕಾಚಾರ ಶುರುವಿಟ್ಟುಕೊಂಡಿದ್ದಾರೆ.