Advertisement

ಪಾರಂಪರಿಕ ಕಟ್ಟಡಗಳಿಗೆ ಕಂಟಕವಾದ ಮಳೆ

05:19 PM Oct 22, 2022 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶಾಲ ವಾಗಿ ಹರಡಿಕೊಂಡಿರುವ ಪಾರಂಪರಿಕ ಕಟ್ಟಡಗಳಿಗೆ ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯೇ ಕಂಟಕವಾಗಿದ್ದು, ನಗರದಲ್ಲಿನ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬೀಳುವ ಹಂತಕ್ಕೆ ತಲುಪಿವೆ.

Advertisement

ಮೈಸೂರು ರಾಜರ ಆಳ್ವಿಕೆ ಕಾಲದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ನೂರಾರು ಕಟ್ಟಡಗಳಲ್ಲಿ ಈಗಾಗಲೇ ಹಲವು ನಶಿಸಿದ್ದರೆ, ಉಳಿದ ಕಟ್ಟಡಗಳು ಇಂದೋ ಅಥವಾ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈಗಾಗಲೇ ಮೈಸೂರು ಹೃದಯ ಭಾಗದಲ್ಲಿ ಪ್ರಮುಖ ವಾಜ್ಯ ಕೇಂದ್ರವಾಗಿ ಮಾರ್ಪಟ್ಟಿದ್ದ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ಕಟ್ಟಡಗಳು ಕುಸಿದು ಬಿದ್ದಿವೆ. ಇದರ ಜೊತೆಗೆ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆ, ಅಂಬಾ ವಿಲಾಸ ಅರಮನೆ ಕೋಟೆ, ವಾಣಿ ವಿಲಾಸ ಮಾರುಕಟ್ಟೆ, ಅಗ್ನಿಶಾಮಕ ಠಾಣೆಯ ಕಟ್ಟಡ, ಕಾಡಾ ಕಚೇರಿ ಕಟ್ಟಡದ ಕೆಲ ಭಾಗಗಳು ಕುಸಿದು ಬಿದ್ದಿದ್ದವು. ಹೀಗೆ ಕುಸಿದು ಬಿದ್ದ ಪಾರಂಪರಿಕ ಕಟ್ಟಡಗಳ ಪಟ್ಟಿಗೆ 106 ವರ್ಷಗಳಷ್ಟು ಹಳೆಯದಾದ ಮಹಾರಾಣಿ ಮಹಿಳಾ ಕಾಲೇಜು ಕಟ್ಟಡ ಸೇರ್ಪಡೆಯಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿವು: ನಗರದ ವಿವಿಧ ಭಾಗಗಳಲ್ಲಿ ನೂರಾರು ವರ್ಷಗಳಿಂದ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿರುವ ನೂರಾರು ಪಾರಂಪರಿಕ ಕಟ್ಟಡಗಳಲ್ಲಿ ಅಂಬಾವಿಲಾಸ ಅರಮನೆ, ಜಿಲ್ಲಾಧಿಕಾರಿಗಳ ಕಚೇರಿ, ಮಹಾರಾಜ ಕಾಲೇಜು, ದೊಡ್ಡ ಗಡಿಯಾರ, ಪಾಲಿಕೆ ಕಟ್ಟಡ, ಕೆ.ಆರ್‌.ಆಸ್ಪತ್ರೆ, ಕ್ರಾಫ‌ರ್ಡ್‌ ಭವನ, ಮಹಾರಾಣಿ ಜೂನಿಯರ್‌ ಕಾಲೇಜು ಕಟ್ಟಡ, ಸರ್ಕಾರಿ ಅತಿಥಿ ಗೃಹ, ನಗರ ಗ್ರಂಥಾ ಲಯ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ.

ನಿರ್ವಹಣೆ ಕೊರತೆ, ಮಳೆ ಕಂಟಕ: ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳು ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲವಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕುಸಿಯುವ ಹಂತ ತಲುಪಿವೆ. ಕಟ್ಟಡಗಳಿಗೆ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಕಾಲ ಕಾಲಕ್ಕೆ ಪಾರಂಪರಿಕ ಕಟ್ಟಡ ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಬಂದಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಸಂಬಂಧಪಟ್ಟವರು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮಾಡಿದ್ದರಿಂದ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಇತ್ತೀಚಿನ ವರ್ಷಗಲ್ಲಿ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಧಾರಾಕರ ಮಳೆ ಪಾರಂಪರಿಕ ಕಟ್ಟಡಗಳಿಗೆ ಕಂಟಕವಾಗಿದೆ.

ಪ್ರತ್ಯೇಕ ಅನುದಾನ ಇಲ್ಲದಿರುವುದೇ ಸಮಸ್ಯೆಗೆ ಕಾರಣ: ವಿವಿಧ ಇಲಾಖೆ ಹಾಗೂ ಸಾರ್ವಜನಿಕ ಬಳಕೆ ಯಲ್ಲಿರುವ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ಹಣ ಅಗತ್ಯವಿದೆ. ಆದರೆ ಇದಕ್ಕೆ ಪ್ರತ್ಯೇಕ ಅನುದಾನ ಲಭ್ಯವಾಗದೇ ಇರುವುದ ರಿಂದ ಇಲಾಖೆಯವರಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ಕಟ್ಟಡಗಳ ನಿರ್ವಹಣೆ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿಯೇ ಲ್ಯಾನ್ಸ್‌ ಡೌನ್‌, ದೇವರಾಜ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಜಯಲಕ್ಷ್ಮೀ ವಿಲಾಸ ಅರಮನೆ ಕುಸಿದು ಬಿದ್ದಿವೆ. ಚೆಲುವಾಂಬ ವಿಲಾಸ ಅರಮನೆ ಮಾದರಿ: 1918ರಲ್ಲಿ ನಿರ್ಮಾಣವಾಗಿರುವ ಚೆಲುವಾಂಬ ವಿಲಾಸ ಅರಮನೆ ಕೇಂದ್ರ ಸರ್ಕಾರದ ಸಿಎಫ್ ಟಿಆರ್‌ಐ ಸುಪರ್ದಿಯಲ್ಲಿದ್ದು, ಅತ್ಯುತ್ತಮ ನಿರ್ವಹಣೆಯಿಂದ ಇಂದಿಗೂ ಸುಸ್ಥಿತಿಯಲ್ಲಿದೆ. ಅದೇ ರೀತಿ ಅಂಚೆ ಇಲಾಖೆ ಸುಪರ್ದಿಯಲ್ಲಿರುವ ಕಾರಂಜಿ ಮ್ಯಾನÒನ್‌ ಹೌಸ್‌ ಸುಸ್ಥಿರವಾಗಿದ್ದು ಈ ಎರಡೂ ಕಟ್ಟಡಗಳ ನಿರ್ವಹಣೆಗೆ ಪ್ರತಿ ತಿಂಗಳು 2ರಿಂದ 3ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಇದೇ ಮಾದರಿಯನ್ನು ಮೈಸೂರಿನ ಉಳಿದ ಕಟ್ಟಡಗಳಿಗೂ ಅಳವಡಿಸಿಕೊಂಡರೆ ಪಾರಂಪರಿಕ ಕಟ್ಟಡಗಳು ಉಳಿಯಲಿವೆ ತಜ್ಞರ ಸಲಹೆಯಾಗಿದೆ.

Advertisement

ಮೈಸೂರು ಪ್ರವಾಸೋದ್ಯಮ ಬೆಳೆಯಬೇಕು. ಅದ್ಧೂರಿಯಾಗಿ ದಸರಾ ಆಚರಿಸಬೇಕು. ಲಾಭ ಮಾಡಿಕೊಳ್ಳಬೇಕು. ಆದರೆ, ಪಾರಂಪರಿಕ ಕಟ್ಟಡಗಳು ಬೇಡ ಎಂದರೆ ಏನರ್ಥ? ಎಲ್ಲ ಕಟ್ಟಡಗಳನ್ನು ಬೀಳಿಸುತ್ತಿದ್ದರೆ ಮೈಸೂರಿನಲ್ಲಿ ಉಳಿಯುವುದೇನು? ದಸರಾಗೆ ಬಂದವರು ಏನು ನೋಡಬೇಕು? ಕಾಲ ಕಾಲಕ್ಕೆ ಸಂರಕ್ಷಣೆ ಮಾಡದಿದ್ದರೆ ಎಲ್ಲ ಕಟ್ಟಡಗಳು ನೆಲಸಮಗೊಳ್ಳುತ್ತವೆ. -ಪ್ರೊ.ಎನ್‌.ಎಸ್‌.ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಂರಕ್ಷಣಾ ಸಮಿತಿ

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next