ತೆಕ್ಕಟ್ಟೆ: ಭಾರೀ ಗಾಳಿ ಮಳೆಗೆ ಕೊರ್ಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಮನೆಗಳ ಮೇಲ್ಛಾವಣೆ ಹಾರಿ ಹೋಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಮೇ 17ರಂದು ಸಂಭವಿಸಿದೆ.
ಮನೆಗುರುಳಿದ ತೆಂಗಿನ ಮರ
ಇಲ್ಲಿನ ಹ್ಯಾರಾಡಿ ಎಂಬಲ್ಲಿ ಹೇಮಾ ಮೊಗವೀರ ಅವರ ಮನೆಯ ಮೇಲೆ ರಾತ್ರಿ ತೆಂಗಿನ ಮರವೊಂದು ಬಿದ್ದು ಮನೆಯ ಮೇಲ್ಛಾವಣಿಗೆ ಹಾಕಲಾದ ಮರದ ಪಕ್ಕಾಸು ಹಾಗೂ ಅಪಾರ ಪ್ರಮಾಣದ ಹೆಂಚುಗಳು ಒಡೆದು ಹೋಗಿವೆ. ಅಲ್ಲದೆ ಮನೆಯ ಟಿವಿ, ಸೋಲಾರ್ ದೀಪ ಹಾಗೂ ಮರ ಟೇಬಲ್ ಗಳಿಗೆ ಹಾನಿಯಾಗಿದ್ದು ಸುಮಾರು 1 ಲಕ್ಷ ರೂ.ಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಮನೆಯ ಸದಸ್ಯ ಸುಜನ್ ಎನ್ನುವವರ ತಲೆಯ ಮೇಲೆ ಒಡೆದ ಹೆಂಚು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತತ್‌ಕ್ಷಣವೇ ಸ್ಥಳೀಯರ ಸಹಕಾರದಿಂದ ತೆಂಗಿನ ಮರವನ್ನು ತೆರವುಗೊಳಿಸಲಾಯಿತು.
ಇಲ್ಲಿನ ಹಿರಿಯರಾದ ಮಿಣ್ಕ ಮೊಗವೀರ ಅವರ ಮನೆ ಮೇಲ್ಛಾವಣಿ ಹಾಗೂ ಮನೆಯ ಗೋಡೆ ಕುಸಿತಗೊಂಡಿದೆ ಹಾಗೂ ಕಟ್ಟಿನಬುಡದ ಮಹಾಬಲ ಕುಲಾಲ ಅವರ ಮನೆಯ ಸ್ನಾನಗೃಹಕ್ಕೆ ಅಳವಡಿಸಿದ ಮೇಲ್ಛಾವಣಿಯ ತಗಡಿನ ಶೀಟ್‌ಗಳು ಹಾರಿಹೋಗಿದೆ.
ಸಂಜೀವ ಮಡಿವಾಳ ಎನ್ನುವವರ ಮನೆಯ ಮೇಲ್ಛಾವಣೆಯ ಶೀಟ್‌ಗಳು ಹಾರಿಹೋಗಿದ್ದು, ಹಲಸಿನ ಮರ ಹಾಗೂ ಸುಮಾರು 4 ಅಡಿಕೆ ಮರಗಳು ತುಂಡಾಗಿ ಧರೆಗುರುಳಿವೆ. ಇಲ್ಲಿನ ಭೋವಿಕಟ್ಟೆ ಸಮೀಪದ ಪ್ರಮುಖ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ತಂತಿಗಳ ಮೇಲೆ ಮರವೊಂದು ಎರಗಿದೆ.
ಹಾರಿಹೋದ ಮೇಲ್ಛಾವಣಿ
ಹೆಸ್ಕಾತ್ತೂರು ಸರಕಾರಿ ಪ್ರಾಥಮಿಕ ಶಾಲಾ ಸಮೀಪದ ಸಾಧು ಪೂಜಾರಿ ಅವರ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು ಸುಮಾರು 70 ಸಾವಿರ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಅವರ ಪುತ್ರಿ ಕುಸುಮಾ ಹಾಗೂ ಮಕ್ಕಳು ವಾಸವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಸರಕಾರಿ ಶಾಲೆಗಳಿಗೆ ಹಾನಿ
ಹೆಸ್ಕಾತ್ತೂರು ಸರಕಾರಿ ಪ್ರೌಢಶಾಲೆಯ ಕಟ್ಟಡದ ಮೊದಲ ಮಹಡಿಯಲ್ಲಿ ಹಾಕಲಾದ ಸಿಮೆಂಟ್ ಶೀಟ್‌ಗಳು ಸಂಪೂರ್ಣ ಹಾನಿಯಾಗಿದ್ದು ಸುಮಾರು 40 ಸಾವಿರ ರೂ.ಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಹೆಸ್ಕಾತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಗ್ರಾಂಥಾಲಯ ಹಳೆಯ ಕಟ್ಟಡದ ಮೇಲ್ಛಾವಣಿಯ ಹೆಂಚುಗಳು ಹಾರಿಹೋಗಿದೆ. ಘಟನಾ ಸ್ಥಳಕ್ಕೆ ಕೊರ್ಗಿ ಗ್ರಾ.ಪಂ. ಪಿಡಿಒ ಸುಧಾಕರ ಶೆಟ್ಟಿ ಗುಡ್ಡಮ್ಮಾಡಿ, ಗ್ರಾ.ಪಂ. ಸದಸ್ಯ ರಾಘವೇಂದ್ರ ಶೆಟ್ಟಿ, ಅಶೋಕ್ ಮೊಗವೀರ, ಗ್ರಾಮ ಸಹಾಯಕ ಭೋಜ, ಸ್ಥಳೀಯರಾದ ಮಂಜುನಾಥ ಕಾಂಚನ್, ರವೀಂದ್ರ ಕುಲಾಲ್ ಹೆಸ್ಕಾತ್ತೂರು, ಶರತ್ ಶೆಟ್ಟಿ, ಅರುಣ್ ಶೆಟ್ಟಿ ಗ್ರಾ.ಪಂ. ಸಿಬಂದಿ ಕೇಶವ ಉಪಸ್ಥಿತರಿದ್ದರು.